ಚಿಕ್ಕಬಳ್ಳಾಪುರ: ಭಾರತೀಯರಿಗೆ ಸಂವಿಧಾನದ ಮೂಲಕ ನೀಡಿರುವ ನಾಗರೀಕ ಹಕ್ಕುಗಳ ದಮನ ಆದಾಗ ಅದರ ವಿರುದ್ಧ ತಿರುಗಿಬಿದ್ದು ಉಪವಾಸ ಸತ್ಯಾಗ್ರಹ ಎಂಬ ನ್ಯಾಯ ಮಾರ್ಗದ ಮೂಲಕ ನ್ಯಾಯಕೇಳಿದರೂ ಪೋಲಿಸರ ಬಲಪ್ರಯೋಗದ ಮೂಲಕ ಹತ್ತಿಕ್ಕುವುದು ಯಾವ ನ್ಯಾಯ ಎಂದು ಸಾಮಾಜಿಕ ಹೋರಾಟಗರ ಭಾಸ್ಕರ್ ಅಂಕಾಲಮಡುಗು ಶಿವಾರೆಡ್ಡಿ ಜಿಲ್ಲಾಡಳಿತವನ್ನು ಪ್ರಶ್ನಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೇ 18ರಂದು ಜಿಲ್ಲಾಡಳಿತ ಭವನದ ಎದುರು ಉಪವಾಸ ಸತ್ಯಾಗ್ರಹ ನಡೆಸುವ ಪೂರ್ವದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಈ ಮೈಲ್‌ಗೆ ಮಾಹಿತಿ ನೀಡಲಾಗಿದೆ. ಸದರಿ ಕಚೇರಿಗಳ ಟಪಾಲಿನಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಅನುಮತಿ ಕೋರಿ ಮನವಿ ಪತ್ರ ನೀಡಿ ಹಿಂಬ ರಹ ಪಡೆಯಲಾಗಿದೆ.ಇವೆಲ್ಲಾ ಪೂರ್ಣಗೊಂಡ ನಂತರವೇ ಉಪವಾಸ ಸತ್ಯಾಗ್ರಹ ಮಾಡಲಾಗಿದೆ.
ಆದರೂ ಕೂಡ ಸಂಜೆ 7 ಗಂಟೆಯಲ್ಲಿ ಬಲವಂತದಿಂದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹರೀಶ್ ಮತ್ತು ತಂಡ ನನ್ನ ಸತ್ಯಾಗ್ರಹವನ್ನು ಒಕ್ಕಲೆಬ್ಬಿಸಿದ್ದಾರೆ. ಹರೀಶ್ ಹೇಳುವಂತೆ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ನಿಮ್ಮನ್ನು ಇಲ್ಲಿಂದ ಕಳಿಸಲಿಲ್ಲ ಎಂದರೆ ನಿಮ್ಮ ವಿರುದ್ಧ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳೇ ನನಗೆ ಮೌಖಿಕ ನಿರ್ದೇಶನ ನೀಡಿದ್ದಾರೆ ಎಂದು ಹೇಳಿ ನನ್ನನ್ನು ಅಲ್ಲಿಂದ ಎಬ್ಬಿಸಲು ಕಾರಣವಾಗಿದ್ದಾರೆ. ನ್ಯಾಯ ಕೊಡ ಬೇಕಾದವರೇ ಹೀಗೆ ಮಾಡಬಹುದೇ ಎಂದು ಬೇಸರಿಸಿದರು.
ಇದನ್ನೂ ಓದಿ: Chikkaballapur News: ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮೂರುವರೆ ವರ್ಷದ ಬಾಲಕಿಗೆ ಹೊಸ ಜನ್ಮ ನೀಡಿದ ವೈದ್ಯರು
ಸರಕಾರಿ ಅಧಿಕಾರಿಗಳು ಸಂವಿಧಾನಬದ್ಧವಾಗಿ ನಾಗರೀಕರೊಂದಿಗೆ ವ್ಯವಹರಿಸಬೇಕು.ಸಾಮಾಜಿಕ ಹೋರಾಟಗಾರರಿರಲಿ ಸಾಮಾನ್ಯ ನಾಗರೀಕರೇ ಆಗಿರಲಿ ಸಮಸ್ಯೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿ ದರೆ ಸಕಾಲದಲ್ಲಿ ಪರಿಹಾರ, ಸೂಕ್ತದಾಖಲೆಗಳನ್ನು ಒದಗಿಸಬೇಕು. ನಾಗರೀಕರು ಸಲ್ಲಿಸಿದ ದೂರು ಗಳ ಆಧಾರದಲ್ಲಿ ಪೊಲೀಸ್ ಇಲಾಖೆ ತಕ್ಷಣ ಎಫ್‌ಐಆರ್ ದಾಖಲಿಸಬೇಕು. ಮುಂದುವರೆದು ತನಿಖೆ ಕೈಗೊಳ್ಳಬೇಕು. ಏ.10ರಂದು ಚಿಂತಾಮಣಿ ತಹಶೀಲ್ದಾರ್ ಕಛೇರಿಗೆ ಸಲ್ಲಿಸಿದ 75 ಮನವಿಗಳು ಮತ್ತು 5 ವಿಶೇಷ ಮನವಿಗಳ ಕುರಿತು ಕೈಗೊಂಡ ಕ್ರಮಗಳ ಮಾಹಿತಿ ನೀಡಬೇಕು ಎಂದು ಮನವಿ ಮಾಡುವುದು ತಪ್ಪಾದರೆ ಹೇಗೆ ಎಂದು ಆಕ್ರೋಶದಿಂದ ನುಡಿದರು.
