ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mahashivratri 2026: ಮಹಾಶಿವರಾತ್ರಿ ಜಾಗರಣೆಯು ಸಮಾಧಿ ಸ್ಥಿತಿ ತಲುಪಲು ಸಹಕಾರಿ: ಶ್ರೀ ಮಧುಸೂದನ್ ಸಾಯಿ

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆದ ಮಹಾಶಿವರಾತ್ರಿ ಪೂಜೆ ವೇಳೆ ಸದ್ಗುರು ಶ್ರೀ ಮಧುಸೂದನ್ ಸಾಯಿ ಮಾತನಾಡಿದ್ದಾರೆ. ಪೂಜೆ, ಅಭಿಷೇಕ ಹಾಗೂ ಜಪಗಳು ಕೇವಲ ಆಚರಣೆಗಳಲ್ಲ; ಅವು ಅಂತರಂಗ ಶುದ್ಧಿಗೆ ಇರುವ ಮಾರ್ಗ. ಆತ್ಮಸಾಧನೆಯಲ್ಲಿ ಮಾಡಿದ ಯಾವುದೇ ಪ್ರಯತ್ನವೂ ವ್ಯರ್ಥವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಶಿವರಾತ್ರಿ ಪ್ರಯುಕ್ತ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರಿಂದ ಶಿವಲಿಂಗಕ್ಕೆ ಪುಷ್ಪಾರ್ಚನೆ.

ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಮಾಘಮಾಸದ ಪವಿತ್ರ ಮಹಾಶಿವರಾತ್ರಿಯನ್ನು (Mahashivratri 2026) ಭಕ್ತಿಭಾವದಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಲಿಂಗಾಭಿಷೇಕ, ರುದ್ರಪಾರಾಯಣ, ಹಾಗೂ ಮಂತ್ರಜಪದಲ್ಲಿ ಭಾಗವಹಿಸಿದರು.​ ಕಾರ್ಯಕ್ರಮದಲ್ಲಿ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ್ ಸಾಯಿ (Sri Madhusudan Sai) ಅವರು ಶಿವತತ್ತ್ವ ಕುರಿತು ಪ್ರವಚನ ನೀಡಿದರು.

‘ನೀಲಕಂಠ’ ತತ್ತ್ವವನ್ನು ವಿವರಿಸಿದ ಶ್ರೀ ಮಧುಸೂದನ್ ಸಾಯಿ ಅವರು, “ಲೋಕ ರಕ್ಷಣಾರ್ಥ ಶಿವನು ಹಾಲಾಹಲ ವಿಷವನ್ನು ಕಂಠದಲ್ಲೇ ಹಿಡಿದಿಟ್ಟುಕೊಂಡನು. ಜೀವನದಲ್ಲಿಯೂ ವಿಷದಂತಹ ಅನುಭವಗಳು ಎದುರಾಗುತ್ತವೆ. ಅವನ್ನು ಮನಸ್ಸಿನೊಳಗೆ ಸಂಗ್ರಹಿಸಿಕೊಳ್ಳದೆ ಆತ್ಮಚಿಂತನೆಯ ಮೂಲಕ ಪರಿವರ್ತಿಸಿಕೊಳ್ಳಬೇಕು. ಪ್ರತಿ ಅವಕಾಶವನ್ನು ಆತ್ಮೋನ್ನತಿಯ ಸಾಧನವಾಗಿಸಿಕೊಳ್ಳುವುದೇ ಶಿವತತ್ತ್ವದ ಸಾರ,” ಎಂದು ಹೇಳಿದರು.

ಶಿವನು ಶ್ಮಶಾನವಾಸಿ, ವಿಭೂತಿ ಧಾರಿ ಹಾಗೂ ಸಮಾಧಿಪ್ರಿಯ ಎಂಬ ರೂಪಕಗಳ ಅರ್ಥವನ್ನು ವಿವರಿಸಿ, “ಸುಖ–ದುಃಖಗಳು ಕ್ಷಣಿಕ; ಚೈತನ್ಯವೇ ನಿತ್ಯ. ಮಹಾಶಿವರಾತ್ರಿ ಅಂಗವಾಗಿ ಆಚರಿಸುವ ಜಾಗರಣೆ ಮತ್ತು ಧ್ಯಾನ ಮನಸ್ಸನ್ನು ಏಕಾಗ್ರಗೊಳಿಸಿ ಸಮಾಧಿ ಸ್ಥಿತಿಯನ್ನು ತಲುಪಲು ಸಹಕಾರಿ,” ಎಂದು ಅಭಿಪ್ರಾಯಪಟ್ಟರು.

Mahashivratri 2026

“ಪೂಜೆ, ಅಭಿಷೇಕ ಹಾಗೂ ಜಪಗಳು ಕೇವಲ ಆಚರಣೆಗಳಲ್ಲ; ಅವು ಅಂತರಂಗ ಶುದ್ಧಿಗೆ ಇರುವ ಮಾರ್ಗ. ಆತ್ಮಸಾಧನೆಯಲ್ಲಿ ಮಾಡಿದ ಯಾವುದೇ ಪ್ರಯತ್ನವೂ ವ್ಯರ್ಥವಾಗುವುದಿಲ್ಲ. ಅದು ವ್ಯಕ್ತಿತ್ವದ ಪರಿಪಕ್ವತೆಗೆ ದಾರಿ ಮಾಡಿಕೊಡುತ್ತದೆ. ಜನನ–ಮರಣ ಚಕ್ರದಿಂದ ಮುಕ್ತಿ ಹೊಂದಬೇಕಾದರೆ ಆತ್ಮಜ್ಞಾನವೇ ಅದಕ್ಕೆ ದಾರಿ” ಎಂದು ಹೇಳಿದರು.

ಸತ್ಯಸಾಯಿ ಗ್ರಾಮವನ್ನು ‘ಸಿದ್ಧಸಂಕಲ್ಪಭೂಮಿ’ ಎಂದು ಉಲ್ಲೇಖಿಸಿ, ಇಲ್ಲಿನ ಶಾಂತ ವಾತಾವರಣದಲ್ಲಿ ಶ್ರದ್ಧೆಯಿಂದ ಮಾಡಿದ ಸಂಕಲ್ಪಗಳು ಫಲಪ್ರದವಾಗುತ್ತವೆ ಎಂಬ ನಂಬಿಕೆ ವ್ಯಕ್ತಪಡಿಸಿದರು.

ನಿತ್ಯ ಭವಿಷ್ಯ ಫೆಬ್ರವರಿ 15: ಮಹಾ ಶಿವರಾತ್ರಿಯಂದು ಈ ರಾಶಿಯವರಿಗೆ ಶುಭ ಯೋಗ

ಅಭಿಷೇಕದ ತೀರ್ಥವನ್ನು ಭಕ್ತರಿಗೆ ಪ್ರೋಕ್ಷಣೆ ಮಾಡಲಾಯಿತು. ರಾತ್ರಿ ಪೂರ್ತಿ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಭಕ್ತರು ಜಾಗರಣೆ, ಭಜನೆ, ಮಂತ್ರಜಪ ಹಾಗೂ ಧ್ಯಾನದಲ್ಲಿ ತೊಡಗಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಭಕ್ತರಿಗೆ ಪ್ರಸಾದ ವಿತರಣೆ ಸಹ ನಡೆಯಿತು.