ಮುನಿರಾಜು ಎಂ ಅರಿಕೆರೆ
13 ನಿರ್ದೇಶಕ ಸ್ಥಾನಗಳಿಗೆ ಕಣದಲ್ಲಿರುವ 28 ಮಂದಿಯಿಂದ ಚುನಾವಣೆಯಲ್ಲಿ ತೀವ್ರ ಸೆಣಸಾಟ
ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಬೇರ್ಪಟ್ಟು ಚಿಮುಲ್ ರಚನೆಯಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಫೆ.೧ರಂದು ನಡೆಯಲಿದೆ.
ಈ ಸಂಬಂಧ ಉಮೇದುವಾರಿಕೆ ಸಲ್ಲಿಸಲು 22 ರಂದು ಕೊನೇ ದಿನವಾಗಿದ್ದು ಒಬ್ಬರೇ ಎರಡು ಮೂರು ನಾಮಪತ್ರ ಸಲ್ಲಿಸಿದ್ದರಿಂದ ಒಟ್ಟು 44 ಮಂದಿ ಅರ್ಜಿ ಸಲ್ಲಿಕೆಯಾಗಿತ್ತು.
ಜ.23ರಂದು ನಾಮಪತ್ರಗಳ ಪರಿಶೀಲನೆ ನಡೆದು ಒಂದು ಅರ್ಜಿ ಅಸಿಂಧುವಾಗಿತ್ತು. ಅದರಂತೆ 43 ಅರ್ಜಿಗಳಲ್ಲಿ ಶನಿವಾರ 3 ಗಂಟೆಯ ತನಕ ಉಮೇದುವಾರಿಕೆ ವಾಪಸ್ಸು ಪಡೆಯಲು ಅವಕಾಶವಿತ್ತು. ಇವೆಲ್ಲಾ ಹಂತಗಳ ನಡುವೆ ಕಣದಲ್ಲಿ 28 ಮಂದಿ ಉಳಿದಿದ್ದು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚಿನ್ಹೆಯನ್ನು ಕೂಡ ಶನಿವಾರ ನೀಡಲಾ ಗಿದ್ದು ಎಂ.ಎಲ್‌ಎ, ಎಂ.ಪಿ ಚುನಾವಣೆಯನ್ನು ನಾಚಿಸುವ ರೀತಿಯಲ್ಲಿ ಅಖಾಡ ಸಿದ್ಧವಾಗಿದೆ. 913 ಡೆಲಿಗೇಟ್ ಮತ ಚಲಾಯಿಸಿ ತಮಗೆ ಬೇಕಾದ 13 ಮಂದಿಯನ್ನು ಮಾತ್ರ ಆರಿಸುವ ಸಾಹಸ ಮಾಡಬೇಕಿದೆ ಎನ್ನುವುದು ಸಹಕಾರಿ ಕ್ಷೇತ್ರದಿಂದ ಕೇಳಿಬರುತ್ತಿರುವ ಮಾತಾಗಿದೆ.
ಇದನ್ನೂ ಓದಿ: Chimul Election: ಚಿಮುಲ್ ಚುನಾವಣೆಗೂ ಮುನ್ನ ಕಾಂಗ್ರೆಸ್‌ನಲ್ಲಿ ಒಳಪೈಪೋಟಿ : ಪುಟ್ಟು ಆಂಜಿನಪ್ಪಗೆ ವಿರೋಧ ಬಲ
ಇಡೀ ಜಿಲ್ಲೆಯಲ್ಲಿ ಎಲ್ಲಾ ಕಡೆ ಎನ್‌ಡಿಎ ಬೆಂಬಲಿತರು ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದರೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಡುವೆಯೇ ನೇರ ಹಣಾಹಣಿ ನಡೆದಿರುವುದು ವಿಚಿತ್ರವಾದರೂ ಸತ್ಯ ಎಂಬತಾಗಿದೆ.
