ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Parishad Election: ಮಂಚೇನಹಳ್ಳಿ ತಾಲೂಕಿನಲ್ಲಿ ಗರಿಷ್ಠ ಶೇ.89.83, ಚೇಳೂರಿನಲ್ಲಿ ಕನಿಷ್ಠ ಶೇ.63.52ರಷ್ಟು ಮತ ಚಲಾವಣೆ

ಶುಕ್ರವಾರ ಚಿಕ್ಕಬಳ್ಳಾಪುರ ತಾಲೂಕು ಕಚೇರಿಯಲ್ಲಿನ ಮತಗಟ್ಟೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ. ಪ್ರಭು ಭೇಟಿ ನೀಡಿ, ಮತದಾನ ಪ್ರಕ್ರಿಯೆ ಹಾಗೂ ಮತದಾರರಿಗೆ ಕಲ್ಪಿಸಲಾಗಿದ್ದ ಸೌಲಭ್ಯಗಳನ್ನು ಪರಿಶೀಲಿಸಿದರು. ಮತದಾನ ಸುಗಮವಾಗಿ ನಡೆಯಲು ಕೈಗೊಂಡಿದ್ದ ವ್ಯವಸ್ಥೆಗಳನ್ನು ವೀಕ್ಷಿಸಿ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು.

ಚಿಕ್ಕಬಳ್ಳಾಪುರ: ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆದಿದ್ದು, ಸಂಜೆ 4 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ.74.76ರಷ್ಟು ಮತದಾನ ದಾಖಲಾಗಿದೆ. 

ಒಟ್ಟು 26,262 ಮತದಾರರ ಪೈಕಿ 19,633 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ತಾಲೂಕುವಾರು ಮತದಾನದ ಪ್ರಮಾಣದಲ್ಲಿ ಮಂಚೇನಹಳ್ಳಿ ತಾಲೂಕು ಶೇ.89.83ರೊಂದಿಗೆ ಮೊದಲ ಸ್ಥಾನ ದಲ್ಲಿದ್ದರೆ, ಚೇಳೂರು ತಾಲೂಕು ಶೇ.63.52ರಷ್ಟು ಮತದಾನದೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಶುಕ್ರವಾರ ಚಿಕ್ಕಬಳ್ಳಾಪುರ ತಾಲೂಕು ಕಚೇರಿಯಲ್ಲಿನ ಮತಗಟ್ಟೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ. ಪ್ರಭು ಭೇಟಿ ನೀಡಿ, ಮತದಾನ ಪ್ರಕ್ರಿಯೆ ಹಾಗೂ ಮತದಾರರಿಗೆ ಕಲ್ಪಿಸಲಾಗಿದ್ದ ಸೌಲಭ್ಯಗಳನ್ನು ಪರಿಶೀಲಿಸಿದರು. ಮತದಾನ ಸುಗಮವಾಗಿ ನಡೆಯಲು ಕೈಗೊಂಡಿದ್ದ ವ್ಯವಸ್ಥೆಗಳನ್ನು ವೀಕ್ಷಿಸಿ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು.

ಇದನ್ನೂ ಓದಿ: Chikkabalalpur News: ಭೂಮಿ ವಿವಾದದಲ್ಲಿ ಹಲ್ಲೆ, ಗುಡಿಸಲು ತೆರವು ಆರೋಪ: ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ಅಂಬೇಡ್ಕರ್ ಸೇನೆ ಆಗ್ರಹ

ಜಿಲ್ಲೆಯಲ್ಲಿ ಒಟ್ಟು 36 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. 14,984 ಪುರುಷರು ಹಾಗೂ 11,278 ಮಹಿಳೆಯರು ಸೇರಿದಂತೆ ಒಟ್ಟು 26,262 ಮತದಾರರು ನೋಂದಣಿಯಾಗಿದ್ದರು. ಇವರಲ್ಲಿ 11,401 ಪುರುಷರು ಹಾಗೂ 8,232 ಮಹಿಳೆಯರು ಸೇರಿದಂತೆ ಒಟ್ಟು 19,633 ಮಂದಿ ಮತ ಚಲಾಯಿಸಿದ್ದಾರೆ. ಪುರುಷ ಮತದಾರರ ಮತದಾನದ ಪ್ರಮಾಣ ಶೇ.76.09ರಷ್ಟಿದ್ದರೆ, ಮಹಿಳಾ ಮತದಾರರ ಪ್ರಮಾಣ ಶೇ.72.99ರಷ್ಟಿದೆ. ಒಟ್ಟಾರೆ ಮತದಾನದ ಪ್ರಮಾಣ ಶೇ.74.76ರಷ್ಟಾಗಿದೆ.

