ಚಿಕ್ಕಬಳ್ಳಾಪುರ: ಭಾರತೀಯ ಸಮಾಜ ಸಂಸ್ಕೃತಿಯ ಬೆಳವಣಿಗೆಯ ಅಂತ:ಶಕ್ತಿಯಾಗಿ ತಾಯಿ ಸ್ವರೂಪದ ಮಹಿಳೆ ಕಾರ್ಯರ್ನಿಹಿಸಿರುವುದು ಋಷಿ ಮುನಿಗಳ ಕಾಲದಿಂದ ಈವರೆಗೆ ಆನೂಚಾನ ವಾಗಿ ನಡೆದು ಬಂದಿದೆ ಎಂದು ಜಿಲ್ಲಾಧಿಕಾರಿ ಜಿ ಪ್ರಭು ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ(International Women's Day) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತದ ದಿನಮಾನಗಳಲ್ಲಿ ಪ್ರತಿ ಮನೆಯನ್ನು ಬೆಳಗುತ್ತಿರುವವರು ಮಹಿಳೆಯರೇ ಆಗಿದ್ದಾರೆ. ಮಹಿಳಾ ಸಾಧಕಿಯರ ಸಾಧನೆಗಳನ್ನು ನೆನೆದು ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳುವುದೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಜವಾದ ಆಶಯ ಎಂದು ಅಭಿಪ್ರಾಯಪಟ್ಟರು.
ಇಂದಿನ ಸಮಾಜಕ್ಕೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಸರೋಜಿನಿ ನಾಯ್ಡು, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಸೇರಿದಂತೆ ಅಸಂಖ್ಯಾತ ಮಹಿಳಾ ಸಾಧಕಿಯರು ಕೊಡುಗೆ ನೀಡಿ ದ್ದಾರೆ. ಇವರು ನಮ್ಮ ಸಮಾಜಕ್ಕೆ ನೀಡಿರುವ ಕೊಡುಗೆಗಳು ಅಪಾರವಾದದ್ದು,ಅವರ ಸಾಧನೆ ಗಳನ್ನು ಸ್ಮರಿಸುವುದೇ ನಮ್ಮೆಲ್ಲರ ಭಾಗ್ಯವಾಗಿದೆ. ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಮಹಿಳಾ ಸ್ವ-ಸಹಾಯ ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು, ತನ್ನದೇ ಆದ ಅಮೂಲ್ಯ ಸೇವೆಯನ್ನು ಸಮಾಜಕ್ಕೆ ನೀಡುತ್ತಿವೆ. ಈ ಸಂಘಗಳಲ್ಲಿ 1.20 ಲಕ್ಷ ಮಹಿಳೆಯರು ಭಾಗವಹಿಸುತ್ತಿರುವುದು ಹೆಮ್ಮಯ ವಿಚಾರ ಎಂದರು.
ಜಿಲ್ಲೆಯು ಪ್ರತಿ ದಿನ 5 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಮೂಲಕ ಮಂಜೂಣಿಯಲ್ಲಿದೆ. ಅದರ ಶ್ರೇಯ ಮಹಿಳೆಯರಿಗೆ ಸಲ್ಲಬೇಕು. ಏಕೆಂದರೆ ಈ ಕ್ಷೇತ್ರದಲ್ಲಿ ಶೇ.90ರಷ್ಟು ಶ್ರಮ ಇರುವುದು ಮಹಿಳೆಯರದ್ದು ಎಂದರೆ ತಪ್ಪಾಗಲಾರದು. ಕೃತಕ ಬುದ್ದಿಮತ್ತೆಯ ತಂತ್ರಜ್ಞಾನ ಜಗತ್ತನ್ನು ಆಳುತ್ತಿರುವ ಇಂದಿನ ದಿನಮಾನದಲ್ಲಿ ಬುದಿವಂತಿಕೆ ಮತ್ತು ಜ್ಞಾನ ಇರುವವರು ಮಾತ್ರ ಉನ್ನತ ಹುದ್ದೆಗಳನ್ನು ಅಲಂಕರಿಸಿ ಪ್ರಗತಿ ಹೊಂದಲು ಸಾಧ್ಯವಾಗಲಿದೆ. ದೈಹಿಕ ಸಾಮರ್ಥ್ಯದ ಪ್ರಾಧಾನ್ಯತೆ ಯನ್ನು ಈ ತಂತ್ರಜ್ಞಾನ ನಗಣ್ಯ ಮಾಡಿದೆ ಎಂದರು.
21ನೇ ಶತಮಾನ ಜ್ಞಾನದ ಯುಗವಾಗಿದೆ.ಇದಕ್ಕೆ ಹೆಣ್ಣು ಗಂಡು ಎಂಬ ಯಾವುದೇ ಬೇಧವಿಲ್ಲ. ಜ್ಞಾನವೇ ಎಲ್ಲಕ್ಕೂ ಪ್ರಧಾನ, ಇದನ್ನೇ ನಾವು ಕೌಶಲ್ಯ ಎಂದು ಕರೆಯುತ್ತೇವೆ. ಮಹಿಳಾ ಸಮೂಹ ಪುರುಷರಿಗಿಂತ ಹೆಚ್ಚಿನ ಮಟ್ಟದ ಬುದ್ದಿಮತ್ತೆಯನ್ನು ಹೊಂದಿರುವುದರಿಂದ ಮುಂದಿನ ದಿನಗಳು ಮಹಿಳೆಯರಿಗೆ ವಿಪುಲ ಅವಕಾಶಗಳನ್ನು ನೀಡಲಿದೆ. ಮಹಿಳಾ ಸಮಾನತೆಗೆಗಾಗಿ ಲಿಂಗ ಅಸಮಾನತೆ ಯನ್ನು ಹೋಗಲಾಡಿಸಬೇಕು. ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರ ಗಳನ್ನು ತುಂಬಬೇಕಿದೆ ಎಂದು ತಿಳಿಸಿದರು.
