ಚಿಕ್ಕಬಳ್ಳಾಪುರ : ನಗರ ಹೊರವಲಯದಲ್ಲಿರುವ ಬೆಸ್ಟ್ ಪದವಿ ಕಾಲೇಜಿನ ಆವರಣದಲ್ಲಿ ನಡೆದ ಸಾಂಪ್ರದಾಯಿಕ ದಿನಾಚರಣೆ ಕೇವಲ ಒಂದು ಕಾರ್ಯಕ್ರಮವಾಗಿರಲಿಲ್ಲ — ಅದು ಜೀವನದ ಮೌಲ್ಯಗಳನ್ನು ಮನಸಿಗೆ ಹತ್ತಿಸುವ ಸ್ಮರಣೀಯ ಕ್ಷಣವಾಗಿತ್ತು.ವಿದ್ಯಾರ್ಥಿಗಳ ವೇಷ ಭೂಷಣ ಸ್ವತಂತ್ರ ಹಕ್ಕಿಗಳ ಕಲರವ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಂಶುಪಾಲ ಡಾ.ರಘುನಾಥ್ ಮಾತನಾಡಿ, ಬೋಧಕ ವರ್ಗವು ಸದಾ ಕಾಲ ವಿದ್ಯಾರ್ಥಿಗಳ ಪಾಲಿಗೆ ಮಾರ್ಗದರ್ಶಕರೇ ಆಗಿರುತ್ತಾರೆ. ಪ್ರತಿ ತರಗತಿಯಲ್ಲಿಯೂ ಬೋಧನೆ ಸಂದರ್ಭದಲ್ಲಿ ವಿದ್ಯಾರ್ಥಿಗಳತ್ತ ನೋಡುವಾಗ ಕೇವಲ ಗುರುವಾಗಿಯೇ ಅಲ್ಲ, ಬದುಕಿನ ದಾರಿ ತೋರಿಸುವ ಮಾರ್ಗದರ್ಶಕರಾಗಿಯೇ ಮಾತಾಡುತ್ತಾರೆ. ಅವರಿಗೆ ದಾರಿದೀಪವಾಗುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
“ಪೋಷಕರನ್ನು ಗೌರವಿಸಿ, ಅವರ ಆಶೀರ್ವಾದವೇ ನಿಮ್ಮ ಶಕ್ತಿಯ ಮೂಲವಾಗಲಿ. ಗುರಿ ಸ್ಪಷ್ಟ ವಾಗಿದ್ದು ಪರಿಶ್ರಮದಿಂದ ಓದಿದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡೇ ಬರುತ್ತದೆ,” ಎಂದು ಹೇಳಿ ಮಾತು ಪ್ರತಿಯೊಬ್ಬ ವಿದ್ಯಾರ್ಥಿಯ ಮನದಲ್ಲಿ ಹೊಸಚಿಂತನೆಗೆ ಕಾರಣವಾದವು.
ಇದನ್ನೂ ಓದಿ: Chikkaballapur News: ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿದ್ದ ವಿದ್ಯಾರ್ಥಿನಿ ಉತ್ತಮ ಸಾಧನೆ
ಇಂದಿನ ಆಧುನಿಕ ಶಿಕ್ಷಣದಲ್ಲಿ ಮೌಲ್ಯಗಳು ನಿಧಾನವಾಗಿ ಮರೆಯಾಗುತ್ತಿರುವ ಬಗ್ಗೆ ಅವರು ವ್ಯಕ್ತಪಡಿಸಿದ ಕಳವಳ ಎಲ್ಲರ ಮನಸ್ಸನ್ನು ತಟ್ಟಿತು. “ಎಷ್ಟು ದೊಡ್ಡ ಸಾಧನೆ ಮಾಡಿದರೂ, ಪೋಷಕರ ಕಣ್ಣಲ್ಲಿ ನಾವು ಸದಾ ಮಕ್ಕಳೇ. ಅವರ ತ್ಯಾಗವನ್ನು ಮರೆಯಬೇಡಿ,” ಎಂಬ ಅವರ ಕರೆ ನಿಜಕ್ಕೂ ಮನಮುಟ್ಟುವಂತಿತ್ತು.