ಚಿಕ್ಕಬಳ್ಳಾಫೂಋ ತಾಲೂಕಿನ ಚಿತ್ರಣದ ಬಗ್ಗೆ ಕಣ್ಣಾಡಿಸುವುದಾದರೆ ಹಾಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಲವಹಳ್ಳಿ ಎನ್ ರಮೇಶ್ ಅವರು ರಾಜ್ಯ ಒಕ್ಕಲಿಗ ಸಂಘದ ಪದಾಧಿಕಾರಿಯಾಗಿದ್ದಾರೆ. ಜತೆಗೆ ತಾಲೂಕು ಒಕ್ಕಲಿಗ ಸಂಘದ ನಿರ್ದೇಶಕ ರಾಗಿಯೂ ಇದ್ದಾರೆ.ಆದರೂ ಚಿಮುಲ್ ಚುನಾವಣೆಯಲ್ಲಿ ನಿರ್ದೇಶಕರಾಗುವ ಬಯಕೆ ವ್ಯಕ್ತಪಡಿಸಿ ನಾಮಪತ್ರ ಸಲ್ಲಿಸಿದ್ದಾರೆ. ಇವರ ಮನವೊಲಿಸಲು ಜಿಲ್ಲಾ ಉಸ್ತುವಾರಿ ಸಚಿವರು ಪ್ರಯತ್ನಿಸಿದರೂ ಸಫಲವಾಗಿಲ್ಲ. ಪರಿಣಾಮ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಪಕ್ಷದವರೇ ಆದ ಹಾಲಿ ನಿರ್ದೇಶಕರಾಗಿದ್ದ ಎನ್.ಸಿ ವೆಂಕಟೇಶ್ ಅಲಿಯಾಸ್ ಭರಣಿ ವೆಂಕಟೇಶ್ ಸ್ಪರ್ಧಿ ಸಿದ್ದು ಎರಡನೇ ಬಾರಿ ಗೆಲುವಿನ ನಗೆ ಬೀರುವ ತವಕದಲ್ಲಿದ್ದಾರೆ .ಡೆಲಿಗೇಟ್ಸ್ ಇವರಿಬ್ಬರಲ್ಲಿ ಯಾರಿಗೆ ಮಣೆ ಹಾಕುವರೋ ಕಾದು ನೋಡಬೇಕಿದೆ.
ಇನ್ನು ಪೆರೇಸಂದ್ರ ಕ್ಷೇತ್ರದಲ್ಲಿ 5 ದಶಕಗಳ ಕಾಲ ಸಹಕಾರಿ ಕ್ಷೇತ್ರದಲ್ಲಿದ್ದು ಅಪಾರ ಅನುಭವ ಪಡೆದಿರುವ ಕೆ.ವಿ.ನಾಗರಾಜ್ ಅವರ ಎದುರಾಳಿ ಆಗಿರುವ ಕೆ.ಆರ್.ರಾಜಣ್ಣ ಎಂಬ ವಕೀಲರು ಸ್ಪರ್ಧಿಸಿರುವುದು ಕೂಡ ಈ ಬಾರಿಯ ಚುನಾವಣೆಯ ವಿಶೇಷಗಳಲ್ಲಿ ಒಂದಾಗಿದೆ.ನನ್ನ ಗೆಲುವು ಖಚಿತ ಎಂದು ಕೆ.ವಿ.ನಾಗರಾಜ್ ಹೇಳಿದರೆ, ನನಗೆ ಈ ಕ್ಷೇತ್ರದಲ್ಲಿ ಅನುಭವ ಇಲ್ಲದಿರಬಹುದು, ಆದರೆ ವಕೀಲನಾಗಿ ಸಹಕಾರಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ವಾದಿಸಿ ಅನುಭವ ಪಡೆದಿದ್ದೇನೆ. ಒಮ್ಮೆ ಅವಕಾಶ ನೀಡಿದಲ್ಲಿ ಕೆಲಸದ ಮೂಲಕ ನನ್ನ ಕಾರ್ಯವೈಖರಿಯನ್ನು ತೋರಿಸುತ್ತೇನೆ ಎನ್ನುತ್ತಾರೆ.
