ಚಿಂತಾಮಣಿ: ರಾಜ್ಯದಲ್ಲಿ ಬರ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿದ್ದು, ಅವುಗಳ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಗಂಭೀರ ಚರ್ಚೆ ನಡೆಯಬೇಕಿದೆ. ಆದರೆ ವಿಪಕ್ಷಗಳು ಪ್ರತಿಭಟನೆಯನ್ನೇ ರಾಜಕೀಯಗೊಳಿಸುತ್ತಿರುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ(DCM Dr G Parameshwar) ಹೇಳಿದರು.
ಚಿಂತಾಮಣಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಪ್ರತಿಭಟನೆ ನಡೆಸುವುದು ವಿಪಕ್ಷಗಳ ಹಕ್ಕು. ಆದರೆ ಅದಕ್ಕೆ ತನ್ನದೇ ಆದ ನೀತಿ–ನಿಯಮಗಳಿವೆ. ಪ್ರಶ್ನೆಗಳನ್ನು ಕೇಳಬಹುದು, ಸರ್ಕಾರ ಉತ್ತರ ನೀಡಿ ಸಮರ್ಥನೆ ನೀಡಲಿದೆ. ಪ್ರತಿಭಟನೆಗಿಂತ ರಾಜ್ಯದ ನೈಜ ಸಮಸ್ಯೆಗಳ ಕುರಿತು ಚರ್ಚೆ ನಡೆಯುವುದು ಮುಖ್ಯ ಎಂದರು.
ಇದನ್ನೂ ಓದಿ: G Parameshwar: ಮಾನವೀಯತೆ ಕಲಿಸುವ ಕೆಲಸ ಆಗಬೇಕು: ಡಾ.ಜಿ. ಪರಮೇಶ್ವರ್
ಬರ ಪರಿಸ್ಥಿತಿ, ರೈತರ ಸಮಸ್ಯೆ ಸೇರಿದಂತೆ ರಾಜ್ಯದ ಹಲವು ಜ್ವಲಂತ ವಿಚಾರಗಳ ಬಗ್ಗೆ ಚರ್ಚೆಯಾಗ ಬೇಕಿದೆ. ಈ ನಿಟ್ಟಿನಲ್ಲಿ ವಿಪಕ್ಷಗಳು ಸಹಕಾರ ನೀಡಬೇಕು ಎಂದು ಸರ್ಕಾರ ಹಾಗೂ ಸಭಾಧ್ಯಕ್ಷರು ಮನವಿ ಮಾಡಿದ್ದಾರೆ. ಆದರೂ ರಾಜಕೀಯಕ್ಕಾಗಿ ಸದನದ ಕಲಾಪಕ್ಕೆ ಅಡ್ಡಿಪಡಿಸುವುದಾದರೆ ನಾವೇನು ಮಾಡಲು ಸಾಧ್ಯವಿಲ್ಲ. ನಿಜವಾದ ಸಮಸ್ಯೆಗಳ ಚರ್ಚೆಯಲ್ಲಿ ವಿಪಕ್ಷಗಳಿಗೆ ಆಸಕ್ತಿ ಇಲ್ಲದಿರುವುದು ವಿಷಾದನೀಯ ಎಂದು ಹೇಳಿದರು.
ಇನ್ನೆರಡು ದಿನದಲ್ಲಿ ಬರ ವರದಿ: ರಾಜ್ಯದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿಯನ್ನು ಅವಲೋಕಿಸಿ ವರದಿ ನೀಡುವಂತೆ ಈಗಾಗಲೇ ಸೂಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ವರದಿ ಬರಲಿದ್ದು, ಸಮಗ್ರ ಪರಿಶೀಲನೆ ನಡೆಸಿದ ಬಳಿಕ ಬರಪೀಡಿತ ಪ್ರದೇಶಗಳನ್ನು ಘೋಷಿಸಲಾಗುವುದು. ನಂತರ ಕೇಂದ್ರ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಲಾಗುವುದು ಎಂದು ಪರಮೇಶ್ವರ ತಿಳಿಸಿದರು.
ಅಂಬೇಡ್ಕರ್ ಚಿಂತನೆ ಮುಂದಿನ ಪೀಳಿಗೆಗೆ
ಚಿಂತಾಮಣಿಯಲ್ಲಿ ಸುಮಾರು ರೂಪಾಯಿ 21 ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ–ಅನುಭವ ಕೇಂದ್ರ ನಿರ್ಮಿಸಲಾಗಿದೆ. ಅಂಬೇಡ್ಕರ್ ಅವರ ಚಿಂತನೆ, ವಿಚಾರಧಾರೆ ಹಾಗೂ ಸಾಮಾಜಿಕ ನ್ಯಾಯದ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಕೇಂದ್ರ ನಿರ್ಮಿಸಲಾಗಿದೆ. ಆಜಾದ್ ಚೌಕ್ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ದೂರದೃಷ್ಟಿ ಯಿಂದ ಕೈಗೊಂಡಿರುವ ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ಅಭಿನಂದಿಸುವುದಾಗಿ ಹೇಳಿದರು.