ಚಿಕ್ಕಬಳ್ಳಾಪುರ: ಮುಂಗಾರು ಹಂಗಾಮಿಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದ್ದು ಜಿಲ್ಲೆ ಯಲ್ಲಿ ರಸಗೊಬ್ಬರದ ದಾಸ್ತಾನು ಸಾಕಷ್ಟಿದೆ. ಗಾಳಿ ಸುದ್ದಿಗಳಿಗೆ ಕಿವಿಕೊಟ್ಟು ರೈತರು ಹೆಚ್ಚಿನ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಮನವಿ ಮಾಡಿದರು.
ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡುತ್ತಾ, ಪೌರ್ವಾತ್ಯ ರಾಷ್ಟ್ರಗಳ ನಡುವಿನ ಯುದ್ದದಿಂದಾಗಿ ರಸಗೊಬ್ಬರ ಪೂರೈಕೆಯಲ್ಲಿ ಅಲ್ಪ ವ್ಯತ್ಯಯ ಆಗಿದ್ದರೂ ಕೂಡ ಜಿಲ್ಲಾಡಳಿತ ತೆಗೆದುಕೊಂಡ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಿಂದ ರಸಗೊಬ್ಬರದ ಕೊರತೆ ಎದುರಾಗಿರುವುದಿಲ್ಲ ಎಂದರು.
ಆತಂಕ ಬೇಡ !!
ಜೂನ್ ಅಂತ್ಯದವರೆಗೆ 6882 ಮೆ.ಟನ್ ಯೂರಿಯಾ ಜಿಲ್ಲೆಗೆ ವಾಸ್ತವ ಬೇಡಿಕೆ ಇದ್ದು ಇದಕ್ಕೆ ಎದುರಾಗಿ 7741 ಮೆ.ಟನ್ ಯೂರಿಯಾವನ್ನು ಜಿಲ್ಲೆಗೆ ತರಿಸಿಕೊಂಡು ಈ ಪೈಕಿ ಈಗಾಗಲೇ 3850 ಮೆ. ಟನ್ ರೈತರಿಗೆ ವಿತರಿಸಲಾಗಿದೆ. ಇನ್ನೂ 3891 ಮೆ.ಟನ್ ಯೂರಿಯಾ ದಾಸ್ತಾನು ಲಭ್ಯವಿರುತ್ತದೆ. ಜೊತೆಗೆ 553 ಮೆ.ಟನ್ ಯೂರಿಯಾವನ್ನು ಕಾಪುದಾಸ್ತಾನು (ಬಫರ್ ಸ್ಟಾಕ್) ಇಡಲಾಗಿದೆ. ಯೂರಿಯಾ ಅಲ್ಲದೆ ಡಿ.ಎ.ಪಿ., ಕಾಂಪ್ಲೆಕ್ಸ್, ಎಂ.ಒ.ಪಿ ಹಾಗೂ ಎಸ್.ಎಸ್.ಪಿ ರಸಗೊಬ್ಬರ ಸೇರಿದಂತೆ ಜಿಲ್ಲೆಯಲ್ಲಿ ಪ್ರಸ್ತುತ 18,087 ಮೆ.ಟನ್ ಗಳಷ್ಟು ರಸಗೊಬ್ಬರಗಳು ಜಿಲ್ಲೆಯಲ್ಲಿ ದಾಸ್ತಾನು ಇರುವು ದರಿಂದ ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಜೂ.27ಕ್ಕೆ ವಿಜೃಂಭಣೆಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ: ಜಿಲ್ಲಾಧಿಕಾರಿ ಜಿ.ಪ್ರಭು
ಅಕ್ರಮ ದಾಸ್ತಾನಿಗೆ ಕಡಿವಾಣ!!
