ಚಿಕ್ಕಬಳ್ಳಾಪುರ: ರಾಮನಗರ ಜಿಲ್ಲೆಯ ಬಿಡದಿ ಸಮೀಪ ಪ್ರಸ್ತಾವಿತ ಟೌನ್‌ಶಿಪ್ ಯೋಜನೆ( Township planning)ಗಾಗಿ ಹೊರಡಿಸಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆ ಯನ್ನು ರಾಜ್ಯ ಸರ್ಕಾರ ಕೂಡಲೇ ರದ್ದುಪಡಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಆಗ್ರಹಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಶುಕ್ರವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ 2013ರ ಭೂಸ್ವಾಧೀನ ಕಾಯ್ದೆಯಲ್ಲಿನ ಸಾಮಾಜಿಕ ಪರಿಣಾಮ ಮೌಲ್ಯಮಾಪನ (ಎಸ್‌ಐಎ) ಹಾಗೂ ಪರಿಸರ ಪರಿಣಾಮ ಮೌಲ್ಯ ಮಾಪನ (ಇಐಎ) ಪ್ರಕ್ರಿಯೆಗಳನ್ನು ತಪ್ಪಿಸಲು ರಾಜ್ಯ ಸರ್ಕಾರ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆಯನ್ನು ಬಳಸಿಕೊಂಡು ಟೌನ್‌ಶಿಪ್ ನಿರ್ಮಾಣಕ್ಕೆ ಮುಂದಾಗಿರುವುದು ಕಾನೂನು ಮತ್ತು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ರೈತರ ತೀವ್ರ ವಿರೋಧದ ನಡುವೆಯೂ ಬಲವಂತವಾಗಿ ಭೂಸ್ವಾಧೀನಕ್ಕೆ ಮುಂದಾದರೆ ಸರ್ಕಾರಕ್ಕೆ ಉಳಿಗಾಲವಿರುವುದಿಲ್ಲ. ಸ್ಮಾರ್ಟ್ ಸಿಟಿ ಮತ್ತು ಇಂಟಿಗ್ರೇಟೆಡ್ ಟೌನ್‌ಶಿಪ್ ಹೆಸರಿನಲ್ಲಿ ಬಿಡದಿ ಭಾಗದ ಹಸಿರು ವಲಯದಲ್ಲಿರುವ ಲಕ್ಷಾಂತರ ಮರಗಳನ್ನು ಕಡಿದು ಪರಿಸರ ನಾಶಕ್ಕೆ ಕಾರಣ ವಾಗುವ ಪ್ರಯತ್ನ ಖಂಡನೀಯ ಎಂದು ಹೇಳಿದರು.
ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಫಲವತ್ತಾದ ಕೃಷಿಭೂಮಿ ವಶಪಡಿಸಿ ಕೊಳ್ಳುವ ಅಂತಿಮ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು. ಮುಂದಿನ ತಿಂಗಳು ಆರಂಭಿಸಲು ಉದ್ದೇಶಿಸಿರುವ 2500ಕ್ಕೂ ಹೆಚ್ಚು ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿ ತಿಂಗಳು ಸುಮಾರು ಆರು ಲಕ್ಷ ಲೀಟರ್ ಹಾಲು ಉತ್ಪಾದಿಸುವ, ರೇಷ್ಮೆ, ತೋಟಗಾರಿಕೆ, ಹೈನು ಗಾರಿಕೆ, ಕೋಳಿ ಸಾಕಾಣಿಕೆ ಹಾಗೂ ಕೃಷಿಯನ್ನು ಅವಲಂಬಿಸಿರುವ ಸಾವಿರಾರು ರೈತ ಕುಟುಂಬಗಳ ಜೀವನೋಪಾಯಕ್ಕೆ ಈ ಯೋಜನೆಯಿಂದ ಭಾರಿ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿ ದರು.
