ಶಿಡ್ಲಘಟ್ಟ: ಪತ್ರಕರ್ತರು ಯಾವುದೇ ಸುದ್ದಿಯನ್ನು ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆ ಯನ್ನು ಪರಿಶೀಲಿಸಿ, ವಾಸ್ತವಾಂಶಗಳನ್ನು ಜನರಿಗೆ ತಲುಪಿಸಬೇಕು. ಸತ್ಯದ ಪರವಾಗಿ ನಿಲ್ಲುವುದೇ ಪತ್ರಕರ್ತರ ನಿಜವಾದ ಧೈರ್ಯವಾಗಿದ್ದು, ಧೈರ್ಯದ ಜತೆಗೆ ಸಂಯಮವೂ ಅಗತ್ಯ ಎಂದು ಪ್ರಧಾನ ಭಾಷಣಕಾರ ಡಾ.ವೈ.ಜಿ.ಪದ್ಮನಾಗರಾಜು ಹೇಳಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸಂಪಾದಕರ ಹಾಗೂ ವರದಿಗಾರರ ಸಂಘದ ವತಿಯಿಂದ ಆಯೋಜಿಸಿದ್ದ ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುದ್ದಿಯನ್ನು ಅತಿರಂಜಿತಗೊಳಿಸದೆ ಇರುವುದನ್ನು ಇರುವಂತೆಯೇ ಜನರ ಮುಂದಿಡಬೇಕು. ಸಮಾಜದಲ್ಲಿನ ಸಮಸ್ಯೆಗಳು, ಜನರ ನೋವು-ನಲಿವು ಹಾಗೂ ಅನ್ಯಾಯಗಳನ್ನು ಆಡಳಿತದ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಉತ್ತಮ ಕಾರ್ಯಗಳು ಮತ್ತು ಸಾಧನೆ ಗಳಿಗೂ ಪತ್ರಿಕೆಗಳಲ್ಲಿ ಸೂಕ್ತ ಪ್ರಚಾರ ದೊರೆಯಬೇಕು ಎಂದರು.
ಇದನ್ನೂ ಓದಿ: Shidlaghatta News: ಕ್ರೀಡಾಕೂಟದಲ್ಲಿ ಮಿಂಚಿದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು
ಪತ್ರಿಕೋದ್ಯಮದ ಮೇಲಿರುವ ಜನರ ವಿಶ್ವಾಸ ಉಳಿಸಿಕೊಳ್ಳುವುದು ಪ್ರತಿಯೊಬ್ಬ ಪತ್ರಕರ್ತನ ಜವಾಬ್ದಾರಿಯಾಗಿದೆ. ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಪತ್ರಿಕೋದ್ಯಮದ ಘನತೆ ಹೆಚ್ಚುತ್ತದೆ ಎಂದು ಹೇಳಿದರು.
ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಮಾತನಾಡಿ, ಪತ್ರಕರ್ತರು ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಂದ ಬಂದಿರುವ ಪತ್ರಕರ್ತರ ಸೇವೆಯನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರು ಹಾಗೂ ಪತ್ರಿಕಾ ವಿತರಕರನ್ನು ಗೌರವಿಸಲಾಯಿತು. ಸಮತಾ ದೇಶಮಾನೆ, ಈ.ಎಸ್. ವಿಶ್ವನಾಥ್, ಮುನಿರಾಜ್, ಎಂ. ರಾಜಣ್ಣ, ಸಿ.ಎಂ.ಬೈರೇಗೌಡ, ಸಿ.ವಿ. ಲೋಕೇಶ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪತ್ರಕರ್ತರ ಹಿತಕ್ಕಾಗಿ ಸಂಘ ಬದ್ಧ: ಸಂಘವು ಕಳೆದ ಐದು ವರ್ಷಗಳಿಂದ ಪತ್ರಕರ್ತರ ಹಿತಾಸಕ್ತಿ ಕಾಪಾಡುವುದರ ಜತೆಗೆ ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಯೂ ಸಂಘವನ್ನು ಮತ್ತಷ್ಟು ಬಲಪಡಿಸಲು ಎಲ್ಲ ಪತ್ರಕರ್ತರ ಸಹಕಾರ ಅಗತ್ಯ ಎಂದು ತಾಲೂಕು ಅಧ್ಯಕ್ಷ ಎಂ.ಎನ್. ನಾಗಭೂಷಣ್ ಹೇಳಿದರು.