ಪರೀಕ್ಷಾರ್ಥಿಗಳು ಬೆಳಗ್ಗೆ 8 ಗಂಟೆಗೆ ಕೇಂದ್ರಗಳಿಗೆ ಹಾಜರಾಗಲು ಜಿಲ್ಲಾಧಿಕಾರಿ ಸೂಚನೆ
ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ ಸ್ಟೆಬಲ್ (ಸಿಎಆರ್/ಡಿಎಆರ್) ಹುದ್ದೆಗಳ ನೇರ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು ಸೆ.6ರಂದು ಚಿಕ್ಕಬಳ್ಳಾಪುರ ನಗರದ ಆರು ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 2,495 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಪರೀಕ್ಷೆಯು ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿದ್ದು, ಅಭ್ಯರ್ಥಿಗಳು ಬೆಳಗ್ಗೆ 8 ಗಂಟೆಗೆ ನಿಗದಿತ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿ ಕಡ್ಡಾಯ ಭದ್ರತಾ ತಪಾಸಣೆಗೆ ಒಳಪಟ್ಟ ಬಳಿಕ ಪರೀಕ್ಷಾ ಕೊಠಡಿಗೆ ತೆರಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳು, ಆಹಾರ-ಪಾನೀಯ, ಪುಸ್ತಕ, ಚೀಟಿ, ಪೆನ್‌ಡ್ರೈವ್, ಕ್ಯಾಮೆರಾ, ಸ್ಮಾರ್ಟ್ ವಾಚ್ ಸೇರಿದಂತೆ ಪರೀಕ್ಷೆಗೆ ಸಂಬಂಧಿ ಸದ ವಸ್ತುಗಳನ್ನು ತರಲು ಅವಕಾಶವಿಲ್ಲ.
ಇದನ್ನೂ ಓದಿ: Chikkaballapur News: ತರಗತಿ ಕೊಠಡಿಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಯಿಂದ ಭೂಮಿಪೂಜೆ
ಅಭ್ಯರ್ಥಿಗಳು ಶೂ, ಬೂಟು, ಟೋಪಿ, ಮುಖ ಮುಚ್ಚುವ ಉಡುಪು, ಬ್ಯಾಗ್, ಪರ್ಸ್ ಹಾಗೂ ಹೆಚ್ಚಿನ ಜೇಬುಗಳಿರುವ ಜೀನ್ಸ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬರುವಂತಿಲ್ಲ. ಧಾರ್ಮಿಕ ಆಚರಣೆಯ ಭಾಗವಾಗಿ ನಿರ್ದಿಷ್ಟ ಉಡುಪು ಅಥವಾ ಆಭರಣ ಧರಿಸುವ ಅಭ್ಯರ್ಥಿಗಳಿಗೆ ಪ್ರತ್ಯೇಕ ಭದ್ರತಾ ತಪಾಸಣೆ ನಡೆಸಲಾಗುವುದು.
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ ನಿಯಮಾನುಸಾರ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅಭ್ಯರ್ಥಿಗಳು ಪ್ರವೇಶಪತ್ರ ದಲ್ಲಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವಂತೆ ಮನವಿ ಮಾಡಿದ್ದಾರೆ.
ಪರೀಕ್ಷೆಯ ಸುಗಮ ನಿರ್ವಹಣೆಗೆ ಪೊಲೀಸ್, ಪದವಿ ಪೂರ್ವ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.