ಚಿಕ್ಕಬಳ್ಳಾಪುರ: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನ(Ramleela ground)ದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡುವ ಮೂಲಕ ಬಹಿರಂಗವಾಗಿ ಜಾತಿ ಆಚರಣೆ ಹಾಗೂ ಕೋಮುವಾದ ಪ್ರದರ್ಶಿಸಿರುವ ಬಿಜೆಪಿ(BJP) ನಡೆ ಖಂಡನೀಯವಾಗಿದ್ದು, ಇದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರವಲ್ಲದೆ ದೇಶದ ಮೂಲನಿವಾಸಿಗಳು, ದಲಿತರು ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಕೆಪಿಸಿಸಿ (KPCC)ಜಿಲ್ಲಾಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಖರ್ಗೆ ಅವರಿಗೆ ಅವಮಾನ ಮಾಡಿರುವು ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ರಾಹುಲ್ ಗಾಂಧಿ(MP Rahul Gandhi) ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ದೇಶದ ಜನತೆ ಒಪ್ಪುವುದಿಲ್ಲ. ಎಫ್‌ಐಆರ್ ಅನ್ನು ಕೂಡಲೇ ವಾಪಸ್ ಪಡೆಯುವುದರ ಜೊತೆಗೆ ಬಿಜೆಪಿ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: KPCC: ಎಸ್ ಐ ಆರ್ ಪ್ರಕ್ರಿಯೆ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ: ಕೆಪಿಸಿಸಿ ಸದಸ್ಯ ಸೈಯದ್ ಎಜಾಜ್ ಸ್ಪಷ್ಟನೆ
ಬಿಜೆಪಿ ವಿರುದ್ಧ ಜನಾಕ್ರೋಶ: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಬಿಜೆಪಿ ವಿರುದ್ಧ ಜನಾಕ್ರೋಶ ಹೆಚ್ಚುತ್ತಿದ್ದು, ಯುವಜನತೆ ಕೂಡ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. 2029ರ ಲೋಕಸಭಾ ಚುನಾವಣೆ(Loksabha Election 2029)ಯಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಖಚಿತ. ಮೋದಿ ಅವರ ಸರ್ವಾಧಿಕಾರಿ ಆಡಳಿತಕ್ಕೆ ಬ್ರೇಕ್ ಬೀಳಲಿದೆ ಎಂದು ಕೇಶವರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕಿ ಅನಸೂಯಮ್ಮ(Former MLA Anasuyamma) ಮಾತನಾಡಿ, ಕಾಂಗ್ರೆಸ್ ಪಕ್ಷವು ಬಡವರು, ಶೋಷಿತರು ಹಾಗೂ ದಲಿತರ ಪರವಾಗಿ ಕೆಲಸ ಮಾಡುವ ಏಕೈಕ ಪಕ್ಷವಾಗಿದೆ. ಗಾಂಧಿ ಕುಟುಂಬದ ಹಿನ್ನೆಲೆ ಹಾಗೂ ದೇಶಕ್ಕೆ ನೀಡಿರುವ ಕೊಡುಗೆಯನ್ನು ಬಿಜೆಪಿ ಎಂದಿಗೂ ಮರೆಯಬಾರದು.
ಕಳೆದ 14 ವರ್ಷಗಳಿಂದ ಕೇಂದ್ರ ಸರ್ಕಾರದ ವತಿಯಿಂದ ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ಇದನ್ನು ದೇಶದ ಜನತೆ ಗಮನಿಸು ತ್ತಿದ್ದಾರೆ. ಪ್ರತಿಭಟನೆ ನಡೆಸಿದ ಕಾರಣಕ್ಕೆ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿದ ಅವರು, ದ್ವೇಷ ರಾಜಕಾರಣ ಬಿಟ್ಟು ಎಫ್‌ಐಆರ್ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಯಲುವಳ್ಳಿ ರಮೇಶ್ ಮಾತನಾಡಿ, ಉತ್ತರಾಖಂಡದ ಹಲ್ದ್ವಾನಿ ಯ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದರು. ಅವರು ದಲಿತರು ಎಂಬ ಕಾರಣಕ್ಕೆ ಆ ಪ್ರದೇಶವನ್ನು ಶುದ್ಧೀಕರಣ ಮಾಡಿ ಬಹಿರಂಗವಾಗಿ ಜಾತಿ ಆಚರಣೆ ನಡೆಸಿರುವುದು ಖಂಡನೀಯ. ಇದು ಇಡೀ ದಲಿತ ಸಮುದಾಯಕ್ಕೆ ಮಾಡಿದ ಅನ್ಯಾಯ ವಾಗಿದೆ. ಬಿಜೆಪಿ ದಲಿತರು ಮತ್ತು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದ್ದು, ಈ ಸಮುದಾಯಗಳು ಎಂದಿಗೂ ಬಿಜೆಪಿಯನ್ನು ಬೆಂಬಲಿಸಬಾರದು ಎಂದು ಕರೆ ನೀಡಿದರು.
ರೈತರ ಸಾಲ ಮನ್ನಾ ಕುರಿತು ಪ್ರಶ್ನೆ
ಮೋದಿ ಅವರಿಗೆ 56 ಇಂಚಿನ ಎದೆಯಿದ್ದರೆ ಮಾತ್ರ ಸಾಲದು. ದೀನ ದಲಿತರು, ಶೋಷಿತರು, ಬಡವರು ಹಾಗೂ ರೈತರಿಗೆ ನೆರವಾಗುವ ಕೆಲಸ ಮಾಡಬೇಕು. ಯುಪಿಎ ಆಡಳಿತದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು 83 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದರು. ಆದರೆ ಬಿಜೆಪಿ ಆಡಳಿತದಲ್ಲಿ ಈವರೆಗೆ ಎಷ್ಟು ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಪ್ರಶ್ನಿಸಿದರು.
26 ಸಾವಿರ ಕೋಟಿ ರೂಪಾಯಿ ಸಾಲ ಮಾಡಿದ್ದ ಶ್ರೀಮಂತ ಉದ್ಯಮಿಯಿಂದ ಇತ್ತೀಚೆಗೆ ಕೇವಲ 6 ಕೋಟಿ ರೂಪಾಯಿ ಪಡೆದು ಉಳಿದ ಸಾಲವನ್ನು ಮನ್ನಾ ಮಾಡಿರುವುದೇ ಮೋದಿ ಅವರ ದೊಡ್ಡ ಸಾಧನೆಯಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ರೆಡ್ಡಿ, ನಾಗಭೂಷಣ್, ಅಡ್ಡಗಲ್ ಶ್ರೀಧರ್, ಕುಬೇರ್ ಅಚ್ಚು, ಮಮತಾಮೂರ್ತಿ, ನಾರಾಯಣಮ್ಮ, ಮಂಗಳಾ ಪ್ರಕಾಶ್, ಸರೋಜಮ್ಮ, ವೆಂಕಟರತ್ನಮ್ಮ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಯಲುವಹಳ್ಳಿ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೆಸ್ ಸುರೇಶ್, ಬಾಬಾಜಾನ್ ಶಾಹಿದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.