ಚಿಕ್ಕಬಳ್ಳಾಪುರ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್(Pradeep Eshwar) ಅವರು ಪಕ್ಷದ ಮುಖಂಡರು ಹಾಗೂ ನಾಯಕರ ವಿರುದ್ಧ ನಿರಂತರವಾಗಿ ಹೇಳಿಕೆ ನೀಡುತ್ತಿರುವುದನ್ನು ಖಂಡಿಸಿ ರುವ ಯುವ ಕಾಂಗ್ರೆಸ್ ಮುಖಂಡರು, ಕೆಪಿಸಿಸಿ(KPCC) ಕೂಡಲೇ ಅವರನ್ನು ಕರೆಸಿ ಪಕ್ಷದ ಶಿಸ್ತು ಹಾಗೂ ಮುಖಂಡರ ಗೌರವದ ಬಗ್ಗೆ ಬುದ್ಧಿವಾದ ಹೇಳಬೇಕು. ಇಲ್ಲವಾದರೆ ಚಿಕ್ಕಬಳ್ಳಾಪುರದಿಂದ ದೆಹಲಿಯಲ್ಲಿರುವ ರಾಹುಲ್ ಗಾಂಧಿ(Rahul gandhi) ಅವರ ನಿವಾಸದವರೆಗೆ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸೈಕಲ್ ಜಾಥಾ ನಡೆಸಲಾಗುವುದು ಎಂದು ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ(S M Muniyappa) ಅವರ ಪುತ್ರ ಯುವ ಕಾಂಗ್ರೆಸ್ ನ ಎಸ್ ಎಂ ಜಗದೀಶ್ ಎಚ್ಚರಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಬೇರ್ ಅಚ್ಚು, ಎಸ್.ಎಂ. ಜಗದೀಶ್, ಶಂಕರ್, ಮುದಾಸಿರ್ ಶಾಸಕ ಪ್ರದೀಪ್ ಈಶ್ವರ್ ಅವರ ಹೇಳಿಕೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಎಸ್.ಎಂ. ಜಗದೀಶ್, ರಾಜ್ಯದಲ್ಲಿ ಎಂ.ಎಸ್. ಸೀತಾರಾಮ್ ಅವರ ಕುಟುಂಬಕ್ಕೆ ಗೌರವವಿದೆ. ಅವರ ಪುತ್ರ ಹಾಗೂ ಕಳೆದ ಲೋಕಸಭಾ ಚುನಾವಣೆಯ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಏಕವಚನ ದಲ್ಲಿ ಮಾತನಾಡಿರುವುದು ಸರಿಯಲ್ಲ. ರಕ್ಷಾ ರಾಮಯ್ಯ ಕ್ಷೇತ್ರಕ್ಕೆ ಏಕೆ ಬರುತ್ತಾರೆ ಎಂದು ಪ್ರಶ್ನಿಸುವ ಅಧಿಕಾರ ಶಾಸಕರಿಗೆ ಇಲ್ಲ ಎಂದು ಹೇಳಿದರು.
ಮೊದಲು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ಸಂದರ್ಭದಲ್ಲಿ ಪಕ್ಷದ ಪರಾಜಿತ ಅಭ್ಯರ್ಥಿ ಮುಖಂಡರ ಅಭಿಪ್ರಾಯವನ್ನೂ ಪರಿಗಣಿಸಲಾಗುತ್ತದೆ.ರಾಜ್ಯದಲ್ಲಿ ನಡೆಯುತ್ತಿರುವ ಅಗ್ನಿಯ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಗಳಲ್ಲಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವ ಬದಲು ಕಾಂಗ್ರೆಸ್ ಮುಖಂಡರ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಕೆ.ವಿ. ನವೀನ್ ಕಿರಣ್ ಪರವಾಗಿ ನಿಂತು ಮಾಜಿ ಸಚಿವ ಡಾ.ಕೆ. ಸುಧಾಕರ್(Dr K Sudhakar) ವಿರುದ್ಧ ಮಾತನಾಡಿದ್ದೀರಿ. ಬಳಿಕ ಸುಧಾಕರ್ ಪರವಾಗಿ ಪ್ರಚಾರ ನಡೆಸಿ, ನಂತರ ಅವರ ವಿರುದ್ಧವೇ ತಿರುಗಿಬಿದ್ದಿದ್ದೀರಿ.ಇದೀಗ ಕಳೆದ ಚುನಾವಣೆಯಲ್ಲಿ ಬಿ-ಫಾರಂ ದೊರೆಯಲು ಪ್ರಮುಖ ಪಾತ್ರ ವಹಿಸಿದ್ದ ಚಿಂತಾಮಣಿ ಶಾಸಕ ಡಾ.ಎಂ.ಸಿ. ಸುಧಾಕರ್ ವಿರುದ್ಧವೂ ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ಪೋಸ್ಟ್ ಮಾಡಲಾಗುತ್ತಿದೆ ಎಂದು ಜಗದೀಶ್ ಆರೋಪಿಸಿದರು.
