ಚಿಕ್ಕಬಳ್ಳಾಪುರ : ಗುರುಗಳಾದ ನಾವು ಸಮಾಜ ಸೇವೆಯ ಮಹತ್ವವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳ ಬೇಕು. ಉತ್ತಮ ಶಿಕ್ಷಣವನ್ನು ನೀಡುವ ಶಿಕ್ಷಕರಿಂದ ಮಾತ್ರವೇ ದೇಶದ ಕೀರ್ತಿ ಬೆಳಗಲಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಬಿಜಿಎಸ್ ಆಡಿಟೋರಿಯಂನಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯ ದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ದೇಶಕ್ಕೆ ಆದರ್ಶ ಪ್ರಜೆಗಳನ್ನು ರೂಪಿಸಬೇಕು. ನಮ್ಮ ಬದ್ಧತೆ, ಶ್ರದ್ಧೆ ಮತ್ತು ನಿಸ್ವಾರ್ಥ ಸೇವೆಯ ಮೂಲಕ ದೇಶದ ಉನ್ನತಿ ಮತ್ತು ಪ್ರಗತಿಗೆ ದಾರಿ ತೋರಬೇಕು. ಶಿಕ್ಷಕರಾದ ನಾವು ರಾಷ್ಟ್ರದ ಭವಿಷ್ಯ ನಿರ್ಮಾಣಕರ್ತರು ಎಂಬ ಹೆಮ್ಮೆಯನ್ನು ಸದಾ ಹೃದಯದಲ್ಲಿರಿಸಬೇಕು ಎಂದು ತಿಳಿಸಿದರು.
ಆದಿಚುಂಚುನಗಿರಿ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
“ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ನಮ್ಮ ದೇಶದ ರಾಷ್ಟ್ರಪತಿಯಾಗಿಯೂ ಉಪರಾಷ್ಟ್ರಪತಿ ಯಾಗಿಯೂ ಸೇವೆ ಸಲ್ಲಿಸಿ, ಸಮಾಜಸೇವೆಯಲ್ಲಿ ಅಗಾಧವಾದ ಕೊಡುಗೆ ನೀಡಿದ್ದಾರೆ. ಅವರ ಶಾಶ್ವತ ಪ್ರಯತ್ನಗಳನ್ನು ನಾವು ಯಾವತ್ತೂ ಮರೆಯಬಾರದು, ಸದಾ ಸ್ಮರಿಸಬೇಕು ಎಂದರು.
ಶಿಕ್ಷಕ ವೃತ್ತಿಯಿಂದ ಬಂದವರಿಂದ ದೇಶ ಮತ್ತು ಜಗತ್ತಿನಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಶಿಕ್ಷಕ ವೃತ್ತಿ ಪವಿತ್ರವಾದದ್ದು. ದೇಶ ಕಟ್ಟುವ ಸಾಮರ್ಥ್ಯ ಶಿಕ್ಷಕರಲ್ಲಿದ್ದು, ಉತ್ತಮ ಪ್ರಜೆಗಳನ್ನು ರೂಪಿಸಲು ಮುಂದಾಗಿ ಎಂದು ಕರೆ ನೀಡಿದರು.
ಸರ್ವಪಲ್ಲಿ ಡಾ.ರಾಧಕೃಷ್ಣನ್ ಅವರು ರಷ್ಯಾಗೆ ರಾಯಭಾರಿಯಾಗಿ ಹೋಗಿದ್ದಾಗ ಸ್ಟಾಲಿನ್ ಅವರ ಎದುರು ಮಾನವೀಯತೆ ಬಗ್ಗೆ ಆಡಿದ್ದ ಮಾತು ಅವರ ಮನ:ಪರಿವರ್ತನೆಯಾಗುವಂತೆ ಮಾಡಿತ್ತು. ಅದೇ ರೀತಿ ಶಿಕ್ಷಕರಿಂದಲೇ ಈ ದೇಶ, ಜಗತ್ತಿನಲ್ಲಿ ನಾನಾ ಅದ್ಭುತಗಳು ನಡೆದಿದ್ದು ನೀವು ಅದೇ ದಾರಿಯಲ್ಲಿ ನಡೆಯಬೇಕು ಎಂದು ಕರೆ ನೀಡಿದರು.
ಜಗತ್ತಿನಲ್ಲಿ ಎಲ್ಲರೂ ನನ್ನನ್ನು ರಾಕ್ಷಸರಂತೆ ಕಂಡರು. ಆದರೆ ನೀವೊಬ್ಬರೇ ಮನುಷ್ಯರಂತೆ ಕಂಡಿದ್ದೀರಾ ಎಂದು ಸ್ಟಾಲಿನ್ ಅವರು ರಾಧಕೃಷ್ಣನ್ ಅವರನ್ನು ಹೊಗಳಿದ್ದರು. ಈಗಲೂ ರಷ್ಯಾದ ಜತೆ ಭಾರತಕ್ಕೆ ಒಳ್ಳೆಯ ಸಂಬAಧವಿದೆ ಎಂದರೆ ಅದಕ್ಕೆ ರಾಧಕೃಷ್ಣನ್ ಅವರ ಮಾತುಗಳೇ ಕಾರಣ. ಶಿಕ್ಷಕ ವೃತ್ತಿಯ ರಾಧಕೃಷ್ಣನ್ ಅವರ ಜೀವನ ಪ್ರತಿಯೊಬ್ಬ ಶಿಕ್ಷಕರಿಗೂ ಮಾದರಿಯಾಗಬೇಕು ಎಂದು ಹೇಳಿದರು.
