ಚಿಕ್ಕಬಳ್ಳಾಪುರ: ಒಂದೆಡೆ ಸಂಸದ ಡಾ.ಕೆ.ಸುಧಾಕರ್(MP Dr K Sudhakar) ಅವರ ನೇತೃತ್ವದಲ್ಲಿ 10 ಸಾವಿರ ಮಂದಿಯ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಬೃಹತ್ ಕಾರ್ಯಕ್ರಮ, ಮತ್ತೊಂದೆಡೆ ಕ್ಷೇತ್ರದ ಮಹಿಳಾ ಕಾರ್ಯ ಕರ್ತೆಯರ ಸೇವೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ. ರೆಡ್ಡಿ ಆಯೋಜಿಸಿರುವ ‘ನಾರಿ ಶಕ್ತಿ ನಮನ’ ಕಾರ್ಯಕ್ರಮದಲ್ಲಿ 2ಸಾವಿರ ಮಂದಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ದಿನದಂದೇ ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ಈ ಎರಡು ಬೃಹತ್ ಕಾರ್ಯಕ್ರಮಗಳು ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿವೆ.
ಸಂಸದ ಡಾ.ಕೆ.ಸುಧಾಕರ್ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಉದ್ದೇಶದಿಂದ ಬೃಹತ್ ವೇದಿಕೆಯಲ್ಲಿ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸುಮಾರು 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: Dr K Sudhakar: ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡುವ ಪಕ್ಷ ಬಿಜೆಪಿ: ಡಾ.ಕೆ.ಸುಧಾಕರ್
ಮತ್ತೊಂದೆಡೆ, ಚಿಕ್ಕಬಳ್ಳಾಪುರ ಮತ್ತು ಮಂಚೇನಹಳ್ಳಿ ತಾಲ್ಲೂಕುಗಳ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಡುಗೆ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 2ಸಾವಿರ ಮಹಿಳೆಯರಿಗೆ ಬಾಗಿನ ಅರ್ಪಿಸಿ ಗೌರವಿಸುವ ‘ನಾರಿ ಶಕ್ತಿ ನಮನ’ ಕಾರ್ಯಕ್ರಮಕ್ಕೆ ಸಂದೀಪ್ ಬಿ. ರೆಡ್ಡಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಸಮಾಜ ಸೇವೆ ನಿಷ್ಕಲ್ಮಶ ಹಾಗೂ ಸ್ವಾರ್ಥರಹಿತವಾಗಿರಬೇಕು ಎಂಬ ಆಶಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ಸಂದೀಪ್ ರೆಡ್ಡಿ ತಿಳಿಸಿದ್ದಾರೆ. ಸುಮಾರು 8ರಿಂದ 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯನ್ನೂ ವ್ಯಕ್ತಪಡಿಸಿದ್ದಾರೆ. ಇವರಿಗೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಬೆಂಬಲ ಮತ್ತು ಮಾರ್ಗದರ್ಶನವಿದೆ ಎನ್ನಲಾಗಿದೆ. ಇದೇ ದಿನ ಎರಡು ವಿಭಿನ್ನ ಉದ್ದೇಶಗಳ ಬೃಹತ್ ಕಾರ್ಯಕ್ರಮಗಳು ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಒಂದು ಕಡೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವ ಪ್ರಯತ್ನವಾದರೆ, ಮತ್ತೊಂದೆಡೆ ಸಮಾಜದ ತಳಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರ ಶ್ರಮಕ್ಕೆ ಗೌರವ ಸಲ್ಲಿಸುವ ಪ್ರಯತ್ನವಾಗಿದೆ. ಎರಡೂ ಕಾರ್ಯಕ್ರಮಗಳ ಆಯೋಜಕರು ಒಂದೇ ಕ್ಷೇತ್ರದವರಷ್ಟೇ ಅಲ್ಲದೆ, ಒಂದೇ ಊರಿನವರು ಒಂದೇ ಸಮುದಾಯದವರು ಎಂಬುದು ವಿಶೇಷ.
ಇಬ್ಬರು ಕೂಡ ಬಿಜೆಪಿ ಪಕ್ಷದವರಾಗಿದ್ದು ಒಂದೇ ದಿನ ಜನರ ಮುಂದೆ ತಮ್ಮ ತಮ್ಮ ಕಾರ್ಯಕ್ರಮ ಗಳ ಮೂಲಕ ಶಕ್ತಿ ಸಾಮರ್ಥ್ಯ ಜನಬೆಂಬಲವನ್ನು ಒರೆಗೆ ಹಚ್ಚುತ್ತಿದ್ದಾರೆ.
ಹೀಗಾಗಿ ಸಾರ್ವಜನಿಕರು ಯಾವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಪಂದಿಸುತ್ತಾರೆ ಎಂಬ ಕುತೂಹಲ ಸಹಜವಾಗಿಯೇ ಕ್ಷೇತ್ರದಲ್ಲಿ ಮೂಡಿದೆ. ಎರಡು ಕಾರ್ಯಕ್ರಮಗಳ ಯಶಸ್ಸು, ಜನರ ಪಾಲ್ಗೊಳ್ಳುವಿಕೆ ಹಾಗೂ ಸಾರ್ವಜನಿಕ ಪ್ರತಿಕ್ರಿಯೆ ಹೇಗಿರಲಿದೆ ಎಂಬುದಕ್ಕೆ ನವೆಂಬರ್ 1ರ ಕಾರ್ಯಕ್ರಮಗಳೇ ಉತ್ತರ ನೀಡಲಿವೆ.