ನಿಮ್ಮನ್ನು ನೀವೇ ದೊಡ್ಡ ರಾಜಕಾರಣಿ ಎಂದು ಬಿಂಬಿಸಿಕೊಳ್ಳುವುದನ್ನು ಬಿಟ್ಟು, ನಿಜವಾಗಿಯೂ ಜನಬೆಂಬಲವಿದೆ ಎನ್ನುವುದಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿ ಗೆದ್ದು ತೋರಿಸಿ ಎಂದು ಅವರು ಸವಾಲು ಹಾಕಿದರು.
ಶಾಸಕ ಪ್ರದೀಪ್ ಈಶ್ವರ್ ಅವರ ವರ್ತನೆ ಕುರಿತು ಹಲವು ಬಾರಿ ಕೆಪಿಸಿಸಿಗೆ ದೂರು ನೀಡಿ, ಅವರನ್ನು ತಿದ್ದುವಂತೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಯಕರ್ತರು ಪಕ್ಷದ ಬೆನ್ನೆಲುಬು ಎನ್ನುತ್ತಾರೆ ಆದರೆ ಕಾರ್ಯಕರ್ತರ ನೋವು ಕಾಣಿಸುತ್ತಿಲ್ಲವೆ ಕೂಡಲೇ ಅವರನ್ನು ಕರೆಸಿ ಪಕ್ಷದ ಮುಖಂಡರ ವಿರುದ್ಧ ಹೇಳಿಕೆ ನೀಡದಂತೆ ಸೂಚಿಸಬೇಕು.ಇಲ್ಲವಾದರೆ ಚಿಕ್ಕಬಳ್ಳಾಪುರ ದಿಂದ ದೆಹಲಿಯವರೆಗೆ ಸೈಕಲ್ ಜಾಥಾ ನಡೆಸಲಾಗುವುದು ಎಂದು ಎಚ್ಚರಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಬೇರ್ ಅಚ್ಚು ಮಾತನಾಡಿ, ಕಳೆದ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಅವರ ಗೆಲುವಿಗೆ ಕಾರಣರಾದ ಹಲವು ಮುಖಂಡರ ಬಗ್ಗೆಯೇ ಇದೀಗ ಹೀನಾಯವಾಗಿ ಮಾತನಾಡಲಾಗುತ್ತಿದೆ. ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಖಂಡನೀಯ. ರಕ್ಷಾ ರಾಮಯ್ಯ ಅವರ ತಂದೆ ಸೀತಾರಾಮ್ ಅವರು ಕಳೆದ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಅವರ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಇದೀಗ ಅವರ ಪುತ್ರನ ವಿರುದ್ಧವೇ ವೈಯಕ್ತಿಕವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡರನ್ನೇ ಗುರಿಯಾಗಿಸಿಕೊಂಡು ನಿರಂತರವಾಗಿ ಹೇಳಿಕೆ ನೀಡುತ್ತಿರುವು ದರಿಂದ ಪ್ರದೀಪ್ ಈಶ್ವರ್ ಅವರು ಬಿಜೆಪಿ ‘ಬಿ-ಟೀಂ’ ಆಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಕಾರ್ಯಕರ್ತರಲ್ಲಿ ಮೂಡುತ್ತಿದೆ ಎಂದು ಕುಬೇರ್ ಅಚ್ಚು ಆರೋಪಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಪರಿಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಗಲು-ರಾತ್ರಿ ಶ್ರಮಿಸಿ ಪ್ರದೀಪ್ ಈಶ್ವರ್ ಅವರನ್ನು ಗೆಲ್ಲಿಸಿದ್ದರು. ಆದರೆ ಇಂದು ಅದೇ ಕಾರ್ಯಕರ್ತರ ಬಗ್ಗೆ ತೋರುತ್ತಿರುವ ಧೋರಣೆ ನೋವುಂಟು ಮಾಡಿದೆ ಎಂದು ಹೇಳಿದರು.
