ಎಚ್ಚೆತ್ತುಕೊಳ್ಳದ ಕೆ.ಎಸ್.ಆರ್.ಟಿ.ಸಿ ಅಧಿಕಾರಿ ಸಿಬ್ಬಂದಿ : ಇದ್ದೂ ಇಲ್ಲದಂತಿರುವ ಪೊಲೀಸ್ ಚೌಕಿ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕೇಂದ್ರ ಬಸ್‌ನಿಲ್ದಾಣ ಕಳ್ಳಕಾಕರ ಪಾಲಿನ ಸ್ವರ್ಗದಂತಾಗಿದ್ದರೆ ಪ್ರಯಾಣಿಕರ ಪಾಲಿಗೆ ರೌರವ ನರಕವಾಗಿದೆ.ಹಾಡುಹಗಲೇ ಬಸ್ ಹತ್ತುವ ಪ್ರಯಾಣಿಕರ ಜೇಬಿ ನಿಂದ ಹಣ, ಮೊಬೈಲ್ ಮಹಿಳೆಯರ ಸರ ಇತ್ಯಾದಿಗಳು ಕಳುವಾಗುತ್ತಿದ್ದರೂ ಸಂಬಂಧ ಪಟ್ಟವರು ಮಾತ್ರ ಇದಕ್ಕೆ ಕಡಿವಾಣ ಹಾಕುವ ಬದಲು ಮುಗುಮ್ಮಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಹೌದು. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹಗಲುಕಳ್ಳರ ಕಾಟ ವಿಪರೀತವಾಗಿದ್ದರೂ ಕೂಡ ಕೆಎಸ್‌ಆರ್‌ಟಿಸಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಕಣ್ಮುಚ್ಚಿ ಕುಳಿತಿರುವ ಪರಿಣಾವ ಪ್ರಯಾಣಿಕರಿಗೆ ಸುಖಕರವಾಗಿ ಪ್ರಯಾಣಿಸುವ ಅವಕಾಶ ಇಲ್ಲದಂತಾಗಿದೆ. ಇಲ್ಲಿ ರಾತ್ರಿ ಬಿಡಿ ಹಗಲು ವೇಳೆಯಲ್ಲಿಯೇ ನಿರ್ಭೀತಿಯಿಂದ ಮೊಬೈಲ್ ಎಗರಿಸುವ ಕಳ್ಳರ ಕಾಟ ವಿಪರೀತವಾಗಿರುವುದರಿಂದ ಅಮಾಯಕರು ಪರಿತಪಿಸುವಂತಾಗಿದೆ.
ಇದನ್ನೂ ಓದಿ: Chikkaballapur News: ಉದಾಸೀನವೇ ವಿದ್ಯಾರ್ಥಿ ಜೀವನಕ್ಕೆ ಮಹಾ ಶತ್ರು : ಕೋಡಿರಂಗಪ್ಪ ಅಭಿಮತ
ಕೇಂದ್ರ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ,ಚಾಲಕ ನಿರ್ವಾಹಕರಿಗೆ ಮತ್ತು ಪೊಲೀಸರಿಗೆ ಖಂಡಿತವಾಗಿ ಕಳ್ಳರು ಯಾರು? ಪ್ರಯಾಣಿಕರು ಯಾರು ಎಂಬ ಬಗ್ಗೆ ಮಾಹಿತಿ ಇದ್ದೇ ಇರುತ್ತದೆ. ಆದರೂ ಕೂಡ ಇವರು ಇಂತಹುದಕ್ಕೆ ತಡೆ ಹಾಕಲು ಮುಂದಾಗುವುದೇ ಇಲ್ಲ. ಕಾರಣ ಯಾರದೋ ಪೋನು? ಯಾರಿಗೋ ಕಷ್ಟ! ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತಿರುವುದರಿಂದಲೇ ಇಲ್ಲಿ ಕಳ್ಳತನಗಳು ಎಗ್ಗು ಸಿಗ್ಗಲ್ಲದೆ ನಡೆಯುತ್ತಿವೆ ಎನ್ನುವುದು ನೊಂದ ಪ್ರಯಾಣಿಕರ ದೂರಾಗಿದೆ.