ಮಂಚೇನಹಳ್ಳಿಯಲ್ಲಿ ಅತಿ ಹೆಚ್ಚು ಮತದಾನ

ತಾಲೂಕುವಾರು ಮತದಾನದ ವಿವರ ಗಮನಿಸಿದರೆ ಮಂಚೇನಹಳ್ಳಿ ತಾಲೂಕಿನಲ್ಲಿ 590 ಮತದಾರರ ಪೈಕಿ 530 ಮಂದಿ ಮತ ಚಲಾಯಿಸಿದ್ದು, ಶೇ.89.83ರಷ್ಟು ಮತದಾನವಾಗಿದೆ. ಇದು ಜಿಲ್ಲೆಯಲ್ಲೇ ಅತ್ಯಧಿಕ ಮತದಾನದ ಪ್ರಮಾಣವಾಗಿದೆ. ಗುಡಿಬಂಡೆ ತಾಲೂಕಿನಲ್ಲಿ 1,159 ಮತದಾರರ ಪೈಕಿ 924 ಮಂದಿ ಮತ ಚಲಾಯಿಸಿದ್ದು, ಶೇ.79.72ರಷ್ಟು ಮತದಾನ ದಾಖಲಾಗಿದೆ. ಶಿಡ್ಲಘಟ್ಟದಲ್ಲಿ 4,328 ಮತದಾರರ ಪೈಕಿ 3,386 ಮಂದಿ ಮತ ಚಲಾಯಿಸಿ ಶೇ.78.23ರಷ್ಟು ಮತದಾನ ಮಾಡಿದ್ದಾರೆ.

1413871 ok

ಚಿಂತಾಮಣಿ ತಾಲೂಕಿನಲ್ಲಿ 7,654 ಮತದಾರರ ಪೈಕಿ 5,787 ಮಂದಿ ಮತ ಚಲಾಯಿಸಿದ್ದು, ಶೇ.75.61ರಷ್ಟು ಮತದಾನವಾಗಿದೆ. ಗೌರಿಬಿದನೂರಿನಲ್ಲಿ 4,032 ಮತದಾರರ ಪೈಕಿ 3,025 ಮಂದಿ ಮತ ಚಲಾಯಿಸಿ ಶೇ.75.02ರಷ್ಟು ಮತದಾನ ದಾಖಲಿಸಿದ್ದಾರೆ. ಬಾಗೇಪಲ್ಲಿಯಲ್ಲಿ 2,388 ಮತದಾರರ ಪೈಕಿ 1,715 ಮಂದಿ ಮತ ಚಲಾಯಿಸಿದ್ದು, ಶೇ.71.82ರಷ್ಟು ಮತದಾನವಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 4,913 ಮತದಾರರ ಪೈಕಿ 3,505 ಮಂದಿ ಮತ ಚಲಾಯಿಸಿ ಶೇ.71.34ರಷ್ಟು ಮತದಾನ ದಾಖಲಿಸಿದ್ದಾರೆ.

ಚೇಳೂರು ತಾಲೂಕಿನಲ್ಲಿ 1,198 ಮತದಾರರ ಪೈಕಿ 761 ಮಂದಿ ಮತ ಚಲಾಯಿಸಿದ್ದು, ಶೇ.63.52ರಷ್ಟು ಮತದಾನವಾಗಿದೆ. ಜಿಲ್ಲೆಯ ಎಂಟು ತಾಲೂಕುಗಳ ಪೈಕಿ ಚೇಳೂರಿನಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲಾಗಿದೆ.

1412589 ok

ಮೂರು ತಾಲೂಕುಗಳಲ್ಲಿ 325 ಟೋಕನ್ ವಿತರಣೆ

ಸಂಜೆ 4 ಗಂಟೆಯ ವೇಳೆಗೆ ಲಭ್ಯವಿರುವ ಅಧಿಕೃತ ಪಟ್ಟಿಯ ಪ್ರಕಾರ, ಮತಗಟ್ಟೆಗಳಲ್ಲಿ ಮತದಾನ ಕ್ಕಾಗಿ ಸರದಿಯಲ್ಲಿದ್ದ ಮತದಾರರಿಗೆ ಬಾಗೇಪಲ್ಲಿಯಲ್ಲಿ 76, ಶಿಡ್ಲಘಟ್ಟದಲ್ಲಿ 159 ಹಾಗೂ ಚಿಂತಾಮಣಿಯಲ್ಲಿ 90 ಟೋಕನ್‌ಗಳನ್ನು ವಿತರಿಸಲಾಗಿತ್ತು. ಈ ಮೂರು ತಾಲೂಕುಗಳಲ್ಲಿ ಒಟ್ಟು 325 ಟೋಕನ್‌ಗಳನ್ನು ನೀಡಲಾಗಿತ್ತು.

ಮತಗಟ್ಟೆ ಪರಿಶೀಲನೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ತಹಶೀಲ್ದಾರ್ ರಶ್ಮಿ ಸೇರಿದಂತೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.