ಹೆಣ್ಣು ಕ್ರಿಯಾಶೀಲತೆಯ ಶಿಖರವಾಗಿದ್ದಾಳೆ. ಮಹಿಳಾ ದಿನಾಚರಣೆ ಆಂಗವಾಗಿ ಕನ್ನಡ ಭವನದ ಎದುರು ಬಿಡಿಸಿರುವ ಬಣ್ಣ ಬಣ್ಣದ ಚಿತ್ತಾಗಳುಳ್ಳ ರಂಗೋಲಿಗಳೇ ನಿಮ್ಮ ಕ್ರಿಯಾಶೀಲತೆ ಬದ್ದತೆಗೆ ಸಾಕ್ಷಿ.ಈ ರಂಗೋಲಿಗಳಂತೆ ನಿಮ್ಮ ಬದುಕು ಬೆಳಗಲಿ, ನೀವು ಕೆಲಸ ಮಾಡುವ ಇಲಾಖೆಗಳ ಘನತೆ ಗೌರವ ಕಾಪಾಡುವ ಕೆಲಸ ನೀವು ಮಾಡಬೇಕಿದೆ. ನೀವು ಕೆಲಸ ಮಾಡುವಾಗ ಬಡವರ ಅರ್ಹರ ಧ್ವನಿಯಾಗಿ ಕೆಲಸ ಮಾಡಬೇಕಿದೆ ಎಂಬುದನ್ನು ಎಂದಿಗೂ ಮರೆಯವಾರದು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎನ್.ರಮೇಶ್ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ನೇರವಾಗಿ ಸಹಾಯವಾಗಿವೆ. ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 1480 ಕೋಟಿ, ಗೃಹಜ್ಯೋತಿ 372.14 ಕೋಟಿ, ಶಕ್ತಿ ಯೋಜನೆಯಡಿ 388 ಕೋಟಿ, ಅನ್ನಭಾಗ್ಯ ಯೋಜನೆಯಡಿ 265.29 ಕೋಟಿ ಹಾಗೂ ಯುವನಿಧಿ ಯೋಜನೆಯಡಿ 13.11 ಕೋಟಿಯನ್ನು ಸರ್ಕಾರ ವೆಚ್ಚ ಮಾಡಿದೆ. ಮಹಿಳೆಯರ ಉನ್ನತಿಗೆ ನಮ್ಮ ಸರ್ಕಾರ ಸದಾ ಬದ್ದವಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷ ಆಂಜಿನಪ್ಪ ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಿಗಿಲಾದ ಸಾಧನೆ ಮಾಡುತ್ತಿದ್ದಾರೆ. ಇದಕ್ಕೆ ಉತ್ತಮ ನಿರ್ದೇಶನವಾಗಿ ನಮ್ಮ ರಾಜ್ಯದ ಸರ್ಕಾರಿ ಆಡಳಿತದ ಚುಕ್ಕಾಣಿಯನ್ನು ವಹಿಸಿಕೊಂಡಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರ ಕಾರ್ಯವೈಖರಿ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಆನೂರು ಪಿಡಿಒ ಕಾತ್ಯಾಯಿನಿ, ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರತಿಭಾ, ಶ್ಯಾಮಲಾ ಕೆಂಚಾಚಾರ್ಲಹಳ್ಳಿ ಪೊಲೀಸ್ ಉಪ ನಿರೀಕ್ಷರು, ಡಿಸಿ ಕಚೇರಿ ಪ್ರಥಮ ದರ್ಜೆ ಸಹಾಯಕಿ ಪವಿತ್ರ. ಗೌರಿಬಿದನೂರು ಶಿಶು ಅಭಿವೃದ್ದಿ ಅಧಿಕಾರಿ ಸರೋಜಮ್ಮ, ಶಾಂತಮ್ಮ ಹಿರಿಯ ಪ್ರಾಥಮಿಕ ಆರೋಗ್ಯಾಧಿಕಾರಿ, ಅಂಜುಲಾ ಕೃಷಿ ಅಧಿಕಾರಿ, ಜ್ಯೀತಿ ಕೆ.ಎಸ್.ಮುಖ್ಯೋಪಾಧ್ಯಾಯರು, ರೇಖಾ ಹಿರಿಯ ಅರೋಗ್ಯ ನಿರೀಕ್ಷಕರು, ಅಮರ ಜ್ಯೋತಿ ನಿಲಯ ಪಾಲಕರು, ಮೊದಲಾರ ಸಾಧಕಿಯರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಅಕ್ಕ ಪಡೆಯ ಮಹಿಳಾ ಸಹಾಯವಾಣಿ 1081 ಪೋಸ್ಟರ್ ಅನ್ನು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎನ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಉಪ ಕಾರ್ಯದರ್ಶಿ ಅತಿಕ್ ಪಾಷಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೌತಾಜ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ವ-ಸಹಾಯ ಗುಂಪುಗಳ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.