ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Red Globe grapes: ಕಟಾವಿಗೆ ಸಿದ್ಧವಾಗಿದ್ದ ರೆಡ್ ಗ್ಲೋಬ್ ದ್ರಾಕ್ಷಿ ಕಳ್ಳತನ; ರೈತನ ಬೆವರು, ಕುಟುಂಬದ ಭವಿಷ್ಯ ಮಣ್ಣುಪಾಲು

ಈ ಬಾರಿ ರೆಡ್ ಗ್ಲೋಬ್ ದ್ರಾಕ್ಷಿಗೆ ಕೆಜಿಗೆ 200ರಿಂದ 250ರವರೆಗೆ ಉತ್ತಮ ಬೆಲೆ ಇತ್ತು. ಒಂದೊಂದು ಗೊಂಚಲು ಎರಡೂವರೆ ಕೆಜಿಯಷ್ಟು ತೂಕವಿತ್ತು. ಇದನ್ನು ಅರಿತ ಕಳ್ಳರು ಯೋಜಿತವಾಗಿ ಕಟಾವಿಗೆ ಸಿದ್ಧವಾಗಿದ್ದ 5ಗುಂಟೆ ಪ್ರದೇಶದ ಸುಮಾರು ಎರಡುವರೆ ಟನ್ ನಷ್ಟು ದ್ರಾಕ್ಷಿ ಕದ್ದೊಯ್ದಿದ್ದಾರೆ. ಆ ಮೂಲಕ ರೈತನ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ.

ರೈತ ಬಸವರಾಜ್ ಮತ್ತು ದ್ರಾಕ್ಷಿ ತೋಟದ ಚಿತ್ರ

ಚಿಕ್ಕಬಳ್ಳಾಪುರ: ರೈತನ ಬದುಕು ಬೆವರಿನಿಂದ ಆರಂಭವಾಗಿ, ಭರವಸೆಯ ಮೇಲೆ ನಿಲ್ಲುತ್ತದೆ. ಒಂದು ವರ್ಷದ ಶ್ರಮಕ್ಕೆ ಫಲ ಸಿಗುವ ಕ್ಷಣಕ್ಕಾಗಿ ಕಾಯುವ ರೈತನಿಗೆ, ಕಟಾವಿನ ಮುನ್ನವೇ ಕಳ್ಳರು ಆ ಕನಸನ್ನೇ ಕಸಿದುಕೊಂಡರೆ ಅದು ಕೇವಲ ಕಳ್ಳತನವಲ್ಲ; ಬದುಕಿನ ಮೇಲಿನ ಕ್ರೂರ ಹೊಡೆತ.

ಅಂತಹ ಮನಕಲಕುವ ಘಟನೆ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕು ಕೊಳವನಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಗ್ರಾಮದ ರೈತ ಬಸವರಾಜು ಅವರು ಎರಡು ಎಕರೆ ಪ್ರದೇಶದಲ್ಲಿ ಅಪಾರ ವೆಚ್ಚದಲ್ಲಿ ಬೆಳೆದಿದ್ದ ರೆಡ್ ಗ್ಲೋಬ್ ದ್ರಾಕ್ಷಿ ಕಟಾವಿಗೆ ಸಿದ್ಧವಾಗಿತ್ತು. ಉತ್ತಮ ಇಳುವರಿ, ಉತ್ತಮ ಬೆಲೆ... ವರ್ಷವಿಡೀ ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಗುವ ಹೊತ್ತು. ಆದರೆ ಒಂದೇ ರಾತ್ರಿ ಕಳ್ಳರ ತಂಡ ತೋಟಕ್ಕೆ ನುಗ್ಗಿ ಸುಮಾರು ಐದು ಗುಂಟೆ ಪ್ರದೇಶದಲ್ಲಿದ್ದ ಸಂಪೂರ್ಣ ದ್ರಾಕ್ಷಿ ಗೊಂಚಲುಗಳನ್ನು ಕತ್ತರಿಸಿ ಕೊಂಡೊಯ್ದಿದೆ.

ಬೆಳಗಿನ ಜಾವ ತೋಟಕ್ಕೆ ಬಂದ ರೈತ ಬಸವರಾಜು, ಗೊಂಚಲುಗಳಿಂದ ತುಂಬಿರಬೇಕಿದ್ದ ಬಳ್ಳಿಗಳು ಬರಿದಾಗಿರುವುದನ್ನು ಕಂಡು ಕುಸಿದುಬಿದ್ದರು. ಕಣ್ಣೆದುರೇ ಒಂದು ವರ್ಷದ ಕನಸು ಕಳುವಾಗಿರುವ ದೃಶ್ಯ ಅವರನ್ನು ಮೌನವಾಗಿಸಿತು.

ಇದನ್ನೂ ಓದಿ: American Red Globe grapes: ಅಮೆರಿಕನ್ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆದು ಗಮನ ಸೆಳೆದ ಚಿಕ್ಕಬಳ್ಳಾಪುರ ರೈತ

"ಎಕರೆಗೆ ಐದರಿಂದ ಎಂಟು ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ. ಮಳೆ, ಗಾಳಿ, ಬಿಸಿಲು ಎನ್ನದೆ ಮಕ್ಕಳಂತೆ ಬೆಳೆಯನ್ನು ಕಾಪಾಡಿದ್ದೇವೆ. ಇನ್ನೇನು ಕಟಾವು ಮಾಡಿ ಸಾಲ ತೀರಿಸೋಣ, ಮನೆಯ ಖರ್ಚು ನೋಡೋಣ ಎಂದುಕೊಂಡಿದ್ದೆವು. ಆದರೆ ಒಂದೇ ರಾತ್ರಿ ಎಲ್ಲವೂ ಮುಗಿದುಹೋಯಿತು," ಎಂದು ಅವರು ನೋವಿನಿಂದ ಹೇಳಿದರು.

