ಚಿಕ್ಕಬಳ್ಳಾಪುರ : ಪ್ರಗತಿಶೀಲ ರಾಜ್ಯದ ಜನರ ತೆರಿಗೆ ಹಣಕ್ಕೆ ಪ್ರಮುಖ ಟ್ರಸ್ಟಿ ನಾನು ಎಂದು ಹೇಳಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿರುವ ಸರ್ವರ ಏಳಿಗೆಯನ್ನು ಬಯಸಿ ಮಂಡಿಸಿರುವ 17ನೇ ಅಯವ್ಯಯದ ಬಗ್ಗೆ ಜಿಲ್ಲೆಯ ಜನಾಂತ ರಂಗದ ನೋಟ ಹೀಗಿದೆ.
![]()
ರಾಜ್ಯದ ಪಾಲಿಗೆ ಉತ್ತಮವಾದ ಬಜೆಟನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. ಜಿಲ್ಲೆಯ ಮಟ್ಟಿಗಂತೂ ನೀರಾವರಿಗಾಗಿ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಶಿಡ್ಲಘಟ್ಟ ಚಿಂತಾಮಣಿ ಕೆರೆಗಳಿಗೆ ನೀರು ತುಂಬಿಸುವುದು, ಗಂಟಲಮಲ್ಲಮ್ಮ ಕಣಿವೆಗೆ ಚಾಲನೆ,ಶಿಡ್ಲಘಟ್ಟದಲ್ಲಿ ಸಿಲ್ಕ್ ಪಾರ್ಕ್ ನಿರ್ಮಾಣಕ್ಕೆ ಅನುದಾನ, ಎತ್ತಿನಹೊಳೆಗೆ ಅನುದಾನ ಹೀಗೆ ಜಿಲ್ಲೆಯು ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಬದ್ಧವಾದ ಬಜೆಟ್ ಮಂಡಿ ಸಿರುವುದರಿಂದ ಜನತೆಯ ಪರವಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ.
ಕೆ.ಎನ್.ಕೇಶವರೆಡ್ಡಿ, ಜಿಲ್ಲಾ ಕಾಂಗ್ರೆಸ್ ಮತ್ತು ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು.
![]()
ಸಿದ್ಧರಾಮಯ್ಯರ ಬಜೆಟ್ ಓಲೈಕೆ ರಾಜಕಾರಣದ ಬಜೆಟ್ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ.ಜಿಲ್ಲೆಗೆ ಪದೇಪದೇ ಬಂದು ಹೋಗುತ್ತಿದ್ದರೂ ಇಲ್ಲಿನ ಜನ ಅನುಭವಿ ಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಗಮನ ನೀಡದಿರುವುದು ಎದ್ದು ಕಾಣುತ್ತಿದೆ. ಶಾಶ್ವತ ನೀರಾವರಿಯ ಕಸನು ಕಾಣುತ್ತಿದ್ದವರಿಗೆ ಕೊಳಚೆ ನೀರಿಗೆ ಅನುದಾನ ನೀಡುವುದು ಸರಿಯಲ್ಲ. ಜಿಲ್ಲೆಯ ಪಾಲಿಗೆ ಇದೊಂದು ನಿರಾಶಾದಾಯಕ ಬೆಳವಣಿಗೆ.
