ಗೌರಿಬಿದನೂರು: ಬ್ರಿಟಿಷರ ಆಡಳಿತದ ವಿರುದ್ಧ ಧೈರ್ಯದಿಂದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ(Queen Chennamma of Kittur) ಅವರು ದೇಶದ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ನಾಡಿನ ಗೌರವಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಅಪ್ರತಿಮ ವೀರ ಮಹಿಳೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ ಸ್ಮರಿಸಿದರು.
ನಗರದ 11ನೇ ವಾರ್ಡ್ನ ಉಪ್ಪಾರ ಕಾಲೊನಿಯ ರಸ್ತೆಯೊಂದಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
ರಾಣಿ ಚೆನ್ನಮ್ಮ ಅವರ ಶೌರ್ಯ, ದೇಶಪ್ರೇಮ ಮತ್ತು ಹೋರಾಟದ ಬದುಕು ಇಂದಿನ ಯುವ ಜನರಿಗೆ ದಾರಿದೀಪವಾಗಿದೆ. ಮಾತೃಭೂಮಿಯ ರಕ್ಷಣೆಗಾಗಿ ಹೋರಾಡುವ ಧೈರ್ಯ ಹಾಗೂ ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಅವರ ಜೀವನ ಪ್ರೇರಣೆಯಾಗಿದೆ ಎಂದರು.
ಇದನ್ನೂ ಓದಿ: Kittur News: ಪಟ್ಟಣ ಪಂಚಾಯಿತಿ ವಿರುದ್ಧ ಸುಳ್ಳು ಆರೋಪ; ವೈಯಕ್ತಿಕ ಲಾಭಕ್ಕಾಗಿ ದಯಾಮರಣದ ನಾಟಕವಾಡಿದ ದಂಪತಿ!
ನಗರಸಭೆ ಮಾಜಿ ಸದಸ್ಯೆ ಪುಣ್ಯವತಿ ಜಯಣ್ಣ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವ ಇಂದಿನ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ಅವರಂತಹ ವೀರ ಮಹಿಳೆಯರ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ. ಅವರ ತ್ಯಾಗ, ಸಾಹಸ ಮತ್ತು ದೇಶಪ್ರೇಮದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖಂಡ ಜಯಣ್ಣ ಮಾತನಾಡಿ, ರಾಣಿ ಚೆನ್ನಮ್ಮ ಜಯಂತಿಯ ಸಂದರ್ಭದಲ್ಲಿ ರಸ್ತೆಗೆ ಅವರ ಹೆಸರು ನಾಮಕರಣ ಮಾಡುವ ಮೂಲಕ ಅವರ ದೇಶಭಕ್ತಿ ಮತ್ತು ಹೋರಾಟದ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್, ಎಬಿವಿಪಿ(ABVP)ಯ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಪ್ರಕಾಶ್ ಸೇರಿದಂತೆ ಮುನಿಲಕ್ಷ್ಮಮ್ಮ, ಲಕ್ಷ್ಮಮ್ಮ, ಮಂಜುಳಾ, ಉಮಾದೇವಿ, ಸುನಿತಾ, ನವ್ಯ, ಸರೋಜ, ಶಾಂತಮ್ಮ ಹಾಗೂ ವಾರ್ಡ್ನ ನಿವಾಸಿಗಳು ಉಪಸ್ಥಿತರಿದ್ದರು.