ಈ ಬಾರಿ ರೆಡ್ ಗ್ಲೋಬ್ ದ್ರಾಕ್ಷಿಗೆ ಕೆಜಿಗೆ 200ರಿಂದ 250ರವರೆಗೆ ಉತ್ತಮ ಬೆಲೆ ಇತ್ತು. ಒಂದೊಂದು ಗೊಂಚಲು ಎರಡೂವರೆ ಕೆಜಿಯಷ್ಟು ತೂಕವಿತ್ತು. ಇದನ್ನು ಅರಿತ ಕಳ್ಳರು ಯೋಜಿತವಾಗಿ ಕಟಾವಿಗೆ ಸಿದ್ಧವಾಗಿದ್ದ 5ಗುಂಟೆ ಪ್ರದೇಶದ ಸುಮಾರು ಎರಡುವರೆ ಟನ್ ನಷ್ಟು ದ್ರಾಕ್ಷಿ ಕದ್ದೊಯ್ದಿ ದ್ದಾರೆ. ಆ ಮೂಲಕ ರೈತನ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ. 

"ಯಾರ ಮೇಲೆ ಅನುಮಾನವಿದೆ?" ಎಂಬ ಪ್ರಶ್ನೆಗೆ ಬಸವರಾಜು ನೀಡಿದ ಉತ್ತರ ಮತ್ತಷ್ಟು ನೋವು ತಂದಿತು. "ಯಾರ ಮೇಲೂ ಅನುಮಾನ ಇಲ್ಲ... ಎಲ್ಲರೂ ನಮ್ಮವರೇ. ಆದರೆ ನಮ್ಮ ಶ್ರಮ ಮಾತ್ರ ಹೋಗಿಬಿಟ್ಟಿದೆ," ಎಂದು ಮುಗ್ಧವಾಗಿ ಹೇಳಿದ ಅವರ ಮಾತು ರೈತರ ಅಸಹಾಯಕತೆಯನ್ನು ಬಿಚ್ಚಿಟ್ಟಿತು.

678783 Grapes

ಜಿಲ್ಲೆಯಲ್ಲಿ ಈ ರೀತಿಯ ದ್ರಾಕ್ಷಿ ಕಳ್ಳತನ ನಡೆದಿರುವುದು ಇದೇ ಮೊದಲ ಘಟನೆ ಎನ್ನಲಾಗುತ್ತಿದೆ. ಇದರಿಂದ ತೋಟಗಾರಿಕಾ ಬೆಳೆಗಾರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇನ್ನು ಮುಂದೆ ಬೆಳೆ ಬೆಳೆಯುವುದಷ್ಟೇ ಅಲ್ಲ, ಅದನ್ನು ಕಳ್ಳರಿಂದ ಕಾಪಾಡಿಕೊಳ್ಳುವುದೂ ರೈತರ ಹೊಣೆ ಯಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಕೃಷಿಕರು  ತಡರಾತ್ರಿವರೆಗೆ ತೋಟದಲ್ಲಿ ಕಾವಲು ನಿಂತು, ಬಳಿಕ ಮನೆಗೆ ತೆರಳುವುದು ಸಾಮಾನ್ಯ. ಆದರೆ ಈ ಘಟನೆ ಬಳಿಕ ಸಿಸಿಟಿವಿ ಅಳವಡಿಕೆ, ಖಾಸಗಿ ಭದ್ರತೆ ಅಥವಾ ರಾತ್ರಿ ಪೂರ್ತಿ ಕಾವಲು ಇಲ್ಲದೆ ದುಬಾರಿ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟ ಎಂಬ ಆತಂಕ ವ್ಯಕ್ತವಾಗಿದೆ.

ಈ ಪ್ರಕರಣವನ್ನು ಪೊಲೀಸರು ಮತ್ತು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ತಕ್ಷಣ ತನಿಖೆ ಆರಂಭಿಸಬೇಕು. ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ತೋಟಗಾರಿಕಾ ಬೆಳೆಗಳ ರಕ್ಷಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೆವರಿನ ಬೆಲೆ ಯಾರಿಗೆ ಗೊತ್ತು...?

ಒಂದು ಗೊಂಚಲು ದ್ರಾಕ್ಷಿ ಬೆಳೆಯಲು ರೈತ ಸುರಿಸುವ ಬೆವರಿನ ಹನಿ, ಕಳ್ಳನಿಗೆ ಕಾಣುವುದಿಲ್ಲ. ಆದರೆ ಆ ಗೊಂಚಲಿನಲ್ಲೇ ರೈತನ ಸಾಲ, ಮಕ್ಕಳ ವಿದ್ಯಾಭ್ಯಾಸ, ಮನೆಯ ಊಟ, ಕುಟುಂಬದ ಭವಿಷ್ಯ ಅಡಗಿರುತ್ತದೆ. ಕೊಳವನಹಳ್ಳಿಯ ಈ ಘಟನೆ ಕೇವಲ ದ್ರಾಕ್ಷಿ ಕಳ್ಳತನವಲ್ಲ; ರೈತನ ಬೆವರು, ಕನಸು ಮತ್ತು ಬದುಕನ್ನೇ ಕಳವು ಮಾಡಿದ ದುರಂತ.