6 ತಾಲೂಕುಗಳು 24 ಪರೀಕ್ಷಾ ಕೇಂದ್ರಗಳು, ಪ್ರೆಷ್-12053, 131-ಖಾಸಗಿ, 801 ಪುನರಾವರ್ತಿತ ವಿದ್ಯಾರ್ಥಿಗಳ ನೋಂದಣಿ
ಮುನಿರಾಜು.ಎಂ.ಅರಿಕೆರೆ
ಚಿಕ್ಕಬಳ್ಳಾಪುರ: ನಾಳೆ ನಡೆಯಲಿರುವ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಜಿಲ್ಲೆಯ 6 ತಾಲೂಕಿನ 24 ಪರೀಕ್ಷಾ ಕೇಂದ್ರಗಳಲ್ಲಿ 12053-ಹೊಸವಿದ್ಯಾರ್ಥಿಗಳು-,131-ಖಾಸಗಿ ಅಭ್ಯರ್ಥಿಗಳು, 801-ಪುನರಾವರ್ತಿತ, 01-ಫಲಿತಾಂಶ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿ ಒಟ್ಟು-12986 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು ಶನಿವಾರ ಪರೀಕ್ಷೆ ಬರೆಯಲಿದ್ದಾರೆ.
ಫೆ.28ರಿಂದ ಮಾ.17ರವರೆಗೆ ಪರೀಕ್ಷೆ!!
ಫೆ.28 ರಿಂದ ಮಾರ್ಚ್ 17ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಒಟ್ಟು 24 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಚಿಕ್ಕಬಳ್ಳಾಪುರ ತಾಲೂಕಿ ನಲ್ಲಿ- 6 ಬಾಗೇಪಲ್ಲಿ ತಾಲೂಕಿನಲ್ಲಿ-3, ಗೌರಿಬಿದನೂರು ತಾಲೂಕಿನಲ್ಲಿ- 5, ಶಿಡ್ಲಘಟ್ಟ -3, ಗುಡಿಬಂಡೆ -1 ಹಾಗೂ ಚಿಂತಾಮಣಿ ತಾಲೂಕಿನಲ್ಲಿ-6 ಪರೀಕ್ಷಾ ಕೇಂದ್ರ ಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 12,986 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈಗಾ ಗಲೇ ಪ್ರವೇಶ ಪತ್ರಗಳನ್ನು ಆನ್ಲೈನ್ ಮೂಲಕ ಎಲ್ಲ ಕಾಲೇಜುಗಳಿಗೆ ವಿತರಿಸಲಾಗಿದ್ದು ಇವು ವಿದ್ಯಾರ್ಥಿಗಳ ಕೈ-ಸೇರಿವೆ ಎಂಬುದು ಇಲಾಖೆಯ ಸ್ಪಷ್ಟ ಮಾಹಿತಿಯಾಗಿದೆ.
ಇದನ್ನೂ ಓದಿ: 2nd PUC Exam-3 result: ದ್ವಿತೀಯ PUC ಪರೀಕ್ಷೆ-3ರ ಫಲಿತಾಂಶ ಪ್ರಕಟ, ಹೀಗೆ ಚೆಕ್ ಮಾಡಿ
ಅಧೀಕ್ಷರೇ ಹೊಣೆ??
ಜಿಲ್ಲೆಯಲ್ಲಿ 24 ಪರೀಕ್ಷಾ ಕೇಂದ್ರಗಳಿದ್ದು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಸಂಪೂರ್ಣ ಜವಾಬ್ದಾರಿ ಹೊಂದಿದ್ದು ನಿಯಮಗಳಂತೆ ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಪರೀಕ್ಷಾ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಆಸನಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಹಾಗೂ ಆಸನಗಳ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಕಾಲೇಜು ಆವರಣದಲ್ಲಿ ಸ್ಪಷ್ಟವಾಗಿ ಸೂಚನಾ ಫಲಕದಲ್ಲಿ ಪರೀಕ್ಷಾ ದಿನದಂದು ಪ್ರಕಟಿಸುವುದು ಕಡ್ಡಾಯ ಎಂದು ಇಲಾಖೆ ಮತ್ತು ಜಿಲ್ಲಾಡಳಿತ ಈಗಾಲೇ ಸೂಚನೆ ನೀಡಿದೆ ಎನ್ನಲಾಗಿದೆ.
