ಮುದ್ದೇನಹಳ್ಳಿ: ಸೇವಾ ಕಾರ್ಯಗಳ ಹಿಂದೆ ಯಾವುದೇ ಸ್ವಾರ್ಥವಿರಬಾರದು. ನಿಸ್ವಾರ್ಥ ಪ್ರೇಮವೇ ಎಲ್ಲ ಸೇವೆಗಳ ಮೂಲವಾಗಿದ್ದು, ಪ್ರೇಮದ ಮೂಲಕವೇ ನಿಜವಾದ ಸೇವೆ ಮಾಡಲು ಸಾಧ್ಯ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ(Sadguru Sri Madhusudan Sai) ತಿಳಿಸಿದರು.
ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿರುವ ಸಾಯಿ ಕೃಷ್ಣನ್ ಪ್ರೇಮಾಮೃತಂ ಸಭಾಂಗಣದಲ್ಲಿ ಭಾನುವಾರ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ವತಿಯಿಂದ ಆಯೋಜಿಸಿದ್ದ ‘ಸಾಯಿ ಸ್ಫೂರ್ತಿ–2026’ ಹಳೆಯ ವಿದ್ಯಾರ್ಥಿಗಳ ವಾರ್ಷಿಕ ಸಮ್ಮಿಲನದಲ್ಲಿ ಮಾತನಾಡಿದರು.
ಎಲ್ಲ ಶಕ್ತಿಗಳಿದ್ದರೂ ನಿಸ್ವಾರ್ಥ ಪ್ರೇಮವನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ಭಗವಾನ್ ಸತ್ಯಸಾಯಿ ಬಾಬಾ ಹೇಳುತ್ತಿದ್ದರು. ಪ್ರೇಮದ ಮೂರ್ತರೂಪವಾಗಿರುವ ಗುರುವಿನಿಂದ ಮಾತ್ರ ಇಂತಹ ಉನ್ನತ ಮೌಲ್ಯಗಳನ್ನು ಕಲಿಯಲು ಸಾಧ್ಯ. 'ವಸುಧೈವ ಕುಟುಂಬಕಂ' ಎಂಬ ಉದಾತ್ತ ಆದರ್ಶದಿಂದ ಅನೇಕರು ಈ ಸಂಸ್ಥೆಯತ್ತ ಆಕರ್ಷಿತರಾಗಿದ್ದಾರೆ. ಅದಕ್ಕೆ ಪ್ರಮುಖ ಕಾರಣ ನಿಸ್ವಾರ್ಥ ಪ್ರೇಮ ಮತ್ತು ಸೇವಾ ಮನೋಭಾವ ಎಂದು ಹೇಳಿದರು.
ಇದನ್ನೂ ಓದಿ: Sadguru Shri Madhusudhan Sai: ರಾಮನಾಮ ಸ್ಮರಣೆಯಿಂದ ದುರ್ಗುಣಗಳ ನಿವಾರಣೆ: ಸದ್ಗುರು ಶ್ರೀ ಮಧುಸೂದನ ಸಾಯಿ
ಸಮಾಜಕ್ಕೆ ಗಣನೀಯ ಕೊಡುಗೆ ನೀಡುತ್ತಿರುವ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಬಾಲಕಿಯರ ವಸತಿ ನಿಲಯದ ವಾರ್ಡನ್ ಡಾ.ಸಾಯಿ ಲಕ್ಷ್ಮಿ ಬಿ.ಎಂ. ಹಾಗೂ 'ಎಜುಕೇಶನ್ ಫಾರ್ ಆಲ್' ಸಂಸ್ಥೆಯ ಸಿಇಒ ಶಿವರಾಮ್ ಬೇಟಾ ಅವರಿಗೆ ‘ಅಲುಮ್ನಿ ಎಕ್ಸಲೆನ್ಸ್’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ.ನಾಗೇಶ್ ಎನ್.ಎಸ್. ಮಾತನಾಡಿ, ರಾಮ ಮತ್ತು ಕೃಷ್ಣರಂತಹ ಮಹಾನ್ ವ್ಯಕ್ತಿಗಳಿಗೂ ಗುರುಗಳಿದ್ದರು. ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಮಾರ್ಗದರ್ಶನ ಅತ್ಯಂತ ಮಹತ್ವದ್ದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಡಾ. ನಾಗೇಶ್ ಹಾಗೂ ಶ್ರೀ ವೆಂಕಟೇಶ್ವರ ಎಜುಕೇಶನ್ ಫೌಂಡೇಶನ್ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಶಶಿಧರ್ ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು.
ಮಂಡ್ಯದ ಶ್ರೀ ಸತ್ಯಸಾಯಿ ಶಾರದಾನಿಕೇತನಂ ಗುರುಕುಲದ ಪ್ರಧಾನ ಪಾಲಕ ಡಾ. ಗೌರವ್ ಎಂ. ಅವರು ಹಳೆಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 'ಈಚ್ ಒನ್ ಎಜುಕೇಟ್ ಒನ್ ಫೌಂಡೇಶನ್' ಟ್ರಸ್ಟಿ ಪಿ.ವಿ. ಕೃಷ್ಣ ಮೋಹನ್ ವಾರ್ಷಿಕ ವರದಿ ಮಂಡಿಸಿದರು.
ಗದಗದ ಶ್ರೀ ಸತ್ಯಸಾಯಿ ವಾಣಿನಿಕೇತನಂ ಗುರುಕುಲದ ಉಪಪಾಲಕಿ ಪಿ.ಲಕ್ಷ್ಮಿ ನೇಹಾ ಹಾಗೂ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ರಘುಪತಿ ಹಳೆಯ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದರು.
ಪ್ರಶಾಂತಿ ಬಾಲ ಮಂದಿರ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಎನ್.ನರಸಿಂಹಮೂರ್ತಿ, ಡಾ.ಶಶಿಧರ್ ಮುನಿಯಪ್ಪ, ಡಾ. ನಾಗೇಶ್ ಎನ್.ಎಸ್., ಹಳೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.