ಚಿಂತಾಮಣಿ: ನಗರದ ವೆಂಕಟಗಿರಿಕೋಟೆಯ ನೂರಾನಿ ಮಸೀದಿ ಕಮಿಟಿ ಹಾಗೂ ಸ್ಥಳೀಯ ಯುವಕರು ಮಾದಕ ದ್ರವ್ಯ ಜಾಲದ ವಿರುದ್ಧ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಪ್ರದೇಶದಲ್ಲಿ ಗಾಂಜಾ, ಅಫೀಮು ಹಾಗೂ ವಿವಿಧ ಮಾದಕ ಪದಾರ್ಥಗಳ ಮಾರಾಟ ಮತ್ತು ಬಳಕೆ ತಡೆಯುವ ಉದ್ದೇಶದಿಂದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ.
ಮಾದಕ ಪದಾರ್ಥಗಳ ಮಾರಾಟ ಅಥವಾ ಬಳಕೆಯಲ್ಲಿ ತೊಡಗಿರುವವರನ್ನು ಮಸೀದಿಯಿಂದ ದೂರವಿಡಲಾಗುವುದು. ಅಂತಹವರಿಗೆ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಅಗತ್ಯ ವಿರುವ ಯಾವುದೇ ಅನುಮತಿ ಅಥವಾ ದಾಖಲೆಗಳನ್ನು ನೀಡುವುದಿಲ್ಲ ಎಂದು ಕಮಿಟಿ ತಿಳಿಸಿದೆ.
ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಸಾಮಾಜಿಕವಾಗಿ ದೂರವಿರುವುದರ ಜತೆಗೆ ಪೊಲೀಸರಿಗೆ ಮಾಹಿತಿ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯುವ ಪೀಳಿಗೆಯನ್ನು ಮಾದಕ ವ್ಯಸನದಿಂದ ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ಮಾಧ್ಯಮದವರು ಸಹಕರಿಸುವಂತೆ ಮುಖಂಡರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮುತ್ತವಲ್ಲಿ ಅಬ್ದುಲ್ ಘನಿ, ಅಧ್ಯಕ್ಷ ಸಿ.ಕೆ. ಶಬ್ಬೀರ್, ಇಮಾಮ್ ನಹಿಮ್ ರಜಾ, ಮೊಹಮ್ಮದ್ ಇಸ್ಮಾಯಿಲ್, ದಾದಾಪೀರ್, ನವಾಜ್ ಖಾನ್, ಬಾಬಾ ಟಿ., ವಾಹೀದ್ ಖಾನ್, ಮುಜೀರ್ ಅಹಮ್ಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.