ಚಿಂತಾಮಣಿ: ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ಕಿರುಕುಳ ನೀಡಿ, ಆಕೆಗೆ ತಿಳಿಯದಂತೆ ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಆರೋಪಿಸಿ ಪತಿ ವಿರುದ್ಧ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತಾಲೂಕಿನ ಗಂಗಿರೆಡ್ಡಿಪಾಳ್ಯದ ಸುಲ್ತಾನಾ (25), ಕೊಂಡ್ಲಿಗಾನಹಳ್ಳಿ ಗ್ರಾಮದ ಮಸ್ತಾನ್ (26) ಅವರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಮಕ್ಕಳಾಗದ ಕಾರಣವನ್ನು ಮುಂದಿಟ್ಟುಕೊಂಡು ಪತಿ ನಿರಂತರವಾಗಿ ಅವಮಾನಿಸಿ ಕಿರುಕುಳ ನೀಡುತ್ತಿದ್ದರು ಎಂದು ಸುಲ್ತಾನಾ ದೂರಿನಲ್ಲಿ ಆರೋಪಿಸಿದ್ದಾರೆ. ಮಕ್ಕಳಾಗದ ಹಿನ್ನೆಲೆಯಲ್ಲಿ ದಂಪತಿ ವಿವಿಧ ಚಿಕಿತ್ಸೆಯನ್ನೂ ಪಡೆದಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Chinthamani News: ಮಡಿವಾಳ ಸಮುದಾಯವನ್ನು ಎಸ್‌ಸಿಗೆ ಸೇರಿಸಲು ಒತ್ತಾಯ: ಸೆ.9ರಂದು ಚಿಕ್ಕಬಳ್ಳಾಪುರದಲ್ಲಿ ಬೃಹತ್ ಪ್ರತಿಭಟನೆ
ಈ ನಡುವೆ ಮಸ್ತಾನ್ ಅವರು ಪತ್ನಿಗೆ ತಿಳಿಯದಂತೆ ಕುಪ್ಪಂ ಸಮೀಪ ತನ್ನ ಚಿಕ್ಕಮ್ಮನ ಮಗಳೊಂದಿಗೆ ಮತ್ತೊಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸುಲ್ತಾನಾ ಆರೋಪಿಸಿ ದ್ದಾರೆ. ವಿವಾಹದ ಸಂದರ್ಭದಲ್ಲಿ ಸುಮಾರು 60 ಗ್ರಾಂ ಚಿನ್ನ, ಬೋರ್‌ವೆಲ್ ಹಾಗೂ ಸಂಸಾರಕ್ಕೆ ಅಗತ್ಯ ವಸ್ತುಗಳನ್ನು ನೀಡಿದ್ದರೂ, ಮತ್ತಷ್ಟು ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತನ್ನನ್ನು ಬಿಟ್ಟು ಮತ್ತೊಂದು ವಿವಾಹಕ್ಕೆ ಮುಂದಾಗಿರುವ ಪತಿಯನ್ನು ಮತ್ತೆ ತನ್ನೊಂದಿಗೆ ಸೇರಿಸಬೇಕು ಎಂದು ಸುಲ್ತಾನಾ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಆದರೆ, “ನಾನು ಪತ್ನಿಗೆ ಯಾವುದೇ ಮೋಸ ಮಾಡಿಲ್ಲ. ಆಕೆಯೇ ಮನೆ ತೊರೆದು ಹೋಗಲು ಮುಂದಾಗುತ್ತಿದ್ದಾಳೆ” ಎಂದು ಮಸ್ತಾನ್ ಸ್ಪಷ್ಟಪಡಿಸಿದ್ದಾರೆ.