ಗುಡಿಬಂಡೆ: ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ಗ್ರಾಮೀಣ ಭಾಗದ ರೈತ ಕುಟುಂಬಗಳ ಯುವಕರಿಗೆ ಮದುವೆ ಸಂಬಂಧಗಳು ದೊರೆಯದಿರುವ ಸಮಸ್ಯೆ ಇದೀಗ ಗಂಭೀರ ಸಾಮಾಜಿಕ ವಿಚಾರವಾಗಿ ಮುನ್ನೆಲೆಗೆ ಬಂದಿದೆ. 30 ವರ್ಷ ದಾಟಿದರೂ ಅನೇಕ ರೈತಾಪಿ ಯುವಕರಿಗೆ ಸೂಕ್ತ ವಧು ಸಿಗದೆ ಮದುವೆಯಾಗದೆ ಉಳಿಯುವಂತಾಗಿದೆ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ರೈತ ಮುಖಂಡ ಚಿಕ್ಕನರಸಿಂಹಪ್ಪ ಈ ವಿಚಾರವನ್ನು ಪ್ರಸ್ತಾಪಿಸಿದರು.
ಇದನ್ನೂ ಓದಿ: Gudibande News: ಸ್ಥಳೀಯ ಚುನಾವಣೆಗಳಿಗೆ ಎನ್ಡಿಎ ಸಂಘಟಿತ ಸಿದ್ಧತೆ: ಹರಿನಾಥ್ ರೆಡ್ಡಿ
ಗ್ರಾಮೀಣ ಭಾಗದಲ್ಲಿ ಕೃಷಿಯನ್ನೇ ಅವಲಂಬಿಸಿರುವ ಯುವಕರಿಗೆ 30 ವರ್ಷ ದಾಟಿದರೂ ಮದುವೆ ಸಂಬಂಧಗಳು ಸಿಗುತ್ತಿಲ್ಲ. ಇದರಿಂದ ಯುವಕರು ಮಾತ್ರವಲ್ಲದೆ ಅವರ ತಂದೆ-ತಾಯಂದಿರೂ ಮಾನಸಿಕವಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಕೃಷಿಕ ಕುಟುಂಬಗಳ ಯುವಕರ ಮದುವೆ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಕ್ರಮ ವಹಿಸಬೇಕು ಎಂದು ತಹಶೀಲ್ದಾರ್ ಸಿಗ್ಬತ್ತುಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್ ಸಿಗ್ಬತ್ತುಲ್ಲಾ, ಸಾರ್ವಜನಿಕರ ಸಮಸ್ಯೆ ಗಳಿಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಡಿತರ ಚೀಟಿಗಳ ಇ-ಕೆವೈಸಿ, ಬಯೋಮೆಟ್ರಿಕ್ ನೋಂದಣಿ ಹಾಗೂ ಸ್ಕ್ಯಾನಿಂಗ್ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳಲಾಯಿತು. ಆಂದೋಲನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾದವು.
07ಜಿಯುಡಿ2: ಗುಡಿಬಂಡೆ ತಾಲೂಕು ಕಚೇರಿಯಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ರೈತ ಮುಖಂಡ ಚಿಕ್ಕನರಸಿಂಹಪ್ಪ ಮನವಿ ಸಲ್ಲಿಸಿದರು.