ಚಿಕ್ಕಬಳ್ಳಾಪುರ: ಗ್ರಾಮೀಣ ಯುವಜನರು ಹಾಗೂ ಮಹಿಳೆಯರನ್ನು ಕೌಶಲ್ಯಾಧಾರಿತ ತರಬೇತಿ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ವಿಕಸಿತ ಭಾರತದ ನಿರ್ಮಾಣದಲ್ಲಿ ಇವುಗಳ ಕೊಡುಗೆ ಮಹತ್ವ ದ್ದಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್. ಶಶಿಕುಮಾರ್(S. Shashikumar, Joint Secretary, Union Ministry of Rural Development) ಹೇಳಿದರು.
ತಾಲ್ಲೂಕಿನ ನಂದಿ ಹೋಬಳಿ ವ್ಯಾಪ್ತಿಯ ಚದಲಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗೆ ಶನಿವಾರ ಅನಿರೀಕ್ಷಿತ ಭೇಟಿ ನೀಡಿದ ಅವರು, ಸಂಸ್ಥೆಯಲ್ಲಿ ನಡೆಯುತ್ತಿರುವ ವಿವಿಧ ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮಗಳನ್ನು ಪರಿಶೀಲಿಸಿದರು.
ತರಬೇತಿಯ ಗುಣಮಟ್ಟ, ಶಿಬಿರಾರ್ಥಿಗಳಿಗೆ ಒದಗಿಸಲಾಗುತ್ತಿರುವ ಊಟ, ವಸತಿ, ಸ್ವಚ್ಛತೆ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಬಳಿಕ ಹೊಲಿಗೆ ತರಬೇತಿ ಹಾಗೂ ಕೃಷಿ ಉದ್ಯಮ ಶೀಲತಾ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿ, ತರಬೇತಿಯ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Chikkaballapur News: ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯಿತಿಗಳೊಂದಿಗೆ ಸಾರ್ವಜನಿಕರು ಸಹಕರಿಸಬೇಕು: ಸಿಇಒ ಡಾ.ವೈ.ನವೀನ್ ಭಟ್
ತರಬೇತಿ ಪಡೆದವರು ಉದ್ಯಮಿಗಳಾಗಬೇಕು: ತರಬೇತಿ ಪೂರ್ಣಗೊಳಿಸಿದ ಬಳಿಕ ಸ್ವಂತ ಉದ್ಯಮ ಆರಂಭಿಸಲು ಅಗತ್ಯವಿರುವ ಬ್ಯಾಂಕ್ ಸಾಲ ಹಾಗೂ ಇತರ ಹಣಕಾಸಿನ ನೆರವು ಸುಲಭ ವಾಗಿ ದೊರೆಯುವಂತೆ ವ್ಯವಸ್ಥೆ ಕಲ್ಪಿಸುವುದು ಅಗತ್ಯ. ತರಬೇತಿ ಪಡೆದ ಪ್ರತಿಯೊಬ್ಬರೂ ತಮ್ಮ ಕೌಶಲ್ಯವನ್ನು ಬಳಸಿಕೊಂಡು ಸ್ವಾವಲಂಬಿಗಳಾಗುವುದರ ಜೊತೆಗೆ ಇತರರಿಗೂ ಉದ್ಯೋಗಾವಕಾಶ ಕಲ್ಪಿಸುವಂತಾಗಬೇಕು ಎಂದು ಶಶಿಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಪ್ರಸ್ತುತ ತರಬೇತಿ ಪಡೆಯುತ್ತಿರುವವರು ಹಾಗೂ ಈ ಹಿಂದೆ ತರಬೇತಿ ಪಡೆದು ಉದ್ಯಮ ಆರಂಭಿಸಿರುವ ಹಳೆಯ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಉದ್ಯಮ ಆರಂಭಿಸುವಾಗ ಎದುರಾಗುವ ಸಮಸ್ಯೆಗಳು, ಬ್ಯಾಂಕ್ ಸಾಲ ಮತ್ತು ಇತರ ಹಣಕಾಸು ಸೌಲಭ್ಯ ಪಡೆಯುವ ವಿಧಾನ ಹಾಗೂ ತರಬೇತಿ ಸಂಸ್ಥೆಯಿಂದ ಹೊಂದಿರುವ ನಿರೀಕ್ಷೆಗಳ ಕುರಿತು ಮಾಹಿತಿ ಪಡೆದರು.
ಕೆನರಾ ಬ್ಯಾಂಕ್ ಪ್ರಧಾನ ಮಹಾಪ್ರಬಂಧಕ ಶ್ರೀನಾಥ್ ಜೋಶಿ, ಹಿರಿಯ ಮಹಾಪ್ರಬಂಧಕ ಜಗನ್ನಾಥ್ ರಾವ್, ರುಡ್‌ಸೆಟ್ ಸಂಸ್ಥೆಯ ಡೈರೆಕ್ಟರ್ ಜನರಲ್ ರಾಜು ಎನ್. ಕೋಲಿ, ನ್ಯಾಷನಲ್ ಸ್ಕಿಲ್ ಮಿಷನ್‌ನ ಆಶಿಷ್ ಸಿನ್ಹಾ, ನ್ಯಾಷನಲ್ ಕಂಟ್ರೋಲರ್ ಆರ್.ಆರ್. ಸಿಂಗ್, ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್, ಸಿ.ಬಿ.ಆರ್.ಸಿ.ಟಿ. ನಿರ್ದೇಶಕ ಎ. ನಾರಾಯಣಸ್ವಾಮಿ ಹಾಗೂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.