ಯೋಜನೆಯ ಹಿಂದೆ ಅನುಮಾನಗಳಿವೆ: ಪ್ರದೀಪ್ ಕುಮಾರ್
ಜೆಡಿಎಸ್ ರಾಜ್ಯ ಉಸ್ತುವಾರಿ ಎಸ್.ಪಿ. ಪ್ರದೀಪ್ ಕುಮಾರ್ ಮಾತನಾಡಿ, ಗ್ರೇಟರ್ ಬೆಂಗಳೂರು ಯೋಜನೆ(Greater Bangalore Project)ಯಡಿ ನಂದಗುಡಿ, ಸಾತನೂರು, ಬಿಡದಿ ಹಾಗೂ ಸೋಲೂರು ಪ್ರದೇಶಗಳಲ್ಲಿ ನಾಲ್ಕು ಟೌನ್‌ಶಿಪ್‌ಗಳನ್ನು ನಿರ್ಮಿಸುವ ಪ್ರಸ್ತಾವನೆ ಇತ್ತು. ಆದರೆ ಸರ್ಕಾರವು ಬಿಡದಿ ಯೋಜನೆಗೆ ಮಾತ್ರ ಹೆಚ್ಚಿನ ಆಸಕ್ತಿ ತೋರು ತ್ತಿರುವುದು ಹಲವು ಅನುಮಾನ ಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಸರ್ಕಾರದ ಬಳಿ ಹಣವಿಲ್ಲದ ಕಾರಣ ಪಿಪಿಪಿ ಮಾದರಿಯಲ್ಲಿ ಯೋಜನೆ ಜಾರಿಗೆ ಮುಂದಾ ಗಿದ್ದು, ಬಿಎಂಆರ್‌ಡಿಎಯಿಂದ 3 ಸಾವಿರ ಕೋಟಿ, ಬಿಡಿಎ-3600 ಕೋಟಿ ಹಾಗೂ ಹುಡ್ಕೋ ಬ್ಯಾಂಕಿನಿಂದ 9100 ಕೋಟಿ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಯೋಜನೆ ರೂಪಿಸಲಾಗುತ್ತಿದೆ. ಈ ಸಾಲದ ಹೊರೆಯ ಯೋಜನೆಯ ಉದ್ದೇಶವನ್ನು ಮುಖ್ಯಮಂತ್ರಿ ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(Former Chief Minister HD Kumaraswamy) ಅವರ ಅವಧಿಯಲ್ಲಿ ಯೋಜನೆ ಘೋಷಣೆ ಯಾಗಿದ್ದರೂ, ರೈತರ ವಿರೋಧದ ಹಿನ್ನೆಲೆಯಲ್ಲಿ ಅದನ್ನು ಜಾರಿಗೊಳಿಸುವುದಿಲ್ಲ ಎಂದು ವಿಧಾನಸೌಧ ದಲ್ಲಿಯೇ ಸ್ಪಷ್ಟಪಡಿಸಲಾಗಿತ್ತು. ಇದು ದಾಖಲೆಯಾಗಿಯೂ ಇದೆ.ಈ ಸತ್ಯವನ್ನು ಮರೆ ಮಾಚಿ ಕುಮಾರಸ್ವಾಮಿಯೇ ಈ ಯೋಜನೆಯ ರೂವಾರಿ ಎಂದು ಅಪಪ್ರಚಾರ ನಡೆಸ ಲಾಗುತ್ತಿದೆ ಎಂದು ಆರೋಪಿಸಿದರು.
ಜೂ.21ಕ್ಕೆ ಬೃಹತ್ ಕಾಲ್ನಡಿಗೆ ಜಾಥಾ
ರಾಜ್ಯ ಸರ್ಕಾರದ ರೈತ ವಿರೋಧಿ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಿ ಜೂ.21 ರಂದು ಹಂಚೀಪುರದಿಂದ ಬಿಡದಿವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದ್ದು, ಸುಮಾರು 10 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಜಂಗಮಕೋಟೆ ವ್ಯಾಪ್ತಿಯ 13 ಗ್ರಾಮಗಳ 2850 ಎಕರೆ ಭೂ ಹೋರಾಟಕ್ಕೂ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಿಸಿದರು.
ಸುದ್ದಿಗೋಷ್ಠಿಯ ಬಳಿಕ ಜೆಡಿಎಸ್ ನಿಯೋಗ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡು ವಂತೆ ಒತ್ತಾಯಿಸುವ ಮನವಿ ಪತ್ರ ಸಲ್ಲಿಸಿತು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಸ್ತುವಾರಿ ಎಸ್.ಪಿ. ಪ್ರದೀಪ್ ಕುಮಾರ್, ವಕೀಲ ಅರುಣ್, ಶ್ರೀನಿವಾಸ್, ಬೈರಾರೆಡ್ಡಿ, ಪ್ರಭಾನಾರಾಯಣಗೌಡ, ಅಂಬರೀಶ್, ಪ್ರಕಾಶ್ ರೆಡ್ಡಿ, ಮಹಬೂಬ್ ಸಾಬ್, ನಾರಾಯಣಸ್ವಾಮಿ, ಮಾಧವ ರೆಡ್ಡಿ, ಶಾಂತಮೂರ್ತಿ, ಮಂಜುನಾಥ ರೆಡ್ಡಿ, ಉಮಾ, ರಾಮಕೃಷ್ಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.