ಜಿಲ್ಲೆಯಲ್ಲಿ ಒಟ್ಟು 451 ರಸಗೊಬ್ಬರ ಅಂಗಡಿಗಳಿದ್ದು ಪ್ರಸ್ತುತ ಸಾಲಿನಲ್ಲಿ ರಸಗೊಬ್ಬರಗಳ ಸಮತೋಲನ ಕಾಪಾಡಲು ಹಾಗೂ ಅವಶ್ಯಕತೆಗಿಂತ ಹೆಚ್ಚಿನ ರಸಗೊಬ್ಬರಗಳನ್ನು ಕೆಲವರು ಬಳಸುತ್ತಿರುವುದನ್ನು ಕಡಿಮೆ ಮಾಡಲು ಯೂರಿಯಾ ರಸಗೊಬ್ಬರ ಖರೀದಿಸಲು ಎಫ್.ಐ.ಡಿ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ. 1 ಎಕರೆಗೆ ಒಂದು ಚೀಲ ಮಾತ್ರ ಯೂರಿಯಾವನ್ನು ವಿತರಿಸಲಾಗುತ್ತಿದೆ. ಯೂರಿಯಾ ಸೇರಿದಂತೆ ಯಾವುದೇ ರೀತಿಯ ರಸಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ ಕೈಗಾರಿಕಾ ಉದ್ದೇಶಕ್ಕೆ ಬಳಕೆ ಮಾಡುವುದು ಕಾನೂನುಬಾಹಿರವಾಗಿದ್ದು ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಜರುಗದಂತೆ ಕಟ್ಟೆಚ್ಚರದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಫ್ರೂಟ್ ಐಡಿ ಬಳಸಿ ವಿತರಣೆಗೆ ಕ್ರಮ !!
ಫ್ರೂಟ್ ಐಡಿ ಆಧಾರದ ಮೇಲೆ ನಿಯಮಾವಳಿಯಂತೆ ರೈತರಿಗೆ ರಸಗೊಬ್ಬರ ವಿತರಣೆ ಮಾಡಬೇಕು. ಮಾರಾಟಗಾರರು ಕೃಷಿ ಇಲಾಖೆ ನೀಡಿರುವ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಕೃಷಿ ಉದ್ದೇಶಕ್ಕಾಗಿ ಖರೀದಿಯಾಗುವ ರಸಗೊಬ್ಬರ ಕೃಷಿ ಚಟುವಟಿಕೆಗಳಿಗೆ ಮಾತ್ರವೇ ಬಳಕೆ ಯಾಗಬೇಕು ಇದನ್ನು ಹೊರತುಪಡಿಸಿ ಅಕ್ರಮವಾಗಿ ಕೈಗಾರಿಕೆ ಉತ್ಪನ್ನಗಳ ತಯಾರಿಗಾಗಿ ಅಥವಾ ಅಕ್ರಮ ಇಂಧನ ತಯಾರಿ ಸೇರಿದಂತೆ ಇತರ ಯಾವುದೇ ಉದ್ದೇಶಕ್ಕಾಗಿ ಯಾವುದೇ ವ್ಯಕ್ತಿ, ಯಾವುದೇ ಸಂಸ್ಥೆ ಅಕ್ರಮ ಬಳಕೆಗೆ ಮುಂದಾದರೆ ಅಂತಹ ಅವರ ಮೇಲೆ ಕಟ್ಟುನಿಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಬಿತ್ತನೆ ಬೀಜ ಮಾರಾಟ !!
ಬೆಳಿಗ್ಗೆ 8 ಗಂಟೆಯಿಂದಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ಅತ್ಯಂತ ಗುಣಮಟ್ಟದ ಬೀಜದಾಸ್ತಾನು ಮಾಡಲಾಗಿದೆ. ರಾಗಿ 5 ಕೆ.ಜಿ.345 ಇದ್ದು ಸಾಮಾನ್ಯ ರೈತರಿಗೆ 90 ರೂಪಾಯಿ ರಿಯಾಯಿತಿ ಇದೆ. ಪಜಾತಿ. ಪಂಗಡಕ್ಕೆ 135 ರಿಯಾಯಿತಿ ಇದೆ. ಒಂದು ಚೀಲಕ್ಕೆ ಮುಸುಕಿನ ಜೋಳ, ನೆಲಗಡಲೆ, ಸೇರಿ ಬಿತ್ತನೆ ಬೀಜಗಳಾದ ರಾಗಿ, ತೊಗರಿ, ನೆಲಗಡಲೆ, ಅಲಸಂದೆ ಮತ್ತು ಮುಸುಕಿನಜೋಳ ಬೆಳೆಗಳ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ರಿಯಾಯ್ತಿ ದರದಲ್ಲಿ ಎಫ್.ಐ.ಡಿ ಹೊಂದಿರುವ ರೈತರಿಗೆ ವಿತರಿಸಲಾಗುತ್ತಿದೆ ಎಂದರು.
ಸಾವಯವ ಕೃಷಿಗೆ ಒತ್ತು ಕೊಡಿ
ರಸಾಯನಿಕಗಳನ್ನು ಬಳಸಿ ಬೇಸಾಯ ಮಾಡುವುದು ಅಪಾಯವನ್ನು ತಂದೊಡ್ಡಿರುವುದನ್ನು ಅರ್ಥ ಮಾಡಿಕೊಂಡು ಜಿಲ್ಲೆಯ ಸ್ವಾವಲಂಬಿ ರೈತರು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿ ಕೊಳ್ಳಲು ಇದು ಸಕಾಲವಾಗಿದ್ದು, ಈ ದಿಸೆಯಲ್ಲಿ ರೈತರು ಮನಸ್ಸು ಮಾಡಬೇಕು ಎಂದರು.
ವಿಮೆ ಕಡ್ಡಾಯ ಮಾಡಿಸಿ
ಈ ವರ್ಷ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆ ಇರುವುದಾಗಿ ಹವಾಮಾನ ಇಲಾಖೆಯು ತಿಳಿಸಿರು ವುದರಿಂದ ಪ್ರತಿಯೊಬ್ಬ ರೈತರೂ ಕೂಡ ತಪ್ಪದೆ ಬೆಳೆ ವಿಮೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸಿಕೊಳ್ಳುವ ಮೂಲಕ ಪ್ರಕೃತಿ ವಿಕೋಪದಿಂದ ಬರುವ ಅನುಕೂಲ ಪಡೆದುಕೊಳ್ಳಬೇಕಿದೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಟಾಸ್ಕ್ ಫೋರ್ಸ್
ಕೃಷಿ ಪರಿಕರಗಳ ಸಮರ್ಪಕ ವಿತರಣೆ ಮತ್ತು ಕಳಪೆ ಹಾಗೂ ನಕಲಿ ರಸಗೊಬ್ಬರ ಬಿತ್ತನೆ ಬೀಜ ಮತ್ತು ಕೀಟನಾಶಕಗಳ ಮಾರಾಟವನ್ನು ತಡೆಗಟ್ಟಲು ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ರಚಿಸ ಲಾಗಿದ್ದು ರೈತರಿಗೆ ಎದುರಾಗುವ ಯಾವುದೇ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದರೆ ಕೂಡಲೇ ಪರಿಹಾರಕ್ಕೆ ಮುಂದಾಗಲಾಗುವುದು. ರೈತರ ಹಿತದೃಷ್ಟಿಯಿಂದ ಕೃಷಿಪರಿಕರಗಳ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳಲು 175 ಬಿತ್ತನೆ ಬೀಜ, 53 ರಸಗೊಬ್ಬರ ಮತ್ತು 61 ಪೀಡೆನಾಶಕಗಳ ಮಾದರಿ ಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.ಇಲ್ಲಿವರೆಗೆ ಯಾವುದೇ ಮಾದರಿಯು ಕಳೆಪೆಯೆಂದು ವರದಿಯಾಗಿಲ್ಲ ಎಂದು ತಿಳಿಸಿದರು.
ಕೃಷಿಯಂತ್ರಧಾರೆ ಬಳಸಿ!!
ಕೃಷಿಯಂತ್ರಧಾರೆ ಯೋಜನೆಯಡಿ ಶ್ರೀಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಸ್ಥೆ ಚಿಕ್ಕಬಳ್ಳಾಪುರ- ಮಂಡಿಕಲ್ಲು, ಗೌರಿಬಿದನೂರು-ಹೊಸೂರು, ಗುಡಿಬಂಡೆ-ಸೋಮೇನಹಳ್ಳಿ, ಶಿಡ್ಲಘಟ್ಟ-ಜಂಗಮ ಕೋಟೆ, ಹೋಬಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.ವರ್ಷ ಸಂಸ್ಥೆಯವರು ಚಿಕ್ಕಬಳ್ಳಾಪುರ ಕಸಬಾ ಹೋಬಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಭೂಮಿ ಸಿದ್ದತೆ, ಅಂತರ ಬೇಸಾಯ, ಉಪಕರಣ ಗಳನ್ನು ರೈತರಿಗೆ ಕಡಿಮೆ ಬೆಲೆಯಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಯಾರಾದರೂ ಜಿಲ್ಲಾಡಳಿತ ನಿಗಧಿಗಿಂತ ಹೆಚ್ಚಿನ ದರಪಡೆದಲ್ಲಿ ಕೂಡಲೇ ದೂರು ನೀಡಿ ಎಂದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಅಬೀದ್, ಉಪನಿರ್ದೇಶಕಿ ದೀಪಶ್ರೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಆರ್.ಮಂಜುನಾಥ ಮುಂತಾದವರು ಇದ್ದರು.