-ಸೀಕಲ್ ರಾಮಚಂದ್ರಗೌಡ ಜಿಲ್ಲಾಧ್ಯಕ್ಷರು, ಬಿಜೆಪಿ ಚಿಕ್ಕಬಳ್ಳಾಪುರ
![]()
ಜನಪರ ಮುಖ್ಯಮಂತ್ರಿ ಎಂಬ ಅಭಿದಾನಕ್ಕೆ ಪಾತ್ರವಾಗಿರುವ 17 ಬಜೆಟ್‌ಗಳ ಸರದಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಜೆಟ್ ಜಿಲ್ಲೆಯ ಪಾಲಿಗೆ ಮರಣ ಮೃದಂಗ ಬಾರಿಸುವ ಬಜೆಟ್ ಆಗಿದೆ.ಹೆಚ್.ಎನ್.ವ್ಯಾಲಿ ನೀರಿನಿಂದ ಜಿಲ್ಲೆಯ ಜನತೆ ರೈತಾಪಿವರ್ಗ ಪಡಿಪಾಟಲು ಪಡುತ್ತಿದ್ದರೂ ಈ ನೋವು ಜಿಲ್ಲೆಯ ಜನಪ್ರತಿನಿಧಿಗಳೇ ಮೊದಲಾಗಿ ಮುಖ್ಯ ಮಂತ್ರಿಗಳಿಗೆ ಅರ್ಥವಾಗಿಲ್ಲ. 3ನೇ ಹಂತದ ಶುದ್ಧೀಕರಣ ಆಗುವವರೆಗೆ ಹೋರಾಟ ನಿಲ್ಲುವು ದಿಲ್ಲ.ಇದಕ್ಕಾಗಿ ಸಂಘಟಿತ ಹೋರಾಟಕ್ಕೆ ಶೀಘ್ರವೇ ಕರೆ ನೀಡಲಾಗುವುದು.
ಸಂದೀಪ್‌ರೆಡ್ಡಿ-ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರು, ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು, ಚಿಕ್ಕಬಳ್ಳಾಪುರ.
![]()
ನೀರಿಗಾಗಿ ಒಗ್ಗಟ್ಟಾಗಿ ಒತ್ತಡ ಹೇರುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಸರಕಾರದಿಂದ ಪೆನ್ನಾರ್ ಜನಾಲನಯ ಪ್ರದೇಶದ ಬರಪೀಡಿತ ಜಿಲ್ಲೆಗಳ ಕನ್ನಡಿಗರ ಕಡೆಗಣನೆ, ಗಡಿ ಜಿಲ್ಲೆಗಳಿಗೆ ದಶಕಗಳಿಂದ ಮುಂದುವರೆದ ನೀರಾವರಿ ತಾರತಮ್ಯ ಮುಂದು ವರೆದಿದೆ. ಸರಕಾರಕ್ಕೆ ನಾವು ಕಟ್ಟುವ ತೆರಿಗೆ ಬೇಕು. ನಮ್ಮ ರೈತರ ಭೂಮಿ ಬೇಕು. ನಮ್ಮ ಜಿಲ್ಲೆಗಳ ಅಂತರ್ಜಲ ಪಾತಾಳ ಮುಟ್ಟಿದೆ. ಕುಡಿಯುವ ನೀರಿನ ಮೂಲಗಳು ವಿಷಮಯ ವಾಗಿವೆ. ಈ ನೀರಿನಲ್ಲಿ ಯುರೇನಿಯಂ ಪತ್ತೆಯಾಗಿರುವ ಬಗ್ಗೆಯೂ ಸರಕಾರಕ್ಕೆ ಕನಿಷ್ಠ ಕನಿಕರವಿಲ್ಲ. ಸಿಎಜಿ ವರದಿಯಲ್ಲಿ ಎತ್ತಿನಹೊಳೆಯ ಕರ್ಮಕಾಂಡ ಬಯಲಾಗಿದ್ದರೂ ಬಜೆಟ್‌ನಲ್ಲಿ ಅನುದಾನ ನೀಡುವುದು ಮುಂದುವರೆದಿದೆ. ಈ ಬಗ್ಗೆ ಜನತೆ ಎಚ್ಚೆತ್ತು ಕೊಳ್ಳಬೇಕಿದೆ.
ಆರ್. ಆಂಜನೇಯರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಚಿಕ್ಕಬಳ್ಳಾಪುರ
ಹೀಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ 17ನೇ ಬಜೆಟ್ ಬಗ್ಗೆ ಪರವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.