ಚಿಂತಾಮಣಿ: ಶಿಕ್ಷಕರು ಕೇವಲ ಪಠ್ಯಪುಸ್ತಕದ ಜ್ಞಾನವನ್ನು ಬೋಧಿಸುವವರಲ್ಲ, ವಿದ್ಯಾರ್ಥಿಗಳ ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಭವಿಷ್ಯವನ್ನು ರೂಪಿಸುವ ಶಿಲ್ಪಿಗಳಾಗಿದ್ದಾರೆ ಎಂದು ಮಾಜಿ ಜಿಲ್ಲಾ ಉಸ್ತುವಾರಿ ಹಾಗೂ ಮಾಜಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್(Dr M C Sudhakar) ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: Dr M C Sudhakar: ಅಂಬೇಡ್ಕರ್ ಭವನ, ಅನುಭವ ಕೇಂದ್ರದಿಂದ ಬಾಬಾಸಾಹೇಬರ ಆದರ್ಶಗಳಿಗೆ ಶಕ್ತಿ: ಡಾ.ಎಂ.ಸಿ.ಸುಧಾಕರ್
ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರ ಮಾತು, ನಡೆ-ನುಡಿ ಹಾಗೂ ಮಾರ್ಗದರ್ಶನ ಮಕ್ಕಳ ವ್ಯಕ್ತಿತ್ವದ ಮೇಲೆ ದೀರ್ಘಕಾಲದ ಪರಿಣಾಮ ಬೀರುತ್ತದೆ.
ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯ ಹಾಗೂ ಆಸಕ್ತಿಯನ್ನು ಗುರುತಿಸಿ, ಅವರಿಗೆ ಉತ್ತಮ ಶಿಕ್ಷಣದ ಜತೆಗೆ ಜೀವನ ಮೌಲ್ಯಗಳನ್ನು ಧಾರೆ ಎರೆಯುವ ಗುರುತರ ಜವಾಬ್ದಾರಿ ಇಂದು ಶಿಕ್ಷಕರ ಮೇಲಿದೆ ಎಂದರು.
ಗುರುಗಳಾದವರು ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಸಮಾನ ದೃಷ್ಟಿಯಿಂದ ಕಾಣಬೇಕು. ಆರ್ಥಿಕ ವಾಗಿ ಅಥವಾ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಅಗತ್ಯ ಪ್ರೋತ್ಸಾಹ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ಸಲಹೆ ನೀಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕ ಗಳಿಸುವುದೇ ಶಿಕ್ಷಣದ ಅಂತಿಮ ಗುರಿಯಾಗ ಬಾರದು. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ವೈಜ್ಞಾನಿಕ ಚಿಂತನೆ, ಮಾನವೀಯತೆ, ಸಂವಿಧಾನದ ಮೌಲ್ಯಗಳು, ಸಾಮಾಜಿಕ ಹೊಣೆಗಾರಿಕೆ ಹಾಗೂ ಆತ್ಮವಿಶ್ವಾಸ ಬೆಳೆಸುವ ಶಿಕ್ಷಣ ಅಗತ್ಯವಾಗಿದೆ. ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಕರು ಕೂಡ ಹೊಸ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸಬೇಕು ಎಂದರು.
ಒಬ್ಬ ಉತ್ತಮ ಶಿಕ್ಷಕ ನೂರಾರು ವಿದ್ಯಾರ್ಥಿಗಳ ಬದುಕಿನಲ್ಲಿ ಬದಲಾವಣೆ ತರಬಲ್ಲರು. ಶಿಕ್ಷಕರು ತಮ್ಮ ವೃತ್ತಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ, ಸಮಾಜ ನಿರ್ಮಾಣದ ಮಹತ್ವದ ಜವಾಬ್ದಾರಿಯೆಂದು ಭಾವಿಸಿ ಕಾರ್ಯನಿರ್ವಹಿಸಬೇಕು. ಉತ್ತಮ ನಾಗರಿಕರನ್ನು ರೂಪಿಸುವ ಮೂಲಕ ದೇಶದ ಭವಿಷ್ಯವನ್ನು ಕಟ್ಟುವ ಮಹತ್ತರ ಕಾರ್ಯ ಶಿಕ್ಷಕರ ಕೈಯಲ್ಲಿದೆ ಎಂದು ಡಾ. ಸುಧಾಕರ್ ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಹಾಗೂ ಗಣ್ಯರು ಉಪಸ್ಥಿತ ರಿದ್ದರು.