ಶಿಡ್ಲಘಟ್ಟ: ಪಟ್ಟಣದ ಐತಿಹಾಸಿಕ ಶ್ರೀ ರೇಣುಕಾ ಯಲ್ಲಮ್ಮ ದೇವಿ ಕರಗ ಮಹೋತ್ಸವ(Sri Renuka Yellamma Devi Karaga Mahotsav)ವು ಈ ವರ್ಷವೂ ಭಕ್ತಿಭಾವ ಹಾಗೂ ಅದ್ದೂರಿ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ನಗರದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಕರಗ ಮಹೋತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ಕಾರ್ಯಕ್ರಮಗಳು ನಡೆದವು.
ಸಂಜೆ ವೇಳೆಗೆ ಕರಗ ಹೊತ್ತ ಭಕ್ತ ಪಿ.ಎಂ.ರಮೇಶ್ ಅವರು ತಮಟೆ ನಾದ, ನಾದಸ್ವರ ಮತ್ತು ಭಕ್ತರ “ಗೋವಿಂದ ಗೋವಿಂದ” ಘೋಷಣೆಗಳ ನಡುವೆ ದೇವಾಲಯದಿಂದ ಮೆರವಣಿಗೆ ಆರಂಭಿಸಿದರು. ಕರಗವನ್ನು ನೋಡಲು ನಗರದ ಪ್ರಮುಖ ರಸ್ತೆಗಳಲ್ಲಿ ಭಕ್ತರು ಜಮಾಯಿಸಿ ಭಕ್ತಿಭಾವ ದಿಂದ ಭಾಗವಹಿಸಿದರು.
ಇದನ್ನೂ ಓದಿ: Shidlaghatta News: ರಾಷ್ಟ್ರಮಟ್ಟದಲ್ಲಿ ಮಿಂಚಿದ ಮಳ್ಳೂರು ಯುವಕ ಎಂ.ರಾಕೇಶ್‌ಗೆ ಬೆಳ್ಳಿ ಪದಕ ಗೌರವ
ಮೆರವಣಿಗೆಯ ವೇಳೆ ಕೆಲವೊಂದು ಬೀದಿಗಳಲ್ಲಿ ಹಾಗೂ ಸರ್ಕಲ್‌ಗಳಲ್ಲಿ ಮನೆಗಳ ಮುಂದೆ ಹೂವಿನಹಳ್ಳಿ ರಂಗೋಲಿ ಹಾಕಿ ಅದರ ಮೇಲೆಯೇ ಯುವಕರು ನೃತ್ಯ ಮಾಡಿ ಭಕ್ತರನ್ನು ಮನರಂಜಿಸಿದರು. ಜೊತೆಗೆ ಕರಗ ಮಹೋತ್ಸವದ ಅಂಗವಾಗಿ ಎರಡು ವಾದ್ಯಗೋಷ್ಠಿ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿತ್ತು.
ಬಸ್ ನಿಲ್ದಾಣದ ಬಳಿ ಮೋದಿ ಬ್ರಿಗೇಡ್ ವತಿಯಿಂದ ವಾದ್ಯಗೋಷ್ಠಿ ನಡೆಯುತ್ತಿದ್ದರೆ, ಮಾರಮ್ಮ ಸರ್ಕಲ್‌ನಲ್ಲಿ ಶ್ರೀರಾಮ ಯುವಕರ ಸಂಘ ವತಿಯಿಂದ ಮತ್ತೊಂದು ವಾದ್ಯ ಗೋಷ್ಠಿ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಎರಡೂ ವೇದಿಕೆಗಳ ಮುಂದೆ ಕರಗ ಹಾಡು ಗಳಿಗೆ ಯುವಕರು ಉತ್ಸಾಹದಿಂದ ನೃತ್ಯ ಮಾಡಿ ಜನರ ಮನ ಗೆದ್ದರು.
ಭಕ್ತರು ಶಾಂತಿಯುತವಾಗಿ ಪಾಲ್ಗೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಊರಿನ ಜನರ ಸಹಕಾರದಿಂದ ಈ ವರ್ಷದ ಕರಗ ಮಹೋತ್ಸವ ವೈಭವದಿಂದ ನೆರವೇರಿತು.
ಯಾವುದೇ ಆಯ್ತಕ್ಕರ ಘಟನೆ ನಡೆಯದಂತೆ ಡಿವೈಎಸ್ಪಿ ಮುರಳಿಧರ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಅವರ ನೇತೃತ್ವದಲ್ಲಿ ಪಿಎಸ್ಐ ವೇಣುಗೋಪಾಲ್ ಮತ್ತು ನಾಗರಾಜ್ ಸೇರಿದಂತೆ ಪೊಲೀಸ್ ಸಿಬ್ಬಂದಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಕೆ ಕೊಂಡಪ್ಪನವರ ವಂಶಸ್ಥರಾದ ವರದರಾಜು, ಸಿ.ವಿ ಮಾಧವರಾಜು, ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ, ದೇವಾಲಯ ಅಭಿವೃದ್ಧಿ ಸಮಿತಿಯ ಮುಖ್ಯಸ್ಥ ಯಜಮಾನರು ಹನುಮಂತಪ್ಪ,
ಗಣಾಚಾರಿ ವೇದಮೂರ್ತಿ, ಪೂಜಾರಿ ಲೋಕೇಶ್, ತಾಲ್ಲೂಕು ವನ್ನಿಕುಲ ಕ್ಷತ್ರಿಯ ಜನಾಂಗದ ಕಾರ್ಯದರ್ಶಿ ಪ್ರದೀಪ್ (ದೀಪು), ಜಗದೀಶ, ನಗರಸಭೆಯ ಮಾಜಿ ಸದಸ್ಯೆ ಚಿತ್ರ ಮನೋಹರ್, ಗಣಾಚಾರಿ ಗಿರೀಶ್, ನಟರಾಜ್ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.