ಗೌರಿಬಿದನೂರಿನಲ್ಲಿಯೂ ಕೂಡ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಪಕ್ಷೇತರ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಅವರು ಮತ್ತು ಮಾಜಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ ಬಣದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಶಾಸಕರು ಸರಕಾರದ ಭಾಗವಾಗಿದ್ದರೂ ಕೂಡ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಉಳಿಸಿಕೊಳ್ಳುವ ಭಾಗವಾಗಿ ಅಭ್ಯರ್ಥಿಗಳನ್ನು ಹಾಕುವುದು ಅನಿವಾರ್ಯವಾಗಿದೆ.ಇನ್ನು ಮಾಜಿ ಸಚಿವರು ಹಾಲಿ ಶಾಸಕರ ನಡುವೆ ಭಿನ್ನಮತ ಶಮನವಾಗಿದ್ದಿದ್ದರೆ ಒಮ್ಮತದ ಅಭ್ಯರ್ಥಿಗಳನ್ನು ಹಾಕಿ ಗೆಲ್ಲಿಸಿಕೊಂಡು ಚಿಮುಲ್‌ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ನೆರವಾಗುತ್ತಿತ್ತು. ಹೀಗಾಗದ ಪರಿಣಾಮ ಶಾಸಕ ಮತ್ತು ಸಚಿವರ ನಡುವೆ ಕಂದಕ ಹೆಚ್ಚುತ್ತಲೇ ಹೋಗುತ್ತಿದೆ. ಇದು ಈ ಚುನಾವಣೆ ಯಲ್ಲಿ ಯಾವ ರೀತಿ ಫಲ ನೀಡುವುದೋ ಕಾದು ನೋಡಬೇಕಿದೆ.
ಈ ನಡುವೆ ಶಾಸಕರು ಹಣಬಲದಿಂದ ಚುನಾವಣೆ ಗೆಲ್ಲಬಹುದು ಎಂದುಕೊಂಡಿದ್ದಾರೆ ಎಂದು ಶಿವಶಂಕರ್‌ರೆಡ್ಡಿ ವ್ಯಂಗ್ಯವಾಡಿದ್ದರೆ, ಶಾಸಕ ಪುಟ್ಟಸ್ವಾಮಿಗೌಡರು ಮಾಜಿ ಸಚಿವರಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಬದಲಿಗೆ ಎದುರಾಳಿಗಳನ್ನು ಹೇಗೆ ಸೋಲಿಸಬೇಕು ಎಂಬುದೇ ಚಿಂತೆ. ಎಂದಾದರೂ ಅವರು ನಮ್ಮ ಅಭ್ಯರ್ಥಿ ಗೆಲುತ್ತಾರೆ ಎಂದು ಹೇಳಿದ್ದಾರೆಯೇ? ಎಂದು ಕಾಲೆಳೆದಿದ್ದಾರೆ.ಹೀಗಾಗಿ ಇಲ್ಲೂ ಕೂಡ ಕಾಂಗ್ರೆಸ್ ಅಭ್ಯರ್ಥಿ ವರ್ಸಸ್ ಕೆ.ಹೆಚ್.ಪಿ ಬಣದ ಅಭ್ಯರ್ಥಿಗಳು ಎಂಬತಾಗಿದೆ.
ಶಿಡ್ಲಘಟ್ಟ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಯ ಒಮ್ಮತದ ಅಭ್ಯರ್ಥಿ ನಿಲ್ಲಿಸುವ ಬದಲು ಶಾಸಕ ರವಿಕುಮಾರ್ ಒಬ್ಬರನ್ನು ಸೂಚಿಸಿದರೆ ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತೊಬ್ಬರನ್ನು ಸೂಚಿಸಿ ನಾಮಪತ್ರ ಹಾಕಿಸಿದ್ದರು.ಆದರೆ ಶನಿವಾರ ಸೀಕಲ್ ರಾಮಚಂದ್ರಗೌಡ ಅವರು ತಮ್ಮ ಅಭ್ಯರ್ಥಿಯ ನಾಮಪತ್ರ ವಾಪಸ್ಸು ಪಡೆದಿರುವುದು ಕೂಡ ತೀವ್ರ ಕುತೂಹಲ ಕೆರಳಿಸಿರು ವುದು ಈ ಬಾರಿಯ ಚುನಾವಣೆ ವಿಶೇಷಗಳಲ್ಲಿ ಒಂದಾಗಿದೆ.
ಇನ್ನು ಕಾಂಗ್ರೆಸ್‌ನಲ್ಲಿ ಕೂಡ ರಾಜೀವ್‌ಗೌಡ ತಲೆಮರೆಸಿಕೊಂಡು ಅಜ್ಞಾನ ಸ್ಥಳದಲ್ಲಿಯೇ ದಾಳ ಉರುಳಿಸಿದ್ದರೆ, ಪುಟ್ಟು ಅಂಜಿನಪ್ಪ, ಮಾಜಿ ಸಚಿವ ವಿ.ಮುನಿಯಪ್ಪ ಅವರ ಪುತ್ರ ಶಶಿಧರ್ ಸೇರಿ ಹಳೆಯ ಕಾಂಗ್ರೆಸ್ ಮುಖಂಡರೆಲ್ಲಾ ಒಂದಾಗಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ.ಇಲ್ಲಿ ಕಾಂಗ್ರೆಸ್ ವರ್ಸಸ್ ಎಂಎಲ್‌ಎ ಎನ್ನುವಂತಾ ದ ಪರಿಸ್ಥಿತಿ ಇದೆ.
