ಚಿಕ್ಕಬಳ್ಳಾಪುರ: ಶ್ರೀ ಶರಭಯೋಗೀಂದ್ರರ 307ನೇ ಆರಾಧನಾ ಮಹೋತ್ಸವವು ಮತ್ತು ಬ್ರಹ್ಮ ರಥೋತ್ಸವವು ಕಾಲಜ್ಞಾನಿ ವೀರಬ್ರಹ್ಮೇಂದ್ರಸ್ವಾಮಿಗಳ ಜನಿಸಿದ ಪುಣ್ಯಕ್ಷೇತ್ರ ಶ್ರೀಪಾಪಾಗ್ನಿ ಮಠ ದಲ್ಲಿ ಸಾವಿರಾರು ಭಕ್ತರ ಸಾಕ್ಷಿಯಲ್ಲಿ ಶ್ರದ್ಧಾಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು.
ಆರಾಧನೆ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಧ್ವಜಾರೋಹಣ, ಲಿಂಗಪ್ರತಿಷ್ಠಾಪನೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನದೊಂದಿಗೆ ಕಲಶಪ್ರತಿಷ್ಠಾಪನೆ, ಶ್ರೀಶರಭಯೋಗೀಂದ್ರಸ್ವಾಮಿಗಳ ರುದ್ರಲಿಂಗ ಹಾಗೂ ಅನ್ನಪೂರ್ಣದೇವಿ, ಕಾಶಿ ವಿಶ್ವನಾಥದೇವರಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಬಿಲ್ವಾರ್ಚನೆ, ಅಗ್ನಿ ಪ್ರತಿಷ್ಠಾಪನೆ, ಗಣಪತಿ ಹೋಮ, ನವಗ್ರಹ ಹೋಮಗಳು, ಮೃತ್ಯುಂಜಯ ಹೋಮಗಳು ಸಾಂಗವಾಗಿ ನೆರವೇರಿದವು.
ಚಿಕ್ಕಬಳ್ಳಾಪುರ ಕೋಲಾರ, ಚಿತ್ರದುರ್ಗ, ಬಳ್ಳಾರಿ,ಆಂಧ್ರಪ್ರದೇಶದಿಂದ ಸಹಸ್ರಾರು ಭಕ್ತಾದಿಗಳು ಆರಾಧನಾ ಮಹೋತ್ಸವಕ್ಕೆ ಆಗಮಿಸಿದ್ದರು. ಆಗಮಿಸಿದ್ದ ಭಕ್ತರು ಭಜನೆ ಮಾಡುವ ಮೂಲಕ ದೇವರಿಗೆ ಭಕ್ತಿಯನ್ನು ಸಮರ್ಪಣೆ ಮಾಡಿದರು.ಈ ವೇಳೆ ರಾಮಕೃಷ್ಣಚಾರಿ ದೇವರ ನಾಮಗಳನ್ನು ಹಾಡಿದರು.ಆರಾಧನೆಗೆ ಬಂದಿದ್ದ ಭಕ್ತರಿಗೆ ಅನ್ನಧಾನವನ್ನು ಏರ್ಪಡಿಸಲಾಗಿತ್ತು.
ಇದನ್ನೂ ಓದಿ: Roopa Gururaj Column: ದೇವರ ಅನುಗ್ರಹಕ್ಕೆ ಕೃತಜ್ಞತೆ ಹೇಳಲು ಮರೆತ ಮನುಷ್ಯರು
ಆರಾಧನಾ ಮಹೋತ್ಸವದ ಅಂಗವಾಗಿ ಚಿಕ್ಕಬಳ್ಳಾಪುರ ನಗರದ ಎಲ್ಲಾ ವಿಶ್ವಕರ್ಮ ಜನಾಂಗ ದವರು ತಮ್ಮ ವ್ಯಾಪಾರ ವಹಿವಾಟುಗಳಿಗೆ ವಿರಾಮ ಹೇಳಿ, ಅಂಗಡಿ ಮುಂಗಟ್ಟೆಗಳಿಗೆ ರಜೆ ಹಾಕಿ ದೇವರ ಆರಾಧನೆಯಲ್ಲಿ ಭಾಗಿಯಾಗಿದ್ದರಲ್ಲದೆ, ದೇವರ ರಥೋತ್ಸವದಲ್ಲಿ ಅತ್ಯಂತ ಸಂತೋಷ ದಿಂದ ಕೂಡ ಭಾಗಿಯಾಗಿದ್ದರು.

ಪ್ರಾಚೀನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಚಿಕ್ಕಬಳ್ಳಾಪುರ ತಾಲ್ಲೂಕಿನ ಪಂಚನಂದಿ ಮಹಾ ಪುಣ್ಯ ಕ್ಷೇತ್ರ ಪಾಪಾಗ್ನಿ ಮಠಕ್ಕೆ ರಾಜ್ಯದ ಭಕ್ತಾಧಿಗಳಲ್ಲದೆ, ಆಂಧ್ರ, ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತಗಣವಿದೆ. ಮೈಸೂರು ಮಹಾರಾಜರಿಂದ ಉಂಬಳಿಯಾಗಿ ಭೂಮಿ ಪಡೆದಿ ರುವ ಇತಿಹಾಸ ಪಾಪಾಗ್ನಿ ಶ್ರೀಮಠಕ್ಕೆ ಇದೆ.ಇಲ್ಲಿ ಕಾಶಿ ವಿಶ್ವನಾಥ ಹಾಗೂ ಅನ್ನಪೂರ್ಣದೇವಿ ವಿಶೇಷ ರೂಪದಲ್ಲಿದ್ದು ಶ್ರೀ ಕ್ಷೇತ್ರಕ್ಕೆ ಆಗಮಿಸುವವರಿಗೆ ಆಶೀರ್ವಾದ ನೀಡುತ್ತಾ ಬರಲಾಗಿದೆ ಎನ್ನುವುದು ಇಲ್ಲಿನ ಭಕ್ತರ ಮಾತಾಗಿದೆ.
ಈ ವೇಳೆ ಟ್ರಸ್ಟ್ʼನ ಅಧ್ಯಕ್ಷ ಹೆಂಜಾರಾಚಾರಿ, ಉಪಾಧ್ಯಕ್ಷರಾದ ಸುಭ್ರಹ್ಮಣ್ಯಾಚಾರಿ, ಮಂಜುನಾಥಾ ಚಾರಿ, ಕೃಷ್ಣಾಚಾರಿ, ಬ್ರಹ್ಮಾಚಾರಿ, ಶ್ರೀಕಾಂತಾಚಾರಿ, ಗೌರವಾಧ್ಯಕ್ಷ ರಾಮಕೃಷ್ಣಾಚಾರಿ, ನವೀನ್ ಆಚಾರಿ ಮತ್ತಿತರರು ಇದ್ದರು.