ಚಿಕ್ಕಬಳ್ಳಾಪುರ : ರಾಜ್ಯದ ಸರಕಾರಿ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ವರ್ಗವು ಗುಂಪುಗಾರಿಕೆಗೆ ಆಸ್ಪದ ನೀಡಬಾರದು. ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಿ ಸಜ್ಜುಗೊಳಿಸಬೇಕೇ ವಿನಃ ಅವರಲ್ಲಿ ನಕಾರಾತ್ಮ ಚಿಂತನೆ ಬೆಳೆಸಬಾರದು ಎಂದು ಕಸಾಪ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಸಲಹೆ ನೀಡಿದರು.
ನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕ್ರೀಡಾ,ಎನ್.ಎಸ್.ಎಸ್, ಎನ್‌ಸಿಸಿ,ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಓದಿನ ಸಂದರ್ಭದಲ್ಲಿ ಮನುಷ್ಯಜಾತಿ ತಾನೊಂದೇವಲಂ ಎಂಬುದನ್ನು ಗ್ರಹಿಸಬೇಕು. ಎಐ ತಂತ್ರಜ್ಞಾನದ ಈ ಕಾಲದಲ್ಲಿ ಅಧ್ಯಯನಕ್ಕೆ ಅಗಣಿತ ಅವಕಾಶಗಳಿವೆ. ಇದನ್ನು ಬಳಸಿಕೊಂಡು ಸಮಾಜ ಮತ್ತು ಸಂಸ್ಥೆಗಳನ್ನು ಕಟ್ಟುವ ಕೆಲಸ ಮಾಡೋಣ.ಕೆಟ್ಟ ಮನಸ್ಥಿತಿ ತೊರೆಯೋಣ ಎಂದರು.
ಇದನ್ನೂ ಓದಿ: Chikkaballapur News: ಗಣಿತದ ಕಲಿಕೆಗೆ ಹೆಚ್ಚು ಒತ್ತು ನೀಡಿ: ಡಯಟ್ ಪ್ರಾಂಶುಪಾಲ ಮುನಿಕೆಂಪೇಗೌಡ
ಸರಕಾರಿ ಕಾಲೇಜುಗಳ ಬಲವರ್ಧನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಭರಪೂರ ಅನುದಾನ ನೀಡುತ್ತಿವೆ. ಖಾಸಗಿ ಕಾಲೇಜುಗಳಿಗೆ ಮೀರಿದಂತೆ ಮೂಲಸೌಕರ್ಯಗಳನ್ನು ಒದಗಿಸುತ್ತಿವೆ. ಸರಕಾರಿ ಕಾಲೇಜುಗಳಲ್ಲಿ ದೊರೆಯುವ ಉನ್ನತ ಶಿಕ್ಷಣ ಪಡೆಯಲು ಬರುವವರೆಲ್ಲರೂ ಕೃಷಿ ಕೂಲಿ ಕಾರ್ಮಿಕರ, ದೀನ ದಲಿತ ಸಮುದಾಯದ ವಿದ್ಯಾರ್ಥಿಗಳೇ ಆಗಿದ್ದಾರೆ. ಅವರಿಗೆ ಶಿಕ್ಷಣ ಬಿಟ್ಟು ಬೇರೆ ಅವಕಾಶಗಳು ಇರುವುದಿಲ್ಲ. ಇದನ್ನು ಮನಗಂಡು ಇಲ್ಲಿನ ಬೋಧಕ ವರ್ಗ ಪ್ರಾಮಾಣಿಕತೆಯಿಂದ ಗುಣಮಟ್ಟದ ಬೋಧನೆಗೆ ಮುಂದಾಗ ಬೇಕು. ಆ ಮೂಲಕ ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಇತ್ತೀಚಿಗೆ ಪದವಿ ಕಾಲೇಜುಗಳಲ್ಲಿ ಬೋಧನೆಗಿಂತ ರಾಜಕಾರಣ, ಗುಂಪುಗಾರಿಕೆ ಹೆಚ್ಚಾಗಿದೆ. ನಿಮ್ಮ ಈ ರೀತಿಯ ವರ್ತನೆಗಳು ಪರೋಕ್ಷವಾಗಿ ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ದಯವಿಟ್ಟು ಇದನ್ನು ಮಾಡಬೇಡಿ ಎಂದು ಮನವಿ ಮಾಡಿದರು.
