ಗೌರಿಬಿದನೂರು: ದಾನಗಳಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠವಾದುದು. ಒಬ್ಬ ವ್ಯಕ್ತಿ ನೀಡುವ ಒಂದು ಯೂನಿಟ್ ರಕ್ತದಿಂದ ಸಂಕಷ್ಟದಲ್ಲಿರುವ ರೋಗಿಯ ಜೀವ ಉಳಿಸಲು ಸಾಧ್ಯವಿದೆ. ಆದ್ದರಿಂದ ಆರೋಗ್ಯವಂತ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎ.ಎಸ್. ಜಗನ್ನಾಥ್ ಕರೆ ನೀಡಿದರು.
ನಗರದ ಆಚಾರ್ಯ ಶಾಲೆಯ ಆವರಣದಲ್ಲಿ ಶುಕ್ರವಾರ ಲಯನ್ಸ್ ಸಂಸ್ಥೆ ಮತ್ತು ಲಯನ್ಸ್ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ಮಾತನಾಡಿದ ಅವರು, ಅಪಘಾತಗಳು, ಶಸ್ತ್ರಚಿಕಿತ್ಸೆಗಳು, ಹೆರಿಗೆ ಸಂದರ್ಭಗಳು ಹಾಗೂ ವಿವಿಧ ಕಾಯಿಲೆಗಳಿಂದ ಬಳಲುವವರಿಗೆ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಎದುರಾಗುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ ಸ್ವಯಂಪ್ರೇರಿತ ರಕ್ತದಾನಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಜನರು ರಕ್ತದಾನದ ಮಹತ್ವ ಅರಿತು ನಿಯಮಿತವಾಗಿ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Gauribidanur News: ‘ಹಳ್ಳಿ ಗುಗ್ಗು’ ಹೇಳಿಕೆ ಗ್ರಾಮೀಣ ಜನರ ಆತ್ಮಗೌರವಕ್ಕೆ ಮಾಡಿದ ಅವಮಾನ: ಮಂಜುನಾಥ್ ರೆಡ್ಡಿ
ತಾಲೂಕು ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಇ.ಎಸ್. ಸತೀಶ್ ಕುಮಾರ್ ಮಾತನಾಡಿ, 18ರಿಂದ 60 ವರ್ಷದೊಳಗಿನ ಅರ್ಹ ಆರೋಗ್ಯವಂತರು ವೈದ್ಯಕೀಯ ತಪಾಸಣೆಗೆ ಒಳಗಾಗಿ ರಕ್ತದಾನ ಮಾಡಬಹುದು. ರಕ್ತದಾನಕ್ಕೂ ಮುನ್ನ ರಕ್ತದೊತ್ತಡ, ಹಿಮೋಗ್ಲೋಬಿನ್ ಸೇರಿದಂತೆ ಅಗತ್ಯ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ವೈದ್ಯಕೀಯ ಮಾನದಂಡಗಳು ಸಮರ್ಪಕವಾಗಿದ್ದಲ್ಲಿ ಮಾತ್ರ ರಕ್ತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ರಕ್ತದಾನ ಮಾಡಿದ ಬಳಿಕ ಕನಿಷ್ಠ 20 ನಿಮಿಷ ವಿಶ್ರಾಂತಿ ಪಡೆಯಬೇಕು. ಪಾನೀಯ ಸೇವಿಸುವುದರ ಜೊತೆಗೆ ಸಾಕಷ್ಟು ನೀರು ಕುಡಿಯಬೇಕು ಹಾಗೂ ವೈದ್ಯಕೀಯ ಸಿಬ್ಬಂದಿಯ ಸಲಹೆಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಶಿಬಿರದಲ್ಲಿ ಯುವಕರು ಸೇರಿದಂತೆ ಹಲವರು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿದರು. ಒಟ್ಟು 25 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಟ್ರಸ್ಟ್ ಕಾರ್ಯದರ್ಶಿ ಆರ್.ಜೆ. ಶ್ರೇಣಿಕ್, ಸಂಸ್ಥೆಯ ಕಾರ್ಯದರ್ಶಿ ಬಿ.ಆರ್. ಚಂದ್ರಮೌಳಿ, ಖಜಾಂಚಿ ವೈ.ಎನ್. ಅಂಬಿಕಾ ರವಿಶಂಕರ್, ಲಯನ್ಸ್ ಸದಸ್ಯರಾದ ಜಿ.ಎನ್. ಚಂದ್ರಶೇಖರ ರೆಡ್ಡಿ, ಜಿ.ವಿ. ರವಿಶಂಕರ್, ಲಕ್ಷ್ಮಿ, ಜಿ.ಎನ್. ಸೂರಜ್, ಲಕ್ಕೂರ್ ಶ್ರೀಧರ್, ಆರ್.ಎನ್. ಬಾಲಕೃಷ್ಣ, ದಸ್ತಗಿರಿ ಸಾಬ್, ಆಚಾರ್ಯ ಶಾಲೆಯ ಕಾರ್ಯದರ್ಶಿ ಚಂದ್ರಶೇಖರ್, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ವೇಣುಮಾಧವ, ರೈತ ಮುಖಂಡರಾದ ಜಿ.ವಿ. ಲೋಕೇಶ್ ಗೌಡ, ರಾಜಣ್ಣ ಸೇರಿದಂತೆ ಯಲಹಂಕ ರಕ್ತನಿಧಿ ಸಿಬ್ಬಂದಿ ಉಪಸ್ಥಿತರಿದ್ದರು.