ಚಿಕ್ಕಬಳ್ಳಾಪುರ: ಮುಂದಿನ ಒಂದು ವರ್ಷದೊಳಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಹತ್ವಾಕಾಂಕ್ಷೆಯ ಎತ್ತಿನಹೊಳೆಯಿಂದ ನೀರು ಹರಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಾರಿಗೆ ಸಚಿವ ಬೈರತಿ ಸುರೇಶ್(Byrati Suresh) ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಭಾಗಿತ್ವದಲ್ಲಿ ಗುರುವಾರ ಅಂಗವಿಕಲರಿಗೆ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಯೋಜನೆಯಡಿಯಲ್ಲಿ ಜಿಲ್ಲೆಯ 4 ಪ್ಯಾಕೇಜ್ ಗಳ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಮೊದಲ ಪ್ಯಾಕೇಜ್ ನಲ್ಲಿ ಗೌರಿಬಿದನೂರು ಭಾಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ.90 ರಷ್ಟು ಕಾಮಗಾರಿಯೂ ಮುಗಿದಿದೆ. ಉಳಿದ ತಾಲೂಕುಗಳಲ್ಲಿ ಮುಂದಿನ ಆರು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ. ಒಟ್ಟಾರೆ, ಮುಂದಿನ ಒಂದು ವರ್ಷದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನಹೊಳೆಯಿಂದ ನೀರು ಬರುತ್ತದೆ, ಕೆರೆಗಳನ್ನು ತುಂಬಿಸಲಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದರು.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಈ ಯೋಜನೆ ಜಾರಿಗೆ ಸಾಕಷ್ಟು ಅನುದಾನವನ್ನು ನೀಡಿದ್ದರು. ಅದೇ ರೀತಿ, ಈಗಿನ ನಮ್ಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎತ್ತಿನಹೊಳೆಗೆ ಅಗತ್ಯವಿರುವಷ್ಟು ಹಣವನ್ನು ನೀಡಲು ಸಿದ್ಧರಿರುವುದಾಗಿ ಭರವಸೆ ನೀಡಿದ್ದಾರೆ ಎಂದು ಬೈರತಿ ಸುರೇಶ್ ತಿಳಿಸಿದರು.
ಸಿದ್ದು- ಡಿಕೆಶಿ ಜೋಡೆತ್ತುಗಳು
ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಪ್ರಮುಖ ಕಾರಣರಾಗಿದ್ದಾರೆ. ಅವರಿಬ್ಬರೂ ನಮ್ಮ ಪಕ್ಷದಲ್ಲಿ ಜೋಡೆತ್ತುಗಳಿದ್ದಂತೆ. ಇಬ್ಬರೂ ಸೇರಿ ರಾಜ್ಯದ ಹಿತಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಿದ್ದರಾಮಯ್ಯ ನವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೂಡಿ ಇಡೀ ರಾಜ್ಯಕ್ಕೆ ಪಂಚ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದಾರೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನದಂತೆ ಅಧಿಕಾರಕ್ಕೆ ಬಂದ ದಿನವೇ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಐದು ಯೋಜನೆಗಳನ್ನು ಘೋಷಣೆಗಳನ್ನು ಮಾಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಸಾರಿಗೆ ಸಚಿವರು ತಿಳಿಸಿದರು.
1.66 ಲಕ್ಷ ಕೋಟಿ ವೆಚ್ಚ
ಯೂನಿವರ್ಸಲ್ ಬೇಸಿಕ್ ಇನ್ ಕಂ ಆಧಾರದಲ್ಲಿ ನಮ್ಮ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿರುವುದು ಹೆಮ್ಮೆಯ ವಿಚಾರವಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣ, ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ, ಬಿಪಿಎಲ್ ಕುಟುಂಬಗಳಿಗೆ ಮಾಸಿಕ 10 ಕೆಜಿ ಅಕ್ಕಿ, 200 ಯುನಿಟ್ ವರೆಗಿನ ವಿದ್ಯುತ್ ಉಚಿತ, ವಿದ್ಯಾವಂತ ಯುವಕರಿಗೆ ತಿಂಗಳಿಗೆ 3 ಸಾವಿರ ರೂಪಾಯಿಯನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಇದಕ್ಕಾಗಿ ವಾರ್ಷಿಕ 52500 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಖರ್ಚು ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಈ ಯೋಜನೆಗಳಿಗೆ 1.66 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಅವರು ಅಂಕಿಅಂಶ ನೀಡಿದರು.