ಅಭ್ಯರ್ಥಿ ಮತ್ತು ಚಿನ್ಹೆ
ಚುಮುಲ್ ಚುನಾವಣೆ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು ಮತ್ತು ಅವರಿಗೆ ನೀಡಿರುವ ಗುರುತಿನ ಚಿನ್ಹೆಯ ಮಾಹಿತಿ ಹೀಗಿದೆ. ಎಲುವಹಳ್ಳಿ ಎನ್ ರಮೇಶ್, ಚುನಾವಣೆ ಗುರುತು-ಆಟೋರಿಕ್ಷಾ, ಎನ್.ಸಿ.ವೆಂಕಟೇಶ್ ಚುನಾವಣೆ ಗುರುತು-ದ್ರಾಕ್ಷಿ, ಪೆರೇಸಂದ್ರ ಕ್ಷೇತ್ರ ಕೆ.ವಿ.ನಾಗರಾಜ್-ಆಟೋರಿಕ್ಷಾ, ಕೆ.ಆರ್.ರಾಜಣ್ಣ-ಪ್ರಷರ್‌ಕುಕ್ಕರ್, ಕಾಂತರಾಜು.ಜೆ.ಬಿನ್ ಎಂ.ಪಿ.ಜ್ವಾಲಣ್ಣ-ಆಟೋರಿಕ್ಷಾ, ನಾಗರಾಜ್.ಎಂ.ಬಿನ್ ಮಲ್ಲಪ್ಪ-ಗ್ಯಾಸ್ ಸಿಲಿಂಡರ್, ಹೆಚ್.ವಿ.ಶ್ರೀನಾಥ್ ಬಿನ್ ಹೆಚ್.ಆರ್.ವೆಂಕಟೇಶ್‌ಗೌಡ-ಪ್ರಷರ್‌ಕುಕ್ಕರ್, ಜಿ.ಎಲ್‌ದಿನೇಶ್, ವೆಂಕಟರೆಡ್ಡಿ- ಆಟೋರಿಕ್ಷಾ, ಡಿ.ಎನ್. ಬಿನ್ ನಾರಾಯಣಪ್ಪ-ಪ್ರಷರ್‌ಕುಕ್ಕರ್, ಆದಿನಾರಾಯಣರೆಡ್ಡಿ ಬಿನ್ ರ‍್ರಪ್ಪ- ಆಟೋರಿಕ್ಷಾ, ಬೈರಾರೆಡ್ಡಿ.ಜಿ.ಬಿ. ಬಿನ್ ಬೈರಪ್ಪ-ದ್ರಾಕ್ಷಿ, ಕೆ.ಎನ್.ಆವುಲಪ್ಪ ಬಿನ್ ಕೆ.ಎಸ್.ನಾರಾಯಣಪ್ಪ-ಆಟೋರಿಕ್ಷಾ, ಎಸ್.ಎನ್. ಚಿನ್ನಪ್ಪ ಬಿನ್ ನಾರಾಯಣಪ್ಪ- ಹೊಲಿಗೆಯಂತ್ರ, ವೈಬಿ ಅಶ್ವತ್ಥನಾರಾಯಣ ಬಿನ್ ಬೈರಾರೆಡ್ಡಿ, ಬಿ.ಶ್ರೀನಿವಾಸಪ್ಪ ಬಿನ್ ಬಾಲಪ್ಪ-ದ್ರಾಕ್ಷಿ, ಕೆ.ಎನ್.ಕೃಷ್ಣರೆಡ್ಡಿ ಬಿನ್ ಲೇಟ್ ನರಸಪ್ಪ, -ದ್ರಾಕ್ಷಿ, ಶೇಖರ್.ಬಿ. ಬಿನ್ ಲೇಟ್ ಪಿ.ಬಯ್ಯಣ್ಣ ಆಟೋರಿಕ್ಷಾ, ವಿ.ಮಂಜುನಾಥ ರೆಡ್ಡಿ ಬಿನ್ ಬಿ.ಎನ್.ವೆಂಕಟರೆಡ್ಡಿ-ಆಟೋರಿಕ್ಷಾ, ಪಿ.ವೆಂಕಟರಣಮಣರೆಡ್ಡಿ ಬಿನ್ ಬೂದಲಿ ಪಾಪಣ್ಣ-ದ್ರಾಕ್ಷಿ , ಬಿ.ಕೆ.