ಸೋಮವಾರ ಮಧ್ಯಾಹ್ನ ಮೂರರಿಂದ ೩;೩೦ರ ಸಮಯದಲ್ಲಿ ಬೆಂಗಳೂರಿನ ಕೆ.ನಾರಾಯಣಪುರ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಶಿಕ್ಷಕ ಬಸವರಾಜು.ಆರ್ ಎಂಬುವರು ಗೌರಿಬಿದನೂರಿನಿಂದ ಬಂದು ಕೇಂದ್ರ ಬಸ್‌ನಿಲ್ದಾಣದಲ್ಲಿ ಇಳಿದಿದ್ದಾರೆ. ವಿಜಯಪುರಕ್ಕೆ ಹೋಗ ಬೇಕು ಎಂದು ೩;೨೦ರ ಸಮಯದಲ್ಲಿ ಹಿಂದೂಪುರ,ಪಾವಗಡ ಕೋಲಾರ ಬಸ್ ಹತ್ತಿದ್ದಾರೆ. ಕಂಡಕ್ಟರ್‌ಗೆ ಟಿಕೆಟ್ ಹಣ ನೀಡಲು ಜೇಬಿಗೆ ಕೈಹಾಕಿದಾಗ ಹಣವೂ ಇಲ್ಲ ಮೊಬೈಲೂ ಇಲ್ಲ ದಂತಾಗಿದೆ.
ಕೂಡಲೇ ಬಸ್ ನಿಲ್ದಾಣದಲ್ಲಿರುವ ಸಂಚಾರಿ ನಿಯತ್ರಕರು, ಪೊಲೀಸರಿಗೆ ಮಾಹಿತಿ ನೀಡಿದರೂ ಯಾವ ಪ್ರಯೋಜನವೂ ಆಗಿಲ್ಲ.ಇದೇ ಅವಧಿಯಲ್ಲಿ ಬೆಂಗಳೂರಿಗೆ ಪ್ರಯಾಣಿಸಲು ನಿಂತಿದ್ದ ರಮೇಶ್‌ಕುಮಾರ್ ಎಂಬುವರ ಮೊಬೈಲ್ ಕೂಡ ಎಗರಿಸಿದ್ದಾರೆ. ಒಂದೇ ದಿನ ಒಂದೇ ಸಮಯದಲ್ಲಿ ಎರಡೆರಡು ಮೊಬೈಲ್ ಕಳುವಾದರೂ ಸಿಬ್ಬಂದಿ ಮಾತ್ರ ಪೊಲೀಸರಿಗೆ ದೂರು ನೀಡಿ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ.
ಹೀಗೆ ಚಿಕ್ಕಬಳ್ಳಾಪುರ ಕೇಂದ್ರ ಬಸ್ ನಿಲ್ದಾಣ ಕಳ್ಳಕಾಕರ ಅಡ್ಡೆಯಾಗಿ ಬದಲಾಗುತ್ತಿರುವುದು ಜಿಲ್ಲಾಡಳಿತಕ್ಕೆ ಶೋಭೆ ತರುವ ವಿಚಾರವಲ್ಲ. ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಕೆಎಸ್‌ಆರ್‌ಟಿಸಿ ಡಿ.ಸಿ ಇತ್ತ ಗಮನ ಹರಿಸಿ ಕಳ್ಳರ ಎಡೆಮುರಿ ಕಟ್ಟುವ ಮೂಲಕ ಪ್ರಯಾಣಿಕರ ಹಿತವನ್ನು ಕಾಪಾಡಬೇಕು. ಇಲ್ಲವಾದಲ್ಲಿ ಅವರ ಹಿಡಿಶಾಪ ತಟ್ಟುವುದರಲ್ಲಿ ಸಂದೇಹವೇ ಇಲ್ಲ ಎನ್ನುವುದು ಮೊಬೈಲ್ ಕಳೆದುಕೊಂಡವರ ನೋವಿನ ಮಾತಾಗಿದೆ.