ಜಿಲ್ಲಾಧಿಕಾರಿಗಳೇ ಈ ದೇಶದ ನಾಗರೀಕರಾಗಿ ಶುದ್ಧ ಕುಡಿಯುವ ನೀರು ಕೇಳುವುದು ನಮ್ಮ ಹಕ್ಕು ಹೇಗೋ ಅದನ್ನು ಸಕಾಲದಲ್ಲಿ ಒದಗಿಸುವುದು ನಿಮ್ಮ ಕರ್ತವ್ಯ. ಮುಂದುವರೆದು ಭೂಗರ್ಭ ಜಲವನ್ನು ಸಂರಕ್ಷಿಸುವುದು, ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದು, ಮೂಲ ಅಗತ್ಯ ಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುವುದು ಮಾಡಬಾರದು. ಸರಕಾರಿ ನಿಧಿಗಳ ದುರುಪಯೋಗ ನಿಲ್ಲಿಸಿ ಶಾಶ್ವತ ಅಭಿವೃದ್ಧಿಗೆ ಆಧ್ಯತೆ ನೀಡುವುದು. ಭವಿಷ್ಯದ ಪೀಳಿಗೆಯ ಹಿತಾಸಕ್ತಿಯನ್ನು ಕಾಪಾಡಬೇಕು. ರೈತರು ಬಡವರು ಮತ್ತು ಬಿಪಿಎಲ್ ಕುಟುಂಬಗಳನ್ನು ರಕ್ಷಿಸುವುದು ಕೂಡ ನಿಮ್ಮ ಕರ್ತವ್ಯ.
ರಾಜಕೀಯ ಲಾಭಕ್ಕಾಗಿ ಜನಸಾಮಾನ್ಯರಿಗೆ ಕಿರುಕುಳ ನೀಡಬಾರದು.ರಾಜಕೀಯ ಉದ್ದೇಶಗಳಿಂದ ನಡೆದ ತಪ್ಪುಗಳನ್ನು ತಕ್ಷಣ ಸರಿಸಪಡಿಸಿ. ಸಂವಿಧಾನ, ಉತ್ತಮ ಆಡಳಿತ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಆಧಿಕಾರಿಗಳು ಪಾಲಿಸಿದರೆ ಸಾಮಾಜಿಕ ಹೋರಾಟಗಾರರಿಗೆ ಕೆಲಸವೇ ಇರುವುದಿಲ್ಲ ಎಂದರು.
ರಾಜಕಾರಣಿಗಳಿಂದ ನಾವು ಪ್ರತಿಭಟನೆ ನಡೆಸುವುದಾಗಲಿ, ಸಂವಿಧಾನದ ಪಾಲನೆಯ ಪಾಠವಾಗಲಿ ಕಲಿಯಬೇಕಿಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಕೂಡ ಒಂದೇ ನ್ಯಾಯ. ಆರ್‌ಟಿಐ ಮೂಲಕ ಅರ್ಜಿ ಹಾಕಿದರೆ ಸಕಾಲದಲ್ಲಿ ಮಾಹಿಯನ್ನೇ ನೀಡುವುದಿಲ್ಲ. ನೀವು ಪಡೆಯುತ್ತಿರುವ ಸಂಬಳ ನಮ್ಮ ತೆರಿಗೆಯ ಹಣದಿಂದ ಎಂಬುದನ್ನು ಮರೆಯಬಾರದು. ಅಧಿಕಾರಿಗಳೇ ನೀವು ಬ್ರಿಟೀಷರಲ್ಲ, ಭಾರತೀಯರೇ ಆಗಿದ್ದೀರಿ. ಸಂವಿಧಾನ ಬದ್ಧವಾಗಿ ನಡೆದುಕೊಳ್ಳಿ, ಮಂತ್ರಿಗಳು ಸರಕಾರ 5 ವರ್ಷ ಕ್ಕೊಮ್ಮೆ ಬದಲಾಗುತ್ತಾರೆ. ಆದರೆ ನೀವು 60 ವರ್ಷ ಅಧಿಕಾರದಲ್ಲಿ ಇರುತ್ತೀರಿ ಎಂಬುದನ್ನು ಮರೆಯಬಾರದು ಎಂದರು.