ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಆರೋಪ: ಇಬ್ಬರ ಬಂಧನ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ದೇಶದ ವಿವಿಧ ಭಾಗಗಳ ಕೆಲವರು ಸದಸ್ಯರಾಗಿದ್ದ ಟೆಲಿಗ್ರಾಂ ಗ್ರೂಪ್‌ನಲ್ಲಿ ವಿಧ್ವಂಸಕ ಕೃತ್ಯಗಳ ಕುರಿತು ಚರ್ಚೆ ನಡೆದಿರುವುದು ಬೆಳಕಿಗೆ ಬಂದಿದೆ. ಶ್ರೀಮಂತರನ್ನು ಅಪಹರಿಸಿ ಹಣ ಸಂಗ್ರಹಿಸಿ, ಅದನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುವ ಕುರಿತು ಚರ್ಚೆ ನಡೆದಿತ್ತು ಎನ್ನಲಾಗಿದೆ.

ಚಿಕ್ಕಬಳ್ಳಾಪುರ: ದೇಶದಲ್ಲಿ ವಿಧ್ವಂಸಕ ಹಾಗೂ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಬಾಪೂಜಿನಗರದ ನಿವಾಸಿ ಶಬ್ಬೀರ್,  ಉತ್ತರ ಭಾರತ ಮೂಲದ ಸಲ್ಮಾನ್ ಎಂಬ ಯುವಕರನ್ನು ಬಂಧಿಸಿದ್ದಾರೆ.

ಟೆಲಿಗ್ರಾಂ ಆಪ್‌ನಲ್ಲಿ ಗ್ರೂಪ್‌ವೊಂದನ್ನು ರಚಿಸಿಕೊಂಡು ದಾಳಿ ನಡೆಸುವುದು, ಅದಕ್ಕೆ ಹಣ ಸಂಗ್ರಹಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದ್ದ ಆರೋಪ ಶಬ್ಬೀರ್ ಮೇಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಟೆಲಿಗ್ರಾಂನಲ್ಲಿ ಪಿತೂರಿ?

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ದೇಶದ ವಿವಿಧ ಭಾಗಗಳ ಕೆಲವರು ಸದಸ್ಯರಾಗಿದ್ದ ಟೆಲಿಗ್ರಾಂ ಗ್ರೂಪ್‌ನಲ್ಲಿ ವಿಧ್ವಂಸಕ ಕೃತ್ಯಗಳ ಕುರಿತು ಚರ್ಚೆ ನಡೆದಿರುವುದು ಬೆಳಕಿಗೆ ಬಂದಿದೆ. ಶ್ರೀಮಂತರನ್ನು ಅಪಹರಿಸಿ ಹಣ ಸಂಗ್ರಹಿಸಿ, ಅದನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುವ ಕುರಿತು ಚರ್ಚೆ ನಡೆದಿತ್ತು ಎನ್ನಲಾಗಿದೆ.

ಇದನ್ನೂ ಓದಿ: Chikkaballapur News: ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಕಲ್ಪಿಸಿ ಕೃಷಿ ಅಭಿವೃದ್ಧಿಗೆ ಸಹಕಾರ: ವಿ.ಮಧುಚಂದ್ರ

ಹಣ ಸಂಗ್ರಹಿಸಿದ ಬಳಿಕ ದೇಶದಲ್ಲಿ ಅಶಾಂತಿ ಹಾಗೂ ಅರಾಜಕತೆ ಸೃಷ್ಟಿಸುವ ಉದ್ದೇಶದ ಕುರಿತು ಮಾತುಕತೆ ನಡೆದಿರುವ ಆರೋಪವೂ ಕೇಳಿಬಂದಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adithyanath) ಸೇರಿದಂತೆ ಕೆಲ ರಾಜಕೀಯ ಮುಖಂಡರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು ಗ್ರೂಪ್‌ನಲ್ಲಿ ಚರ್ಚೆ ನಡೆದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಇನ್‌ಸ್ಟಾಗ್ರಾಮ್ ಚಟುವಟಿಕೆ ಮೇಲೆ ನಿಗಾ

ಶಬ್ಬೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಪೋಸ್ಟ್ಗಳಿಗೆ ಲೈಕ್ ಹಾಗೂ ಕಾಮೆಂಟ್ ಮಾಡುತ್ತಿದ್ದ ಎನ್ನಲಾದ ಹಿನ್ನೆಲೆಯಲ್ಲಿ ರಾಜ್ಯ ಗುಪ್ತಚರ ಇಲಾಖೆ ಆತನ ಸಾಮಾಜಿಕ ಜಾಲತಾಣ ಚಟುವಟಿಕೆಗಳ ಮೇಲೆ ನಿಗಾ ಇರಿಸಿತ್ತು. ಈ ಕುರಿತು ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ.

ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಶಬ್ಬೀರ್‌ನನ್ನು ಬಂಧಿಸಿ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಮೊಬೈಲ್‌ನಲ್ಲಿದ್ದ ಇನ್‌ಸ್ಟಾಗ್ರಾಮ್ ಹಾಗೂ ಟೆಲಿಗ್ರಾಂ ಚಟುವಟಿಕೆಗಳನ್ನು ಪರಿಶೀಲಿಸಿದ ವೇಳೆ ಹಲವು ಮಾಹಿತಿಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 113ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಬ್ಬೀರ್‌ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಟೆಲಿಗ್ರಾಂ ಗ್ರೂಪ್‌ನಲ್ಲಿದ್ದ ಇತರ ಸದಸ್ಯರು ಯಾರು, ಅವರ ಸಂಪರ್ಕ ಜಾಲವೇನು ಹಾಗೂ ಪ್ರಕರಣದಲ್ಲಿ ಇನ್ನಷ್ಟು ಮಂದಿಯ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.