ಪಕ್ಷದ ಕೆಲಸ, ಕಾರ್ಯಕರ್ತರ ಸಮಸ್ಯೆಗಳು ಹಾಗೂ ತಮ್ಮ ಅಸಮಾಧಾನಗಳನ್ನು ಚರ್ಚಿಸಲು ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ರಕ್ಷಾ ರಾಮಯ್ಯ ಅವರನ್ನು ಭೇಟಿ ಮಾಡಿದರೆ ಅದನ್ನು ತಪ್ಪಾಗಿ ಬಿಂಬಿಸುವುದು ಸರಿಯಲ್ಲ. ಯಾರನ್ನು ಹೊಗಳುತ್ತಾರೋ ಅವರ ವಿರುದ್ಧವೇ ವಿರೋಧ ವ್ಯಕ್ತಪಡಿಸುವ ಮನಸ್ಥಿತಿ ಪ್ರದೀಪ್ ಈಶ್ವರ್ ಅವರದ್ದು ಎಂದು ಆರೋಪಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಪರವಾಗಿ ಪ್ರದೀಪ್ ಈಶ್ವರ್ ಸಮರ್ಪಕ ವಾಗಿ ಪ್ರಚಾರ ನಡೆಸಲಿಲ್ಲ. ಬದಲಾಗಿ ಅವರಿಗೆ ಹಿನ್ನಡೆಯಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದರು. ಅದೇ ಸಮುದಾಯದ ವ್ಯಕ್ತಿ ಗೆದ್ದರೆ ಏನಾಗುತ್ತದೆ ಎಂಬ ಅಸೂಯೆಯಿಂದ ಈ ರೀತಿಯ ನಡೆ ತೋರಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಕುಬೇರ್ ಅಚ್ಚು ಹೇಳಿದರು.
ಪ್ರತಿಷ್ಠಿತ ಕುಟುಂಬದ ರಕ್ಷಾ ರಾಮಯ್ಯ ಹಾಗೂ ಡಾ.ಎಂ.ಸಿ. ಸುಧಾಕರ್ ಅವರ ವಿರುದ್ಧ ಹೇಳಿಕೆ ನೀಡುತ್ತಿರುವ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೂಡಲೇ ಕರೆಸಿ ಬುದ್ಧಿವಾದ ಹೇಳಬೇಕು. ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಪಕ್ಷದ ಶಿಸ್ತು ಹಾಗೂ ಮುಖಂಡರ ಗೌರವದ ಬಗ್ಗೆ ಶಾಸಕರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಶಂಕರ್, ಮುದಾಸಿರ್, ಶಾಹಿದ್ ಅಬ್ಬಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮುದಾಸೀರ್ ಮಾತನಾಡಿ, ಅಲ್ಪಸಂಖ್ಯಾತ ಮುಖಂಡರು ಚುನಾವಣೆ ಸಂದರ್ಭದಲ್ಲಿ ಮನೆಮನೆಗೆ ತೆರಳಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದಾರೆ. ರಂಜಾನ್ ಉಪವಾಸದ ನಡುವೆಯೂ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಆದರೆ ಚುನಾವಣೆ ಮುನ್ನಾದಿನ ರಾತ್ರಿ ಸಂಪರ್ಕಕ್ಕೆ ಸಿಗದೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿ ದ್ದರು. ಈ ವೇಳೆ ಕಾರ್ಯಕರ್ತರಿಗೆ ಧೈರ್ಯ ಹೇಳಿ ಮತ ಹಾಕಿಸಿದ್ದೇವೆ. ಅಲ್ಪಸಂಖ್ಯಾತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಯುವ ಮುಖಂಡ ಶಂಕರ್ ಮಾತನಾಡಿ, ಶಾಸಕರ ವರ್ತನೆಯಿಂದ ಚಿಕ್ಕಬಳ್ಳಾಪುರದ ಕೀರ್ತಿ ರಾಜ್ಯಮಟ್ಟದಲ್ಲಿ ಹಾಳಾಗುತ್ತಿದೆ ಎಂದು ಆರೋಪಿಸಿದರು.
ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಪಕ್ಷ ದ್ರೋಹಿಗಳಿಗೆ ಮಣೆ ಹಾಕುವುದು ಈತನ ಚಾಳಿ. ತಮ್ಮ ಬಗ್ಗೆ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೀರಿ, ರಕ್ಷಾ ರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ತರವಲ್ಲ. “ಚಿಕ್ಕಬಳ್ಳಾಪುರ ನಿಮ್ಮ ಜಹಗೀರು ಅಲ್ಲ” ಸರ್ವಾಧಿಕಾರಿ ರೀತಿ ಕಂಡುಕೊಂಡವರು ಮೇಲೆ ಮಾತಿನ ದಾಳಿ ಮಾಡುವುದು ನಿಲ್ಲಿಸಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಜೊತೆಗೂಡಿ ಕ್ಷೇತ್ರದಲ್ಲಿ ಸಂಚಾರ ನಡೆಸಿ ಪದವೀಧರರ ಭೇಟಿ ಮಾಡಿ ಮತಯಾಚನೆ ಮಾಡುವ ಬದಲು ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸುವುದೇಕೆ ಎಂದು ಪ್ರಶ್ನಿಸಿದ ಅವರು, ಶಾಸಕರಾಗಿ ಆಯ್ಕೆಯಾದ ಬಳಿಕ ಯಾವ ಸ್ಥಳೀಯ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದೀರಿ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಶಾಸಕರೇ ನೀವು ಚುನಾವಣೆಗೆ ನಿಂತರೆ, ನಿಮ್ಮ ವಿರುದ್ಧ ಸ್ಪರ್ಧಿಸಲು ಸಿದ್ಧ. ಇಬ್ಬರೂ ಸೋತರೂ ಪರವಾಗಿಲ್ಲ, ಆದರೆ ನಿಮ್ಮನ್ನು ಗೆಲ್ಲಲು ಬಿಡುವುದಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಹಬ್ಬಗಳಿಗೆ ಬಾರದವರು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಬಂದು ಗೊಂದಲ ಸೃಷ್ಟಿಸಿ ಹೋಗುತ್ತಾರೆ. ಪರಿಶ್ರಮ ಸಂಸ್ಥೆಯ ಪ್ರಚಾರ ಬೇರೆ, ರಾಜಕೀಯ ಬೇರೆ. ಪಕ್ಷದ ವಿಚಾರದಲ್ಲಿ ತಾಕತ್ತಿದ್ದರೆ ರಕ್ಷಾ ರಾಮಯ್ಯ ಅವರನ್ನು ಎದುರಿಸಿ ಎಂದು ಶಂಕರ್ ಸವಾಲು ಹಾಕಿದರು.
ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮುಖಂಡರು ಮತದಾರರಲ್ಲಿ ಧೈರ್ಯ ತುಂಬಿದ ಬಳಿಕ ಸಮುದಾಯದ ಮತಗಳು ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಗೆ ಬಂದವು. ಆದರೆ ರಂಜಾನ್ ಹಬ್ಬ ಸೇರಿದಂತೆ ಸಮುದಾಯದ ಪ್ರಮುಖ ಸಂದರ್ಭಗಳಲ್ಲಿ ಶಾಸಕರು ಈವರೆಗೆ ಭಾಗವಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.