ಹಿರಿಯ ಪತ್ರಕರ್ತ ಟಿ.ಎಸ್. ನಾಗೇಂದ್ರ ಬಾಬು ಅವರು “ವಿದ್ಯೆಗೆ ವಿನಯವೇ ಭೂಷಣ” ಎಂಬುದು ವಿದ್ಯಾರ್ಥಿಗಳಿಗೆ ವೇದವಾಕ್ಯವಾಗಲಿ.ಶಾಲಾ ಕಾಲೇಜು ದಿನಗಳಲ್ಲಿ ಉತ್ತಮ ಹವ್ಯಾಸಗಳು ಮತ್ತು ಗುರು-ಹಿರಿಯರ ಮಾರ್ಗದರ್ಶನವೇ ವಿದ್ಯಾರ್ಥಿ ಜೀವನವನ್ನು ಸುಂದರಗೊಳಿಸುತ್ತದೆ ಎಂದರು.
ಕನ್ನಡ ಉಪನ್ಯಾಸಕ ಮುನಿರಾಜು ಎಂ. ಅರಿಕೆರೆ ಮಾತನಾಡಿ "ನಹಿ ಜ್ಞಾನೇನ ಸದೃಶಂ" ಎಂಬ ಶ್ಲೋಕ ಹೇಳುವಂತೆ ಜ್ಞಾನಕ್ಕೆ ಮಿಗಿಲಾದದ್ದು ಬೇರೊಂದಿಲ್ಲ. ಬೆಳಗಿನ ಬ್ರಾಹ್ಮೀ ಮಹೀರ್ತದ ಓದು ಉತ್ತಮ ಅಂಕಗಳಿಸಲು ನೆರವಾಗಲಿದೆ ಎನ್ನುತ್ತಾ ಜ್ಞಾನದ ಮಹತ್ವವನ್ನು ಮನದಟ್ಟು ಮಾಡಿದರು.
“ನಾವು ಧರಿಸುವ ಬಂಗಾರದ ಒಡವೆ ಅಥವಾ ಬೆಲೆಬಾಳುವ ಮುತ್ತು ಕಳೆದು ಹೋದರೆ ಮತ್ತೆ ಸಿಗಬಹುದು, ಆದರೆ ಹೊತ್ತು ಕಳೆದುಹೋದರೆ ಮರಳಿ ಸಿಗುವುದಿಲ್ಲ. ಇದನ್ನು ಮನಗಂಡು ಓದಿನ ಸಮಯದಲ್ಲಿ ಸಮಯಕ್ಕೆ ಬೆಲೆ ನೀಡಿ. ಸಾಮಾಜಿಕ ಜಾಲತಾಣಗಳಿಗಿಂತ ಪುಸ್ತಕಗಳೇ ನಿಮ್ಮ ನಿಜವಾದ ಸ್ನೇಹಿತರು,” ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ದಾರಿದೀಪವಾದರು.
ಆಡಳಿತಾಧಿಕಾರಿ ಡಾ. ರಾಮಣ್ಣ ಅವರು ಸಾಂಪ್ರದಾಯಿಕ ದಿನದ ಮಹತ್ವವನ್ನು ವಿವರಿಸಿ, “ಶ್ರದ್ಧೆ ಮತ್ತು ಸಹನೆ ನಿಮ್ಮ ಬದುಕಿನ ಆಧಾರವಾಗಲಿ,” ಎಂದು ಹಾರೈಸಿದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಮೂಡಿಬಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯ ಕ್ರಮಗಳು ಅವರಲ್ಲಿ ಅಡಗಿದ್ದ ಪ್ರತಿಭೆಯನ್ನು ಅನಾವರಣಗೊಳಿಸಿತು. ಸಂತೋಷ, ಸಂಸ್ಕೃತಿ ಮತ್ತು ಮೌಲ್ಯಗಳ ಸಂಯೋಜನೆಯಾಗಿ ಎಥ್ನಿಕ್ ಡೇ ಎಲ್ಲರ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.