ಚಿಂತಾಮಣಿ: ಕೈವಾರ ತಾತಯ್ಯನವರು ತಪಸ್ಸನ್ನು ಆಚರಿಸಿ ಪಡೆದ ಜ್ಞಾನವನ್ನು ಮಾನವರಿಗೆ ತತ್ವಬೋಧನೆಯ ರೂಪದಲ್ಲಿ ಧಾರೆಯೆರೆದಿದ್ದಾರೆ. ಮುಂದಿನ ದಿನಗಳಲ್ಲಿ ತಾತಯ್ಯನವರು ಯೋಗಜ್ಞಾನದಲ್ಲಿ ರಚಿಸಿರುವ ಕಾಲಜ್ಞಾನದ ಮಹತ್ವ ಅರಿವಾಗುತ್ತದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.
ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ತಾತಯ್ಯನವರ 191ನೇ ಜೀವ ಸಮಾಧಿ ಪ್ರವೇಶ ಪರ್ವ ಆರಾಧನಾ ಮಹೋತ್ಸವದಲ್ಲಿ ಭಕ್ತರನ್ನು ಉದ್ದೇಶಿಸಿ ಗುರುಸಂದೇಶ ನೀಡುತ್ತಾ ಮಾತನಾಡಿದರು.
ಇದನ್ನೂ ಓದಿ: Chikkaballapur News: ರಸಗೊಬ್ಬರ ಕೊರತೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ರೈತರ ಆಕ್ರೋಶ
ವಿಶ್ವವು ಇಂದು ಭಯಂಕರವಾದ ಅನೇಕ ಗಂಡಾಂತರಗಳನ್ನು ಎದುರಿಸುತ್ತಿದೆ. ರಾಷ್ಟ್ರಗಳ ನಡುವೆ ವೈಷಮ್ಯ, ಭಯಂಕರ ಯುದ್ಧಗಳು ಸಂಭವಿಸುತ್ತಿದೆ. ನೈತಿಕ ಪತನದಿಂದಾಗಿ ಮಾನವರಲ್ಲಿ ಕ್ರೌರ್ಯ, ನಿರ್ದಯೆ ತಾಂಡವವಾಡುತ್ತಿದೆ. ವಿನಾಶದ ಅಂಚಿನಲ್ಲಿರುವ ಈ ವಿಶ್ವವು ಮಾನವ ರೂಪಿನಲ್ಲಿರುವ ದೈತ್ಯದ ದುರ್ಬುದ್ಧಿಯಿಂದ ನಿರ್ಣಾಮವಾಗಿ ಬಿಡುವುದೋ ಎಂಬ ಭೀತಿಯಿಂದ ಇಡೀ ವಿಶ್ವದ ಪ್ರಜೆಗಳು ತಲ್ಲಣಿಸುತ್ತಿದ್ದಾರೆ.
ಸಾಮಾನ್ಯರಿಂದ ಹಿಡಿದು ವಿಶ್ವನಾಯಕರವರೆಗೆ ಆತ್ಮವಲೋಕನ ಮಾಡಿಕೊಳ್ಳಬೇಕಿದೆ. ಪ್ರಸ್ತುತ ಬದುಕಿಗೆ ಮಾನವೀಯತೆಯ ಸ್ಪರ್ಶ ಆಗಬೇಕಿದೆ. ಬದುಕಿನ ಅರ್ಥವನ್ನು ಅರಿತುಕೊಂಡು ಜೀವನ ವನ್ನು ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಮಾನವೀಯತೆಯನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಸಂಭವಿಸಲಿರುವ ವಿನಾಶದ ವಿಪತ್ತನ್ನು ತಪ್ಪಿಸುವ ಮೂಲಕ ಮಾನವರನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಇಂದಿನ ಮಾನವರ ಮೇಲಿದೆ. ಈ ನಿಟ್ಟಿನಲ್ಲಿ ಕೈವಾರ ತಾತಯ್ಯನವರು ರಚಿಸಿರುವ ಕಾಲಜ್ಞಾನವು ಎಚ್ಚರಿಕೆಯ ಗಂಟೆಯಾಗಿದೆ. ಭವಿಷ್ಯದ ಜಾಗೃತಿಗಾಗಿ ಕಾಲಜ್ಞಾನವು ಮಹತ್ವ ದ್ದಾಗಿದೆ ಎಂದರು.
