ಶಿಡ್ಲಘಟ್ಟ : ಕೃಷಿ ಕ್ಷೇತ್ರದ ಜಿಡಿಪಿ ಕೊಡುಗೆ ಶೇ.16 ಮಾತ್ರ ಇದೆ. ಇದು ನಮ್ಮ ರೈತರ ಇಂದಿನ ಸ್ಥಿತಿ ಯನ್ನು ಸೂಚಿಸುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಕೋಟೆ ಶ್ರೀಸೋಮೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಆಶೀರ್ವಚನ ನೀಡಿದರು.
ಈ ಭಾಗದ ಜಂಗಮಕೋಟೆಯಲ್ಲಿ ಫಲವತ್ತಾದ ಭೂ ಭಾಗದಲ್ಲಿ ಕೈಗಾರಿಕೆ ಪ್ರದೇಶ ಸ್ಥಾಪನೆಗೆ ಚಟುವಟಿಕೆಗಳು ನಡೆಯುತ್ತಿವೆ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಮಠವು ಕೂಡ ಸೂಕ್ಷ್ಮ ವಾಗಿ ಎಲ್ಲವನ್ನೂ ಗಮನಿಸುತ್ತಿದ್ದು ಮಠವು ರೈತರ ಪರ ಇದೆ ಎಂದು ಶ್ರೀಗಳು ರೈತರಿಗೆ ಭರವಸೆ ನೀಡಿದರು.
ದೇಶದಲ್ಲಿ ಶೇ 50ಕ್ಕಿಂತಲೂ ಹೆಚ್ಚು ಮಂದಿ ಕೃಷಿಯ ನಾನಾ ಚಟುವಟಿಕೆ ರೇಷ್ಮೆ, ತೋಟಗಾರಿಕೆ, ಹೈನುಗಾರಿಕೆ ತೊಡಗಿಸಿಕೊಂಡಿದ್ದರೂ ಜಿಡಿಪಿ ದರ ಕೇವಲ 16ರಷ್ಟು ಕೊಡುಗೆ ಇದೆ. ಇದು ಹೆಚ್ಚಾಗ ಬೇಕಿದೆ, ಈದಿಕ್ಕಿನತ್ತ ರೈತಾಪಿಗಳು ರೈತ ಸಂಘದ ಮುಖಂಡರು ಚಿಂತಿಸಬೇಕು ಎಂದರು.
ಇದನ್ನೂ ಓದಿ: Shidlaghatta News: ಶಿಬಿರಗಳಿಂದ ಆರೋಗ್ಯ ಸಮಸ್ಯೆ ಪತ್ತೆ ಜತೆಗೆ ಪರಿಹಾರ ಕಂಡುಕೊಳ್ಳಬಹುದು : ಮನೋಹರ್
ಕನಿಷ್ಠ 30ರಿಂದ 40ರ ವರೆಗೂ ಜಿಡಿಪಿ ಇದ್ದಿದ್ದೇ ಆದಲ್ಲಿ ನಮ್ಮ ರೈತರು ಯಾವ ಸಾಫ್ಟ್ ವೇರ್ ಇಂಜಿನಿಯರ್, ವೈದ್ಯರಿಗಿಂತಲೂ ಕಡಿಮೆ ಇಲ್ಲದಂತೆ ಜೀವನ ನಡೆಸುತ್ತಿದ್ದರು. ನಮ್ಮದು ಕೃಷಿ ಪ್ರಧಾನ ದೇಶವಾದರೂ ಸರಕಾರವು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ರೈತನ ಪರ ನಿಂತರೆ ಮುಂದಿನ 20 ವರ್ಷಗಳಲ್ಲಿ ನಮ್ಮ ದೇಶವು ಜಗತ್ತಿನ ನಂಬರ್ ಒನ್, ಇಲ್ಲವೇ ನಂಬರ್ ಟು ರಾಷ್ಟ್ರವಾಗುವುದು ಖಚಿತ ಎಂದರು.
ರೈತರು ಆಡಂಭರದ ಮದುವೆ, ಸಮಾರಂಭಗಳನ್ನು ಮಾಡದೆ ದುಂಧು ವೆಚ್ಚದ ಹಣವನ್ನು ಉಳಿತಾಯ ಮಾಡಿ ಬದುಕಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಆ ಹಣವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಜತೆಗೆ ಉತ್ತಮ ಸಂಸ್ಕಾರವನ್ನು ಕೂಡ ಕಲಿಸುವ ಜವಾ ಬ್ದಾರಿ ಪೋಷಕರದ್ದು ಉತ್ತಮ ಮಕ್ಕಳೆ ನಮ್ಮ ಹಾಗೂ ಈ ಸಮಾಜದ ಆಸ್ತಿ ಎಂದು ಅವರು ಅಭಿಪ್ರಾಯಪಟ್ಟರು.
ನಾಗರೀಕ ಸಮಾಜದಲ್ಲಿ ಸಂಸ್ಕೃತಿಯು ಇನ್ನೊಂದು ಹಂತಕ್ಕೆ ಹೋಗಬೇಕು, ಮುಂದಿನ ಪೀಳಿಗೆಗೂ ಮುಂದುವರೆಯಬೇಕು, ಶಿಕ್ಷಣವು ನಮ್ಮನ್ನು ಬದಲಾವಣೆಗೆ ಒಳಪಡಿಸಬೇಕು. ಕೃಷಿಕರು ಕೂಡ ಯಾವುದಕ್ಕೂ ಹೊರತಲ್ಲ ಬದಲಾವಣೆಗೆ ಒಳಗಾಗಬೇಕು ಪ್ರಗತಿ ಕಾಣಬೇಕೆಂದರು.
ಕೋಟೆ ಶ್ರೀಸೋಮೇಶ್ವರ ದೇವಾಲಯದ ಜೀರ್ಣೋದ್ಧಾರದ 48ನೇ ದಿನದ ಮಂಡಲ ಪೂಜಾ ಕಾರ್ಯಕ್ಕೂ ಮುನ್ನ ದಿನ ಅವರು ದೇವಾಲಯಕ್ಕೆ ಭೇಟಿ ನೀಡಿ ದೇವಾಲಯದ ಮೇಲಿನ ಕಳಶಕ್ಕೆ ಪೂಜೆ ಸಲ್ಲಿಸಿದರು. ಗರ್ಭಗುಡಿಯಲ್ಲಿ ಮಹಾ ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿದರು.
ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀಮಂಗಳಾನಂದನಾಥಸ್ವಾಮಿ, ಮಾಜಿ ಶಾಸಕ ಎಂ.ರಾಜಣ್ಣ, ತಹಸೀಲ್ದಾರ್ ಎನ್.ಗಗನಸಿಂಧು, ಕೋಟೆ ಶ್ರೀಸೋಮೇಶ್ವರಸ್ವಾಮಿ ದೇವಾ ಲಯ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಡಾಲ್ಫಿನ್ ನಾಗರಾಜ್, ರೂಪಸಿ ರಮೇಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಜೆ.ವಿ.ಸುರೇಶ್, ಚಿಕ್ಕಮುನಿಯಪ್ಪ, ಜೆ.ಎಸ್.ವೆಂಕಟಸ್ವಾಮಿ, ಪುರುಷೋತ್ತಮ, ಎಚ್.ಕೆ.ರಮೇಶ್ ಹಾಗು ಭಕ್ತಾದಿಗಳು ಪಾಲ್ಗೊಂಡಿದ್ದರು.