ರಾಜ್ಯ ಸರಕಾರವೂ ಕೂಡ ಸರಕಾರಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುವ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಈತರದ ಕ್ರಮ ಬೇಡವೇ ಬೇಡ. ಈಗಾಗಲೇ ಮೊಬೈಲ್ ಎಂಬ ಮೋಹಕ್ಕೆ ಸಿಕ್ಕಿ ವಿದ್ಯಾರ್ಥಿಗಳಲ್ಲಿ ನೈತಿಕತೆ ಮರೆಯಾಗಿದೆ. ಗುರುಗಳು ಪೋಷಕರು,ಸಮಾಜದ ಮೇಲೆ ಭಯ ಭಕ್ತಿ ಕಡಿಮೆಯಾಗಿದೆ. ಇಂತಹ ಹೊತ್ತಲ್ಲಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಟ್ಟರೆ ಅವರ ಭವಿಷ್ಯವೇ ಹಾಳಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಂಬತ್ತರ ದಶಕದಲ್ಲಿ, ಕಾಲೇಜುಗಳಲ್ಲಿ ಚುನಾವಣೆ ಮೂಲಕ ವಿದ್ಯಾರ್ಥಿ ನಾಯಕರನ್ನ ಆಯ್ಕೆ ಮಾಡುವ ಪದ್ದತಿ ಇತ್ತು. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಗುಂಪುಗಾರಿಕೆ, ದ್ವೇಷ, ಅಸೂಯೆ, ಮತ್ಸರ ಪ್ರವೃತ್ತಿ ಹೆಚ್ಚಿ ಹಲವಾರು ಕಡೆ ಗಲಭೆಗಳು ಸೃಷ್ಟಿಯಾಗಿ ವಿದ್ಯಾಭ್ಯಾಸ ಹಾಳಾದ ಕಾರಣ ಆಗಿನ ಸರ್ಕಾರವು ಚಿಂತನೆ ನಡೆಸಿ ಚುನಾವಣೆ ನೀತಿಯನ್ನು ರದ್ದು ಮಾಡಿದ್ದವು. ಚುನಾವಣೆ ನಡೆಸುವ ಕುರಿತು ಅಭಿಪ್ರಾಯ ಪಡೆಯಲು ಸರ್ಕಾರ ನೇಮಿಸಿದ್ದ ವಿಶ್ವವಿದ್ಯಾಲಯ ಕುಲಪತಿಗಳ ಸಮಿತಿ ಕೂಡ ಕಾಲೇಜುಗಳಲ್ಲಿ, ಚುನಾವಣೆ ನಡೆಸುವ ಪದ್ದತಿಯಿಂದ ಯಾವುದೇ ರೀತಿಯಲ್ಲಿ ಒಳಿತಾಗುವುದಿಲ್ಲ ಎಂದು ತಿಳಿಸಿದೆ. ಆದರೂ ಸರ್ಕಾರವು ಸಮಿತಿಯ ವರದಿಯನ್ನು ಬದಿಗೆ ಸರಿಸಿ ಚುನಾವಣೆ ನಡೆಸು ಆಲೋಚನೆ ಮಾಡಿರುವುದು ಸರಿಯಲ್ಲ ಎಂದು ದೂರಿದರು.
ಯುವರಂಗಕರ್ಮಿ ದಿಲೀಪ್ ಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದ ಸ್ನೇಹಿತರ ಒಡನಾಟ, ಗುರುಗಳ ಮಾರ್ಗದರ್ಶನ ಮತ್ತು ಕಲಿಕೆ ಒಡನಾಟ ಇದಾದ ಬಳಿಕೆ ಎಷ್ಟು ಕೋಟಿ ಕೊಟ್ಟರೂ ದೊರೆಯುವುದಿಲ್ಲ. ಹೀಗಾಗಿ ವ್ಯಾಸಾಂಗದ ಅವಧಿಯಲ್ಲಿ ಆಕರ್ಷಣೆ ಗಳಿಗೆ ಒಳಗಾಗಿ ನಿರಾಸಕ್ತಿ ತೋರಿದರೆ ಜೀವನದಲ್ಲಿ ಸಾಕಷ್ಟು ಕಷ್ಟನಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಪ್ರಾಂಶುಪಾಲೆ ಡಾ.ವಸುಂದರ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಯೇ ನಮ್ಮ ಕಾಲೇಜಿನ ಉದೇಶವಾಗಿದೆ.ಇಲ್ಲಿ ಶಿಕ್ಷಣ ಬಯಸಿ ಬರುವ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟವಟಿಕೆಗಳಿಗೆ ಒತ್ತು ನೀಡಲಾಗುವುದು. ನಮ್ಮದು ಲೀಡ್ ಕಾಲೇಜು ಆಗಿದ್ದು ಇಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕೆ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಇವುಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯ ಕಂಡುಕೊಳ್ಳಬೇಕು ಎಂದರು.
ಈ ವೇಳೆ, ಕಾಲೇಜಿನ ವಿವಿಧ ವಿಷಯಗಳಲ್ಲಿ ಶೇ.100 ಅಂಕಗಳಿಸಿದ, ಅತಿ ಹೆಚ್ಚು ಅಂಕ ಗಳಿಸಿ ಯಶಸ್ವಿಯಾಗಿ ಪದವಿ ಪೂರೈಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಿಹೆಚ್‌ಡಿ ಪೂರೈಸಿದ ಕಾಲೇಜಿನ ಅಧ್ಯಾಪಕರಿಗೆ, ಕೆಸೆಟ್ ಉತ್ತೀರ್ಣರಾದ ಅಧ್ಯಾಪಕರಿಗೆ, ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ್, ಗ್ರಂಥಪಾಲಕ ಲಿಂಗಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಹರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೃಷ್ಣಪ್ಪ, ವಾಣಿಜ್ಯ ಶಾಸ್ತ್ರ ವಿಭಾಗದ ಸುರೇಶ್‌ಬಾಬು, ಮುತಹರ್ ಉನ್ನೀಸಾ, ವಿಜ್ಞಾನ ವಿಭಾಗದ ಕಾರ್ತಿಕ್ ಸುಪ್ರಿಯ, ಉಮೇಶ್, ವೀಣಾ ಮತ್ತಿತರರು ಇದ್ದರು.