ಉದಾತ್ತ ಚಿಂತನೆಗಳನ್ನು ಕೇಳುವುದಷ್ಟೆ? ಅಲ್ಲ. ಅದಕ್ಕೆ ಅನುಗುಣವಾಗಿ ಜೀವನ ರೂಪಿಸಿಕೊಳ್ಳ ಬೇಕು. ಶಿಕ್ಷಕರು ಉದಾತ್ತ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಮಾದರಿ ಯಾಗಬೇಕು. ಶಿಕ್ಷಕರು ಸರಳತೆಯಿಂದ ಇರುವುದನ್ನು ರೂಢಿಸಿಕೊಳ್ಳಬೇಕು. ವಿಚಲಿತರಾಗದೆ ನಿಮ್ಮ ವೃತ್ತಿಯಲ್ಲಿತೊಡಗಿಸಿಕೊಳ್ಳಿ ಎಂದರು.
ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಮೊಮ್ಮಗ ಹಾಗೂ ಐಐಎಸ್ಸಿ ವಿಜ್ಞಾನಿ, ಪ್ರಾಧ್ಯಾಪಕ ಗೌತಮ ದೇಸಿರಾಜು ಮಾತನಾಡಿ, “ತಾಯಿಭಾಷೆಯು ಎಲ್ಲಾ ಭಾಷೆಗಳ ಮೂಲವಾಗಿದ್ದು, ಪ್ರತಿಯೊಂದು ಜ್ಞಾನಕ್ಕೂ ಇದೇ ಆಧಾರವಾಗಿದೆ. ಸಂಸ್ಕೃತಿ ಶಿಕ್ಷಣಕ್ಕಿಂತಲೂ ಉನ್ನತವಾದದ್ದು. ನಮ್ಮ ದೇಶವು ಇಂದಿಗೆ ಜಗತ್ತಿನ ಅತಿ ಶಕ್ತಿಶಾಲಿ ರಾಷ್ಟ್ರಗಳೊಂದಿಗೆ ಹೆಮ್ಮೆಯಿಂದ ಹೆಜ್ಜೆ ಹಾಕುತ್ತಿದೆ.ಗುರುಗಳಾದ ನಾವು ಶಿಸ್ತುಬದ್ಧರಾಗಿದ್ದು, ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು. ನಮ್ಮ ನಡೆನುಡಿಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು.
ಎಲ್ಲಾ ಸಂದರ್ಭದಲ್ಲೂ ನಮ್ಮ ದೇಶದ ಅಭಿವೃದ್ಧಿ ಮತ್ತು ಪ್ರಗತಿಯತ್ತ ಕೈಜೋಡಿಸಬೇಕೆಂದರು.
ದೇವಭಾಷೆಯಾದ ಸಂಸ್ಕೃತವನ್ನು ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ಕಲಿಯುವಂತಾಗಬೇಕು ಎಂದು ಹೇಳಿದ ಅವರು ಸಂಸ್ಕೃತದ ಶ್ಲೋಕದಲ್ಲಿನ ಮಹತ್ವವನ್ನು ವಿವರಿಸಿದರು.
ವಿಜ್ಞಾನ ಎಷ್ಟೇ ಬೆಳವಣಿಗೆಯಾದರೂ ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯ ಗಳನ್ನು ಮರೆಯಬಾರದು.ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲಾ ವೃತ್ತಿರಂಗದವರನ್ನು ಸೃಷ್ಟಿಸುವ ಶಕ್ತಿ ಶಿಕ್ಷಕ ವೃಂದಕ್ಕೆ ಇದೆ ಆದ್ದರಿಂದ ನಿಮ್ಮ ವೃತ್ತಿರಂಗವನ್ನು ಪ್ರೀತಿಸಿ, ಗೌರವಿಸುವ ಮೂಲಕ ಕಾರ್ಯನಿರ್ವಹಿಸಿ ದೇಶಕ್ಕೆ ಸತ್ಪ್ರಜೆಗಳನ್ನು ರೂಪಿಸಿ. ತಮ್ಮ ತಾತ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವವನ್ನು ನಿರೂಪಿಸುವ ಕಥೆಗಳಾದ ಉಪ ರಾಷ್ಟ್ರಪತಿಗಳಾಗಿದ್ದಾಗ ನಡೆಸಿದ ಜೀವನ ಹಾಗೂ ಮೈಸೂರಿನಿಂದ ಕೋಲ್ಕತ್ತಗೆ ವರ್ಗಾವಣೆ ಆದಾಗ ವಿದ್ಯಾರ್ಥಿಗಳು ತೋರಿದ ಪ್ರೀತಿಯ ಬಗ್ಗೆ ಹೇಳಿದರು.
