ಚಿಕ್ಕಬಳ್ಳಾಪುರ: ತಾಲೂಕಿನ ಗುರುಕುಲ ನಾಗೇನಹಳ್ಳಿ ಗ್ರಾಮದಲ್ಲಿ ಕರಡಿ ದಾಳಿಯಿಂದ (Bear Attack) ಇಬ್ಬರು ರೈತರು ಗಾಯಗೊಂಡಿದ್ದಾರೆ. ಟೊಮೇಟೊ ತೋಟದಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹಪ್ಪ ಎಂಬುವರ ಮೇಲೆ ಕರಡಿ ದಾಳಿ ಮಾಡಿದ್ದು, ಇವರಿಗೆ ಮುಖ, ತಲೆ, ಕಿವಿ, ಕಣ್ಣು ಹಾಗೂ ದೇಹದ ಮೇಲೆ ಗಂಭೀರ ಗಾಯಗಳಾಗಿವೆ. ಇದೇ ವೇಳೆ ಪಕ್ಕದ ತೋಟದಲ್ಲಿದ್ದ ಕೃಷ್ಣಪ್ಪ ಎಂಬುವರ ಮೇಲೆಯೂ ಕರಡಿ ದಾಳಿ ಮಾಡಿದ್ದು, ಇವರ ಕೈಗೆ ಗಾಯವಾಗಿದೆ.
ಕರಡಿ ದಾಳಿಗೆ ಒಳಗಾದ ರೈತ ನರಸಿಂಹಪ್ಪ ಹಾಗೂ ಕೃಷ್ಣಪ್ಪ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ನರಸಿಂಹಪ್ಪ ಸ್ಥಿತಿ ಗಂಭೀರವಾಗಿದೆ. ನರಸಿಂಹಪ್ಪನ ಮೇಲೆ ದಾಳಿ ಮಾಡಿದ ಕರಡಿ, ಪಕ್ಕದ ತೋಟದಲ್ಲಿದ್ದ ಕೃಷ್ಣಪ್ಪ ಎಂಬುವರ ಮೇಲೂ ದಾಳಿ ಮಾಡಿದೆ.
ಕೃಷ್ಣಪ್ಪನ ಕೈಯನ್ನು ಬಲವಾಗಿ ಹಿಡಿದು ಕಚ್ಚಿದ್ದರಿಂದ ಆಘಾತಕ್ಕೊಳಗಾದ ಆತ ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಂಡಿದ್ದಾರೆ. ಅತನ ನೋಡಿ ಅಕ್ಕಪಕ್ಕದ ತೋಟದ ರೈತರು ಓಡಿ ಬಂದಿದ್ದಾರೆ. ಜನರ ಗುಂಪು ಬರುತ್ತಿರುವುದನ್ನು ಗಮನಿಸಿದ ಕರಡಿ, ಕೃಷ್ಣಪ್ಪ ಅವರ ಕೈಬಿಟ್ಟು ಓಡಿಹೋಗಿದೆ.
ಗುರುಕುಲ ನಾಗೇನಹಳ್ಳಿ ಗ್ರಾಮದ ಬಳಿ ಇಬ್ಬರು ರೈತರ ಮೇಲೆ ಏಕಾಏಕಿ ಕರಡಿ ದಾಳಿ ನಡೆಸಿರುವ ಪ್ರಕರಣ ಸುತ್ತಮುತ್ತಲ ಗ್ರಾಮಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದು ಒಬ್ಬೊಬ್ಬರೇ ತೋಟದ ಕಡೆ ಹೋಗಲು ಹಿಂಜರಿಯುವ ವಾತಾವರಣ ಸೃಷ್ಟಿಯಾಗಿದೆ
ಗಾಯಾಳು ಕೃಷ್ಣಪ್ಪ ಹೇಳುವಂತೆ ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಕರಡಿಯೊಂದು ಮನುಷ್ಯರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಕರಡಿ ದಾಳಿಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಗಾಯಾಳುಗಳನ್ನು ದಾಖಲಿಸಿರುವ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿದ್ದಾರೆ.