ಉತ್ತಮ ಫಲಿತಾಂಶದ ಭರವಸೆ
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭಕ್ಕೂ ಅರ್ಧಗಂಟೆ ಮೊದಲೇ ಹಾಜರಿರುವುದು ಕಡ್ಡಾಯ. ವಿದ್ಯಾರ್ಥಿಗಳು ಪ್ರವೇಶ ಪತ್ರದಲ್ಲಿನ ಸೂಚನೆಗಳನ್ನು ಓದಿಕೊಂಡು ಪರೀಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮರ್ಪಕವಾದ ಕುಡಿಯುವ ನೀರು,ಶೌಚಾಲಯ,ಆಸನ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತವು ಪರೀಕ್ಷಾ ವಾತಾವರಣಕ್ಕೆ ಪೂರಕವಾದ ಸಕಲ ವ್ಯವಸ್ಥೆಯನ್ನು ಕಲ್ಪಿಸಿದೆ.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಖಾತರಿಪಡಿಸಬೇಕು. ಪರೀಕ್ಷಾ ಕೇಂದ್ರದ ಒಳಗೆ ಪೋಷಕರಿಗೆ ಪ್ರವೇಶ ನಿಷೇಧಿಸಲಾಗಿದೆ.ನಿರ್ಭೀತಿಯಿಂದ ಪರೀಕ್ಷೆಯನ್ನು ಎದುರಿಸಿ ಜಿಲ್ಲೆಗೆ ಉತ್ತಮ ಫಲಿತಾಂಶ ತರಬೇಕು ಎಂಬುದು ಜಿಲ್ಲಾಧಿಕಾರಿಗಳ ಕರೆಯಾಗಿದೆ.
ವದಂತಿಗೆ ಕಿವಿಗೊಡಬೇಡಿ??
ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಇನ್‌ಸ್ಟಾಗ್ರಾಮ್, ವ್ಯಾಟ್ಸಆಫ್ ಅಥವಾ ಸಾಮಾ ಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗಳಂತಹ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಕಿವಿಗೊಡಬಾರದು. ಇಂತಹ ವದಂತಿ ಹರಡಿಸುವವರ ವಿರುದ್ಧವೂ ಕ್ರಮ ಆಗಲಿದೆ ಎಂಬು ದು ಜಿಲ್ಲಾಡಳಿತದ ಎಚ್ಚರಿಕೆ. ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳು ಸಕಲ ಭದ್ರತೆಯಲ್ಲಿ ಜವಾಬ್ದಾರಿಯುತ ಅಧಿಕಾರಿಗಳ ಸುಪರ್ಧಿಯಲ್ಲಿ ಇರುವುದರಿಂದ ಆಯಾ ಅಧಿಕಾರಿಗಳು ಹೆಚ್ಚಿನ ಜಾಗೃತೆ ವಹಿಸಲು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನುವುದು ಪರೀಕ್ಷೆಗೆ ನೇಮಕವಾದ ಅಧಿಕಾರಿಗಳ ಮಾತು.
ಇವುಗಳನ್ನು ಮಾಡಬಾರದು!!
ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಸ್ಮಾರ್ಟ್ ವಾಚ್, ಬ್ಲೂಟೂತ್ ಸಾಧನಗಳನ್ನು ತೆಗೆದುಕೊಂಡು ಹೋಗಬಾರದು. ವಿದ್ಯಾರ್ಥಿಗಳಾಗಲಿ, ಸಿಬ್ಬಂದಿಯಾಗಲಿ ಮೊಬೈಲ್ ಬಳಕೆಗೆ, ಫೋಟೋಗ್ರಾಫಿಗೆ ಸಂಪೂರ್ಣ ನಿಷೇಧಿಸಲಾಗಿದೆ. ಪೋಷಕರಿಗೆ ಪರೀಕ್ಷಾ ಕೇಂದ್ರ ಗಳ ಪ್ರವೇಶಕ್ಕೂ ನಿಷೇಧ ಹೇರಲಾಗಿದೆ.
ಭದ್ರತೆಗೆ ಆದ್ಯತೆ
ಸುಸೂತ್ರವಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ ಜಿಲ್ಲಾಡಳಿತವು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಪ್ರಶ್ನೆ ಪತ್ರಿಕೆ ಇಟ್ಟಿರುವ ಖಜಾನೆ ಇಲಾಖೆ, ಸಂಬಂಧಿಸಿದ ಇಲಾಖೆಗಳ ಸಹಕಾರವನ್ನು ಕೂಡ ಪಡೆಯಲಾಗಿದೆ.ಅದರಂತೆ ಪರೀಕ್ಷೆಗೆ ಸಂಬಂಧಿಸಿದ ಗೌಪ್ಯ ವಸ್ತುಗಳನ್ನು ನಿಯಮಾನು ಸಾರ ಠೇವಣಿ ಇರಿಸಿ ಸೂಚಿತ ನಿರ್ದೇಶನದಂತೆ ಖಜಾನಾಧಿಕಾರಿಗಳು ವಿತರಿಸಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಿಂದ ಉತ್ತರ ಪತ್ರಿಕೆಗಳನ್ನು ಪರೀಕ್ಷೆ ಮುಗಿದ ನಂತರ ನೇರವಾಗಿ ಅಂಚೆ ಕಚೇರಿಗೆ ಪೊಲೀಸ್ ಬೆಂಗಾವಲಿನಲ್ಲಿ ತಲುಪಿಸುವ ವ್ಯವಸ್ಥೆಯಾಗಿದೆ. ಪರೀಕ್ಷಾ ಕೇಂದ್ರಗಳ ಹೊರಗೆ ಜನಸಂದಣಿ ಇರದಂತೆ ಜನಸಂದಣಿ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.
