ಗುಡಿಬಂಡೆ: ಸಮಾಜದ ಒಳಿತಿಗಾಗಿ ಶ್ರಮಿಸಿದಂತಹ ಮಹನೀಯರ ಜಯಂತಿಗಳು ಕೇವಲ ಭಾಷಣ ಗಳಿಗೆ ಸೀಮಿತವಾಗಬಾರದು, ಅದರ ಬದಲಿಗೆ ಮಹನೀಯರ ಆದರ್ಶಗಳನ್ನು ಶೇ.50 ರಷ್ಟಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡುವಂತಾಗಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(MLA S N Subbareddy)ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಂಗಳೂರು ಇಂದು ವಿಶ್ವ ಮಟ್ಟದಲ್ಲಿ ಖ್ಯಾತಿ ಬೆಳೆಸಿದೆ. ಲಕ್ಷಾಂತರ ಮಂದಿ ಉದ್ಯೋಗ ಮಾಡುತ್ತಾ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ನಾಡಪ್ರಭು ಕೆಂಪೇಗೌಡರು ಎಂದರೇ ತಪ್ಪಾಗಲಾರದು. ಕೆಂಪೇಗೌಡರು, ತುಂಬಾ ದೂರದೃಷ್ಟಿಯುಳ್ಳ ಮಹನೀಯರು. ಅವರ ದೂರ ದೃಷ್ಟಿಯಿಂದ ಇಂದು ಬೆಂಗಳೂರು ದೊಡ್ಡದಾಗಿ ಬೆಳೆದು ನಿಂತಿದೆ. ಅವರ ಆದರ್ಶಗಳು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ.
ಇನ್ನೂ ಕೆಂಪೇಗೌಡರು ಮಾತ್ರವದಲ್ಲದೇ ಸಮಾಜಕ್ಕಾಗಿ ದುಡಿದಂತಹ ಮಹನೀಯರ ಜಯಂತಿ ಗಳು ಆಚರಣೆಗೆ ಮಾತ್ರ ಸೀಮಿತವಾಗುತ್ತಿದೆ. ಭಾಷಣಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಅದು ಸರಿಯಲ್ಲ. ಮಹನೀಯರ ಜಯಂತಿಗಳು ಆಚರಣೆಗೆ ಮಾತ್ರ ಸೀಮಿತವಾಗದೇ, ಅವರ ಆದರ್ಶ ಗಳನ್ನು ನಾವು ಮೈಗೂಡಿಸಿಕೊಂಡಾಗ ಜಯಂತಿಗೂ ಅರ್ಥ ಬರುತ್ತೆ, ಅವರಿಗೂ ನಿಜವಾದ ಗೌರವ ಕೊಟ್ಟಂತಾಗುತ್ತದೆ ಎಂದರು.
ಇನ್ನೂ ನಾನು ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ ಮಾಡುತ್ತೇನೆ. ಚುನಾವಣೆ ಮುಗಿದ ಬಳಿಕ ನನಗೆ ಎಲ್ಲರೂ ಒಂದೇ, ನಮ್ಮ ಪಾರ್ಟಿ ಅವರ ಪಾರ್ಟಿ ಅಂತಾ ಬೇಧಭಾವ ಮಾಡೊಲ್ಲ. ಜನರ ಸೇವೆಯೇ ನನಗೆ ಮುಖ್ಯ. ಅಭಿವೃದ್ದಿಯ ವಿಚಾರದಲ್ಲಿ ಎಲ್ಲರೂ ಸಹಕಾರ ಕೊಟ್ಟರೇ ಕ್ಷೇತ್ರದ ಅಭಿವೃದ್ದಿ ಸಾಧ್ಯವಾಗುತ್ತದೆ. ಯಾವುದೇ ಪಕ್ಷದವರಾಗಿರಲಿ, ಅಭಿವೃದ್ದಿಯ ವಿಚಾರದಲ್ಲಿ ನನ್ನ ಬಳಿ ಬಂದು ಚರ್ಚಿಸಿ ಅದನ್ನು ಮಾಡುವ ಕೆಲಸ ಮಾಡುತ್ತೇನೆ. ಅಮಾನಿ ಬೈರಸಾಗರ ಕೆರೆ ಬಳಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಯಲ್ಲಿದೆ. ಸೇತುವೆ ಆರಂಭದಲ್ಲಿ ಹಾವಳಿ ಬೈರೇಗೌಡರ ಕಮಾನು ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಮಯದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎನ್.ಸಂಪಂಗಿ ಮಾತನಾಡಿ, ದೂರದೃಷ್ಟಿ ಹೊಂದಿದ್ದ ಕನ್ನಡ ನಾಡಿನ ಮಹಾನ್ ನೇತಾರ ನಾಡಪ್ರಭು ಕೆಂಪೇಗೌಡರು ನೀರಾವರಿ ಯೋಜನೆ ಯ ಪರಿಕಲ್ಪನೆಯೇ ಇಲ್ಲದ ಸಮಯದಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಹತ್ತಾರು ಕರೆಗಳನ್ನು ನಿರ್ಮಿಸುವ ಮೂಲಕ ಕೃಷಿ ಆದಾಯೋತ್ಪನ್ನ ಹೆಚ್ಚಿಸಿದ ಖ್ಯಾತಿ ಕೆಂಪೇಗೌಡರಿಗೆ ಸಲುತ್ತದೆ. ಅವರ ಹಾದಿಯಲ್ಲೇ ಸಿಎಂ ಡಿ.ಕೆ.ಶಿವಕುಮಾರ್ ರವರು ಸಹ ಮುಖ್ಯಮಂತ್ರಿಗಳಾಗಿ ರಾಜ್ಯವನ್ನು ಮತ್ತಷ್ಟು ಅಭಿವೃದ್ದಿ ಮಾಡುತ್ತಾರೆ. ಕೆಂಪೇಗೌಡರ ಹಾದಿಯಲ್ಲೇ ಧೈರ್ಯ ಹಾಗೂ ಹಠವಾದಿ, ಅಭಿವೃದ್ದಿಯ ಹರಿಕಾರ ಡಿ.ಕೆ.ಶಿವಕುಮಾರ್ ರವರು ಎಂದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು.
ಇದೇ ಸಮಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ಗಳನ್ನು ವಿತರಣೆ ಮಾಡಲಾಯಿತು. ಈ ಸಮಯದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ಪಪಂ ಅಧ್ಯಕ್ಷ ವಿಕಾಸ್, ಬೈರೇಗೌಡ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ, ಬಿಇಒ ಕೃಷ್ಣಕುಮಾರಿ, ಪಪಂ ಮುಖ್ಯಾಧಿಕಾರಿ ಆರತಿ, ನ್ಯೂ ವಿಷನ್ ಶಾಲೆಯ ಮುಖ್ಯಸ್ಥೆ ಡಿ.ಎಲ್.ಪರಿಮಳ ಸೇರಿದಂತೆ ಹಲವರು ಹಾಜರಿದ್ದರು.