ಚಿಕ್ಕಬಳ್ಳಾಪುರಕ್ಕೆ 2977 ಕೋಟಿ
ಚಿಕ್ಕಬಳ್ಳಾಪುರ ಜಿಲ್ಲೆಗೆ ಇದುವರೆಗೆ ಅನ್ನಭಾಗ್ಯಕ್ಕೆ 265 ಕೋಟಿ, ಗೃಹಲಕ್ಷ್ಮಿ ಯೋಜನೆಯಡಿ 1758 ಕೋಟಿ, ಗೃಹಜ್ಯೋತಿಗೆ 454 ಕೋಟಿ, ಶಕ್ತಿಗೆ 481 ಕೋಟಿ ಮತ್ತು ಯುವನಿಧಿಗೆ 17 ಕೋಟಿ ರೂಪಾಯಿ ಗಳನ್ನು ನೀಡಲಾಗಿದೆ. ಈ ಮೂಲಕ ಮೂರು ವರ್ಷದ ಮೂರು ತಿಂಗಳಲ್ಲಿ ಜಿಲ್ಲೆಗೆ ಬರೋಬ್ಬರಿ 2977 ಕೋಟಿ ರೂಪಾಯಿಗಳನ್ನು ವಿತರಿಸಿದೆ ಎಂದರು.
ಹೆಚ್ಚಿನ ತೆರಿಗೆ ಪಾಲು ನಮಗೆ ಕೊಡಿ
ರಾಷ್ಟ್ರದ ಜಿಡಿಪಿಗೆ ರಾಜ್ಯದ ಶೇ.8.4 ರಷ್ಟು ತೆರಿಗೆಯನ್ನು ನೀಡುತ್ತಿದೆ ನಮ್ಮ ರಾಜ್ಯ ಸರ್ಕಾರ. ಈ ಮೂಲಕ ನಮ್ಮ ರಾಜ್ಯ ಅತಿ ಹೆಚ್ಚು ತೆರಿಗೆ ಕಟ್ಟುತ್ತಿರುವ ರಾಜ್ಯಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದೆ. ಸಂಗ್ರಹ ಮಾಡಿದ ಜಿಎಸ್ ಟಿ ಯಲ್ಲಿ 59274 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ನಮಗೆ ಶೇ.10 ರಷ್ಟು ವಾಪಸ್ ಬರುತ್ತಿದೆ. 1 ರೂಪಾಯಿ ಕೊಟ್ಟರೆ ಕೇವಲ 15 ಪೈಸೆಯಷ್ಟು ವಾಪಸ್ ಬರುತ್ತಿದೆ. ನಮಗೆ ಬರುತ್ತಿರುವ ಹಣ ಸಾಲದು. ಉತ್ತರ ಪ್ರದೇಶಕ್ಕೆ ಶೇ.17.93 ರಷ್ಟು, ಮಧ್ಯಪ್ರದೇಶಕ್ಕೆ ಶೇ.7.85, ಬಿಹಾರಕ್ಕೆ ಶೇ.10.05 ರಷ್ಟು ನೀಡುತ್ತಿದ್ದೀರಿ. ಪ್ರಧಾನಮಂತ್ರಿ ಮೇಲೆ ಒತ್ತಡ ತಂದು ಹೆಚ್ಚು ಹಣವನ್ನು ವಾಪಸ್ ನೀಡುವಂತೆ ಮಾಡಿ ಎಂದು ಸಂಸದರಾದ ಡಾ.ಕೆ.ಸುಧಾಕರ್ ಅವರನ್ನು ಒತ್ತಾಯಿಸಿದರು.
ಜಲಜೀವನ್ ಮಿಷನ್ ನ 13 ಸಾವಿರ ಕೋಟಿ ಬರಬೇಕು
ಜಲಜೀವನ್ ಮಿಷನ್ ಅಡಿಯಲ್ಲಿ ರಾಜ್ಯ ಸರ್ಕಾರ 24,598 ಕೋಟಿ ರೂಪಾಯಿಗಳನ್ನು ಈಗಾಗಲೇ ನೀಡಿದೆ. ಕೇಂದ್ರ ಸರ್ಕಾರ 11786 ಕೋಟಿ ರೂಪಾಯಿ ನೀಡಿದೆ. ಆದರೆ, ಕೇಂದ್ರ ಸರ್ಕಾರ ಸುಮಾರು 13 ಸಾವಿರ ಕೋಟಿ ಹಣವನ್ನು ರಾಜ್ಯಕ್ಕೆ ಕೊಡಬೇಕಿದೆ. ಈ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದಿಂದಲೂ ವಿಕಲಚೇತನರಿಗೆ ಸೌಲಭ್ಯ ವಿತರಣೆ
ವಿಕಲಚೇತನರಿಗೆ ಅನುಕಂಪ ತೋರಿಸುವುದಲ್ಲ. ಈ ವರ್ಗದವರು ಸ್ವಾವಲಂಬನೆಯ ಜೀವನ ಸಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸೇರಿ ಜಂಟಿಯಾಗಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿವೆ. ಆರು ತಿಂಗಳೊಳಗೆ 2 ಸಾವಿರಕ್ಕೂ ಹೆಚ್ಚು ವಿಕಲಚೇತನರಿಗೆ ರಾಜ್ಯ ಸರ್ಕಾರದ ವತಿಯಿಂದ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.