ಆರಾಧನಾ ಮಹೋತ್ಸವದ ಅಂಗವಾಗಿ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಪ್ರಾತ:ಕಾಲದಲ್ಲಿ ಘಂಟಾನಾದ, ಸುಪ್ರಭಾತ, ಗೋಪೂಜೆಯನ್ನು ನೆರವೇರಿಸಲಾಯಿತು. ನಂತರ ದೇವಾಲಯದಿಂದ ಅಲಂಕೃತ ಪಲ್ಲಕ್ಕಿಗಳಲ್ಲಿ ತಾತಯ್ಯನವರನ್ನು ಹಾಗೂ ತಾಳೆಗರಿಗಳನ್ನು ಸಭಾಂಗಣಕ್ಕೆ ಮಂಗಳವಾದ್ಯಗಳು, ಭಜನೆಯ ಮೂಲಕ ಉತ್ಸವದಲ್ಲಿ ಕರೆತರಲಾಯಿತು. ನಂತರ ಸದ್ಗುರು ಯೋಗಿ ನಾರೇಯಣ ತಾತಯ್ಯನವರಿಗೆ ವಿಶೇಷ ಅಭಿಷೇಕ , ಅಷ್ಟಾವಧಾನ ಸೇವೆ, ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಸಾಮೂಹಿಕ ನಾಮ ಸಂಕೀರ್ತನೆಯನ್ನು ನೆರವೇರಿಸಲಾಯಿತು.
ತಾಳೆಗರಿಗಳಿಗೆ ಪೂಜೆ: ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರು ರಚಿಸಿರುವ ತಾಳೆಗರಿ ಗಳನ್ನು ಉತ್ಸವದಲ್ಲಿ ಸಭಾಂಗಣದ ವೇದಿಕೆಗೆ ತಂದು ಪೀಠದಲ್ಲಿ ಇರಿಸಲಾಯಿತು. ತಾತಯ್ಯನವರು ನೀಡಿರುವ ಜ್ಞಾನ ಸಂಪತ್ತಾದ ತಾಳೆಗರಿಗಳನ್ನು ಪೂಜಿಸಲಾಯಿತು.
ಸದ್ಗುರು ತಾತಯ್ಯನವರ 191ನೇ ಜೀವ ಸಮಾಧಿ ಮಹೋತ್ಸವದ ಅಂಗವಾಗಿ 2025-2026ನೇ ಸಾಲಿನ ಮಠದ ಅಭಿವೃದ್ದಿ ಮತ್ತು ವಾರ್ಷಿಕ ಕಾರ್ಯಕ್ರಮಗಳ ವರದಿಯನ್ನು ತಾತಯ್ಯನವರಿಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಸಾಧು ಸತ್ಪುರುಷರಿಗೆ ಕಾಷಾಯ ವಸ್ತ್ರವನ್ನು ವಿತರಿಸಲಾಯಿತು. ಇಡೀ ರಾತ್ರಿ ಆಖಂಡ ಸಂಕೀರ್ತನೆ ಹಮ್ಮಿಕೊಳ್ಳಲಾಗಿತ್ತು.
ಈ ಆರಾಧನಾ ಮಹೋತ್ಸವಕ್ಕೆ ಆಂಧ್ರ, ತಮಿಳುನಾಡು ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ತಂಡೋಪತAಡವಾಗಿ ಭಾಗವಹಿಸಿದ್ದರು. ನಾದಸುಧಾರಸ ವೇದಿಕೆಯಲ್ಲಿ ಹಲವಾರು ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಯೋಗಿನಾರೇಯಣ ಮಠದ ಟ್ರಸ್ಟ್ ನ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ ಸತ್ಯನಾರಾಯಣ್, ಸದಸ್ಯರುಗಳಾದ ಬಾಲಕೃಷ್ಣ ಭಾಗವತರ್, ಕೆ.ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಕೆ.ವಿ.ಸುರೇಶ್, ಕೆ.ಎಂ. ತ್ಯಾಗರಾಜ್, ಕೈವಾರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಪ್ರಸ್ತಾವಿಕ ನುಡಿಗಳನ್ನು ನುಡಿದರು.