ಒಟ್ಟಾರೆ ಶನಿವಾರ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ 1ರ ಪಾವಿತ್ರ್ಯತೆ ಕಾಪಾಡಿ ಕೊಂಡು 2026ನೇ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಗಳನ್ನು ಮಾಡಿಕೊಂಡಿದೆ. ಎರಡೆರಡು ಬಾರಿ ಪೂರ್ವಸಿದ್ದತಾ ಪರೀಕ್ಷೆಗಳನ್ನು ನಡೆಸ ಲಾಗಿದ್ದು ಇದರಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿದ್ದಾರೆ. ಹೀಗಾಗಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ, ಉತ್ತಮ ಫಲಿತಾಂಶದೊಂದಿಗೆ ಜಿಲ್ಲೆಗೆ ಕೀರ್ತಿ ತರಲಿ ಎಂಬುದು ಪತ್ರಿಕೆಯ ಕಳಕಳಿಯಾಗಿದೆ.
ನಿಷೇಧಾಜ್ಞೆ!!
ಪರೀಕ್ಷಾ ಕೊಠಡಿಯೊಳಗೆ ಸಮರ್ಪಕ ಬೆಳಕಿನ ವ್ಯವಸ್ಥೆ, ಆಸನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಪರೀಕ್ಷಾ ಕೇಂದ್ರಗಳ ಸುತ್ತ ಸ್ವಚ್ಛತೆ ಪಾಲಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಸಿಸಿಟಿವಿ ವ್ಯವಸ್ಥೆ, ವೆಬ್ ಕಾಸ್ಟಿಂಗ್ ಸರಿಯಾಗಿರಬೇಕು. ಪರೀಕ್ಷಾ ಕೇಂದ್ರದಲ್ಲಿ ನಿರಂತರ ವಿದ್ಯುತ್ ಸೌಲಭ್ಯ ಇರಬೇಕು. ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ತರೆಯದಂತೆ ಸೂಚನೆ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
![]()
ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ, ಧೈರ್ಯದಿಂದ ಪರೀಕ್ಷೆ ಬರೆಯಿರಿ.ಎಲ್ಲರಿಗೂ ಒಳ್ಳೆಯದಾಗಲಿ, ಜಿಲ್ಲೆಯ ಬೋಧಕವರ್ಗ ಉತ್ತಮ ರೀತಿ ಯಲ್ಲಿ ಬೋಧನೆ ಮಾಡಿದ್ದು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಬೇಕಾದ ರೀತಿಯಲ್ಲಿ ಸಜ್ಜು ಗೊಳಿಸಿದ್ದಾರೆ. ಉತ್ತಮ ಫಲಿತಾಂಶ ಬರಲಿದೆ ಎಂಬ ನಿರೀಕ್ಷೆಯಿದೆ.
-ಜಿ.ಪ್ರಭು ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ.
![]()
ವಿದ್ಯಾರ್ಥಿಗಳೇ ಪ್ರಶ್ನೆಪತ್ರಿಕೆ ಪರೀಕ್ಷಾ ಕೇಂದ್ರ ಹೊರತುಪಡಿಸಿ ಬೇರೆಲ್ಲಿಯೂ ದೊರೆಯಲು ಸಾಧ್ಯವಿಲ್ಲ. ನೀವು ಅಲ್ಲಿ ಸಿಕ್ಕಿದೆ, ಇಲ್ಲಿ ಸಿಕ್ಕಿದೆ ಎಂದು ವಿಚಲಿತರಾಗಬಾರದು.ಇದಕ್ಕೆ ಗಮನ ನೀಡಿ ಓದುವುದನ್ನು ಬಿಡಬೇಡಿ. ಈಗಾಗಲೇ ನಾವು ಪರೀಕ್ಷೆಗೆ ಹೇಗೆ ಸಿದ್ಧರಾಗಬೇಕು ಎಂಬುದನ್ನು ಹೇಳಿದ್ದೇವೆ. ಶಾಂತಚಿತ್ತರಾಗಿ ಶುದ್ಧವಾದ ಮನಸ್ಸಿನಿಂದ ಪರೀಕ್ಷೆ ಎದುರಿಸಿ, ಉತ್ತಮ ಫಲಿತಾಂಶದೊಂದಿಗೆ ಜಿಲ್ಲೆಗೆ ಕೀರ್ತಿ ಪೋಷಕರಿಗೆ ಒಳ್ಳೆಯ ಹೆಸರು ತರಬೇಕು. ಎಲ್ಲರಿಗೂ ಒಳ್ಳೆಯದಾಗಲಿ.
ಆದಿಶೇಷರಾವ್ ಉಪನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ.