ಚಿಕ್ಕಬಳ್ಳಾಪುರ: ಕತ್ತಲನ್ನು ಕಳೆದು ಬೆಳಕನ್ನು ಹರಡುವ ದೀಪಾವಳಿ ಹಬ್ಬವನ್ನು ಜಿಲ್ಲೆಯಾ ದ್ಯಂತ ಜನರು ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಿದರು. ಮನೆಮನೆಗಳಲ್ಲಿ ದೀಪಗಳ ಬೆಳಕು, ದೇವಾಲಯಗಳಲ್ಲಿ ವಿಶೇಷ ಪೂಜೆ, ಸಿಹಿ ತಿಂಡಿಗಳ ಸವಿ ಹಾಗೂ ಪಟಾಕಿಗಳ ಸದ್ದು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಕುಟುಂಬದ ಸದಸ್ಯರು ಒಟ್ಟಾಗಿ ಸೇರಿ ಹಬ್ಬ ಆಚರಿಸುವ ಮೂಲಕ ಸಂಭ್ರಮ ಹಂಚಿಕೊಂಡರು.
ದೀಪಾವಳಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಮನೆಗಳಲ್ಲಿ ಸ್ವಚ್ಛತೆ, ಅಲಂಕಾರ ಹಾಗೂ ಪೂಜಾ ಸಿದ್ಧತೆಗಳು ನಡೆದವು. ಮನೆಗಳ ಮುಂಭಾಗದಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸಿ, ಬಾಗಿಲುಗಳಿಗೆ ತಳಿರು ತೋರಣ ಕಟ್ಟಿ, ಸಾಲು ಸಾಲು ದೀಪಗಳನ್ನು ಬೆಳಗಿಸಲಾಯಿತು. ಸಂಜೆ ವೇಳೆಗೆ ಮನೆಗಳ ಅಂಗಳ, ತುಳಸಿ ಕಟ್ಟೆ ಹಾಗೂ ದೇವರ ಕೋಣೆಗಳಲ್ಲಿ ದೀಪಗಳ ಬೆಳಕು ಕಂಗೊಳಿಸಿತು.
ಇದನ್ನೂ ಓದಿ: Chikkaballapur News: ನ.12ರಂದು ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಹಬ್ಬದ ಅಂಗವಾಗಿ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಭಕ್ತರ ದಂಡೇ ಹರಿದುಬಂದಿತು. ಭಕ್ತರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ತೆರಳಿ ಗಣಪತಿ, ಲಕ್ಷ್ಮೀ ಸೇರಿದಂತೆ ವಿವಿಧ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ನಗರದ ಗಂಗಮ್ಮನಗುಡಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದಿದ್ದು, ದೇವರಿಗೆ ಕಜ್ಜಾಯ ಸಮರ್ಪಿಸಿ ನೋಂಪಿ ಪೂಜೆ ನೆರವೇರಿಸಲಾಯಿತು.
ದೀಪಾವಳಿಯ ಸಂಪ್ರದಾಯದಂತೆ ಮಹಿಳೆಯರು ನೋಂಪಿ ಆಚರಿಸಿ ಕೈಗೆ ನೋಮದಾರ ಕಟ್ಟಿ ಕೊಂಡರು. ಪರಸ್ಪರ ಕಜ್ಜಾಯ ಹಾಗೂ ಸಿಹಿ ತಿಂಡಿಗಳನ್ನು ಹಂಚಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲಿ ವಿವಿಧ ಬಗೆಯ ಸಿಹಿ ಮತ್ತು ಖಾರದ ತಿಂಡಿಗಳನ್ನು ತಯಾರಿಸಿ ಬಂಧುಮಿತ್ರರಿಗೆ ಹಂಚುವ ಮೂಲಕ ಸಂಭ್ರಮಿಸಿದರು.
ಇನ್ನು ಮಕ್ಕಳು ಹಾಗೂ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಿಲ್ಲಾ ಕೇಂದ್ರದ ಅಗಲಗುರ್ಕಿ ಸಮೀಪದ ಪಟಾಕಿ ಮಳಿಗೆಗಳಲ್ಲಿ ಜನರು ಉತ್ಸಾಹದಿಂದ ಖರೀದಿ ನಡೆಸಿದ್ದು, ಸಂಜೆ ವೇಳೆ ಗಲ್ಲಿ ಗಲ್ಲಿಗಳಲ್ಲಿ ಪಟಾಕಿಗಳ ಸದ್ದು ಮೊಳಗಿತು. ಹೊಸ ಬಟ್ಟೆ ಧರಿಸಿದ ಮಕ್ಕಳು ಹಿರಿಯರಿಂದ ಆಶೀರ್ವಾದ ಪಡೆದು ಹಬ್ಬದ ಸಂತಸದಲ್ಲಿ ಮಿಂದೆದ್ದರು.
ಒಟ್ಟಾರೆ ಜಿಲ್ಲೆಯಾದ್ಯಂತ ಧಾರ್ಮಿಕ ಶ್ರದ್ಧೆ, ಕುಟುಂಬದ ಒಗ್ಗಟ್ಟು, ಸಂಪ್ರದಾಯ ಹಾಗೂ ಬೆಳಕಿನ ಸೊಬಗಿನೊಂದಿಗೆ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿತ್ತು.