ಇದೇ ವೇಳೆ ಆದಿಚುಂಚನಗಿರಿ ಶ್ರೀಮಠದ ಪೂಜ್ಯ ಗುರುಗಳ ಪವಿತ್ರ ಸಮಾಜ ಸೇವೆಯನ್ನ ಶ್ಲಾಘಿಸಿದರು. ನಡವಳಿಕೆ ಎಲ್ಲವನ್ನು ಕಲಿಸಬೇಕು.
ಕಾರ್ಯಕ್ರಮದಲ್ಲಿ ಹಾಜರಿದ್ದ ಬಿಜಿಎಸ್ ಸಮೂಹ ಸಂಸ್ಥೆಗಳ ಮುಖ್ಯ ಆಡಳಿತ ಅಧಿಕಾರಿ ಡಾ. ಎನ್ ಶಿವರಾಮರೆಡ್ಡಿ ಮಾತನಾಡಿ ಶಿಕ್ಷಕರೇ ಎಲ್ಲಾ ಕಾರ್ಯಗಳನ್ನು ಮಾಡಿ ಹೊರೆ ಎನಿಸಿಕೊಳ್ಳುವ ಬದಲು ವಿದ್ಯಾರ್ಥಿಗಳನ್ನು ತರಗತಿಗಳಲ್ಲಿ ( ಸೆಮಿನರ್, ಕ್ವಿಜ್, ಪ್ರಶ್ನೆ ಪತ್ರಿಕೆಯ ತಯಾರಿಕೆಯಲ್ಲಿ) ಬಳಸಿಕೊಳ್ಳುವ ಪ್ರಕ್ರಿಯೆ ಮುಂದುವರಿಯಬೇಕು.೧೧ ವರ್ಷದ ಮಗುವಿನವರೆಗೂ ಯಾವ ವಿದ್ಯಾರ್ಥಿಯನ್ನು ದಡ್ಡ ಎಂದು ಪರಿಗಣಿಸದೆ ಕಲಿಕೆಯತ್ತ ಪ್ರೇರೇಪಿಸುವ ಹೊಸ ಪ್ರಯತ್ನ ಮಾಡಬೇಕು .ವಿದ್ಯಾರ್ಥಿಗಳಲ್ಲಿ ಸ್ವಯಂ ಕಲಿಕೆಗೆ ಪ್ರೇರೇಪಿಸುವತ್ತ ಶಿಕ್ಷಕರ ಬೋಧನೆ ಇರಬೇಕು. ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ ಮನೆಗೆಲಸವನ್ನು ನೀಡಿ ಭೌತಿಕ ಕೌಶಲ್ಯ ಬೆಳೆಸಬೇಕು ಎಂದರು.
ಎಸ್‌ಜೆಸಿಐಟಿ ಪ್ರಾಂಶುಪಾಲ ಡಾ.ಜಿ.ಟಿ.ರಾಜು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರನ್ನು ಮಾದರಿಯಾಗಿ ತೆಗೆದುಕೊಳ್ಳುತ್ತಾರೆ. ಹೀಗಾಗಿ ಶಿಕ್ಷಕರು ಒಳ್ಳೆಯ ಗುಣಗಳನ್ನು ರೂಪಿಸಿಕೊಳ್ಳಬೇಕು. ಶಿಕ್ಷಕ ವೃತ್ತಿ ಪವಿತ್ರವಾಗಿದ್ದು ಉದಾತ್ತ ನಡುವಳಿಕೆ ಮೂಲಕ ವಿದ್ಯಾರ್ಥಿಗಳ ಸುಭದ್ರ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ಹಾಗೂ ಅತಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಿಜಿಎಸ್ ಇಂಗ್ಲಿಷ್ ಶಾಲೆ ಹಾಗೂ ಬೆಂಗಳೂರು ಗ್ರಾ. ಜಿಲ್ಲೆಯ ಮೆಳೆಕೋಟೆ ಬಿಜಿಎಸ್ ಶಾಲೆ ಶಿಕ್ಷಕರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠಾಧೀಶ ಶ್ರೀಮಂಗಳನಾಥ ಸ್ವಾಮೀಜಿ, ಡಿಡಿಪಿಐ ರಮೇಶ್, ಕೆಂಪೇಗೌಡ ಪ್ರತಿಷ್ಠಾನದ ಕೃಷ್ಣಪ್ಪ, ಬಿಜಿಎಸ್ ಪಿಯು ಕಾಲೇಜಿನ ಡೀನ್ ಡಾ.ಮಧು ಸೂದನ್, ಅಗಲಗುರ್ಕಿ ಬಿಜಿಎಸ್ ಇಂಗ್ಲಿಷ್ ಶಾಲೆಯ ಮುಖ್ಯಶಿಕ್ಷಕ ಡಿ.ಸಿ.ಮೋಹನ್ ಕುಮಾರ್, ಬಿಜಿಎಸ್ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಹಾಜರಿದ್ದರು.