ಚೊಕ್ಕೇಗೌಡ ಬಿನ್ ಬಿ.ಕೆ. ಕೃಷ್ಣಪ್ಪ-ಆಟೋರಿಕ್ಷಾ, ಮುನಿಯಪ್ಪ ಬಿನ್ ಲೇಟ್ ಚಿಕ್ಕಹನುಮಪ್ಪ- ದ್ರಾಕ್ಷಿ, ಎಂ.ರಾಮಯ್ಯ ಬಿನ್ ಮುತ್ತರಾಯಪ್ಪ- ದ್ರಾಕ್ಷಿ, ಆರ್.ಶ್ರೀನಿವಾಸ್ ಬಿನ್ ಬಿ.ರಾಮಯ್ಯ-ಆಟೋರಿಕ್ಷಾ,
ಮಹಿಳಾ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಗುರುತಿನ ಮಾಹಿತಿ ಮುನಿಲಕ್ಷ್ಮಮ್ಮ.ಆರ್ ಕೋಂ ಕೆ.ಭೀಮೇಗೌಡ-ಆಟೋರಿಕ್ಷಾ, ಸುಧಾ ಕೋಂ ಮುತ್ತಣ್ಣ-ಪ್ರಷರ್‌ಕುಕ್ಕರ್, ಸುನಂದಮ್ಮ ಕೋಂ ಲೇಟ್ ಪಿ.ಎನ್.ಪೆದ್ದಾರೆಡ್ಡಿ-ದ್ರಾಕ್ಷಿ, ರೂಪ ಕೋಂ ವೆಂಕಟರೆಡ್ಡಿ-ದ್ರಾಕ್ಷಿ, ಎಂ.ಸುಮ ಕೋಂ ಎಂ.ವಿ.ರವಿಚಂದ್ರಾರೆಡ್ಡಿ- ಆಟೋರಿಕ್ಷಾ ಗುರುತು ನೀಡಲಾಗಿದೆ.
ಏನೇ ಆಗಲಿ ಸಹಕಾರಿ ಕ್ಷೇತ್ರದ ಪುರೋಭಿವೃದ್ದಿಯ ಬಗ್ಗೆ ದೂರದೃಷ್ಟಿಯುಳ್ಳ ಅಭ್ಯರ್ಥಿಗಳ ಆಯ್ಕೆಗೆ ಡೆಲಿಗೇಟ್ಸ್ ಮುಂದಾಗುವ ಕಾಲವೊಂದಿತ್ತು.ಈಗ ಎಲ್ಲಾ ಅದಲು ಬದಲು ಆಗಿದ್ದು ಯಾರು ಹೆಚ್ಚು ಹಣ ಉಡುಗೊರೆ ಕೊಡುತ್ತಾರೋ ಅವರಿಗೆ ಮಣೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಬದಲಾವಣೆಯೇ ಚಿಮುಲ್‌ನಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿ ಹಾಲು ಉತ್ಪಾದಕರ ಹಿತ ಕಾಯುವುದಕ್ಕಿಂತ ಹೆಚ್ಚಾಗಿ ತಮ್ಮ ಸಂಪತ್ತು ಹೆಚ್ಚಿಸಿ ಕೊಳ್ಳಲು ಮುಂದಾಗುವ ಪರಿಸ್ಥಿತಿ ತಂದೊಡ್ಡಿದೆ ಎನ್ನುವ ಮಾತುಗಳು ಹಾಲು ಉತ್ಪಾದಕ ವಲಯದಿಂದಲೇ ಕೇಳಿ ಬರುತ್ತಿವೆ. ಇವೆಲ್ಲಾ ಹುನ್ನಾರಗಳಿಗೆ ಈ ಬಾರಿಗೆ ಚುನಾವಣೆ ಅಂಕುಶ ಹಾಕುವುದೇ ಕಾದು ನೋಡಬೇಕಿದೆ.