Balehonnur News: ಬಾಳೆಹೊನ್ನೂರಿನಲ್ಲಿ ಬಿರುದು ಬಾವಲಿಯೊಂದಿಗೆ ಹೀಗೊಂದು ವಿಶಿಷ್ಟ ಸನ್ಮಾನ!
Balehonnur News: ಬಾಳೆಹೊನ್ನೂರು ಮಲ್ನಾಡ್ ಗೆಳೆಯರ ಬಳಗ ನೇತೃತ್ವದಲ್ಲಿ, ಬಾಳೆಹೊನ್ನೂರು ಪೊಲೀಸ್ ಠಾಣೆ ಮತ್ತು ಗ್ರಾಮ ಪಂಚಾಯಿತಿ ಬಿ.ಕಣಬೂರು ಇವರ ಸಹಯೋಗದಲ್ಲಿ ಬಾಳೆಹೊನ್ನೂರಿನ ಸೌಂದರ್ಯವನ್ನು ಮತ್ತು ಸ್ವಚ್ಚತೆಯನ್ನು ಕಾಪಾಡುವ ಉದ್ದೇಶದಿಂದ ವಿಶೇಷ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.
| ಅರವಿಂದ ಸಿಗದಾಳ್, ಮೇಲುಕೊಪ್ಪ
ಬಾಳೆಹೊನ್ನೂರು: ವಿಶೇಷ ಸಾಧನೆಗಳನ್ನು ಮಾಡಿದವರಿಗೆ, ಸರ್ವೇ ಸಾಮಾನ್ಯವಾಗಿ ಊರಿನ ಯಾವುದಾದರೂ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕೂರಿಸಿ, ಮುಖ್ಯ ಹಿರಿಯ ಅತಿಥಿಗಳಿಂದ ಶಾಲು ಹೊದಿಸಿ, ಫಲ ತಾಂಬೂಲ ನೀಡಿ, ಪ್ರಶಸ್ತಿ ಪತ್ರ ಅಥವಾ ಫಲಕಗಳ ನೆನಪಿನ ಕಾಣಿಕೆ ಕೊಟ್ಟು, ಸನ್ಮಾನಿಸಲಾಗುತ್ತದೆ. ಆದರೆ, ಬಾಳೆಹೊನ್ನೂರಿನಲ್ಲಿ (Balehonnur News) ಮಾಡಲು ಯೋಜಿಸಿರುವ ಸನ್ಮಾನ ಸ್ವಲ್ಪ ವಿಶಿಷ್ಟವಾದುದು.
ಸನ್ಮಾನ, ಫಲ, ಹಾರ, ಫಲಕ ಎಲ್ಲ ಹಾಗೆಯೆ ಇದ್ದರೂ, ಸನ್ಮಾನ ಮತ್ತು ಬಿರುದು ಕೊಡುವುದು ಸಮಾಜಮುಖಿ ಸಾಧನೆ ಮಾಡಿದವರಿಗಲ್ಲ!! ಸ್ವಸ್ಥ ಸಮಾಜವನ್ನು ಹಾಳುಗೆಡುವುತ್ತಿರುವವರಿಗೆ!!. ರಸ್ತೆ ಬದಿ ಕಸ ಹಾಕಿದವರಿಗೆ ಸನ್ಮಾನ!! ರಸ್ತೆ ಬದಿ ಮಾತ್ರ ಅಲ್ಲ, ಕೆರೆ, ಹಳ್ಳ, ನದಿ, ಕಾಡುಗಳಿಗೆ ಕಸ ಹಾಕುವ, ಹಾಕಿ ಪರಿಸರದ ಸೌಂದರ್ಯ ಮತ್ತು ಆರೋಗ್ಯವನ್ನು ಹಾಳುಮಾಡುವವರನ್ನು ಗುರುತಿಸಿ ಸನ್ಮಾನ ಮಾಡಿ, ಬಿರುದು ಕೊಟ್ಟು ಗೌರವಿಸಿ, ಪ್ರಚಾರ ಮಾಡಲಾಗುತ್ತದೆ.
ಯಾರು ಸನ್ಮಾನಕ್ಕೆ ಅರ್ಹರು ಅಂತ ಸಾರ್ವಜನಿಕರೇ ಫೋಟೋ, ವೀಡಿಯೋ ಸಾಕ್ಷಿಗಳೊಂದಿಗೆ ಶಿಫಾರಸ್ ಮಾಡಬಹುದು. ಶಿಫಾರಸ್ ಮಾಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು.
ಎಲ್ಲಂದರಲ್ಲಿ ಕಸ ಹಾಕಿದವರಿಗೆ ಮಾಲಿನ್ಯದ ಮಹಾರಾಜ ಎಂಬ ಬಿರುದು, ಶಾಲು (ಸೆಕೆಂಡ್‌ಹ್ಯಾಂಡ್!!?) ಪ್ರಶಸ್ತಿ ಪತ್ರ ಕೊಟ್ಟು ಗೌರವಿಸಲಾಗುತ್ತದೆ. ಪ್ರಶಸ್ತಿ ಸ್ವೀಕಾರ ಸಂದರ್ಭದ ಫೋಟೋ ಸಹಿತ ವರದಿಯನ್ನು ಸ್ಥಳೀಯ ಪತ್ರಿಕೆ, ವಾಟ್ಸಪ್ ಮತ್ತಿತರ ಜಾಲತಾಣಗಳಲ್ಲಿ ಪ್ರಕಟಿಸಿ ಪ್ರಚಾರ ಕೊಡಲಾಗುವುದಂತೆ.
ಬೆಳಗಿನ ಹೊತ್ತು ವಾಕಿಂಗ್ ಹೋಗುವವರು ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ನಲ್ಲಿ ಕಸ ತಂದು ಪಟ್ಟಣದ ಹೊರಭಾಗದ ರಸ್ತೆಯ ಬದಿ ಎಸೆದು ಹೋಗುವವರು ಸನ್ಮಾನಕ್ಕೆ ಹೆಚ್ಚು ಅರ್ಹತೆಯನ್ನು ಪಡೆಯತ್ತಾರೆ. ವಾಹನಗಳಲ್ಲಿ ಸಂಚರಿಸುವಾಗ ಹೊರಗಡೆ ಉಗಿಯುವವರು, ಕುಡಿದ ನೀರನ ಬಾಟಲು, ಕಪ್, ಲೋಟ ಬಿಸಾಕುವವರು, ಮಧು, ವಿಮಲ್‌ಗಳನ್ನು ಹಲ್ಲು ಮತ್ತು ತುಟಿಗಳ ಮಧ್ಯೆ ಇಟ್ಟು ಅವುಗಳ ಪೌಚ್‌ನ್ನು ಒಗೆಯುವವರು, ಕುರ್ಕುರೆ, ಬಿಸ್ಕೇಟ್ ಕವರ್‌ಗಳನ್ನು ಮೆತ್ತಗೆ ಕೆಳಗೆ ಬಿಡುವವರೆಲ್ಲ ಸನ್ಮಾನ ಸ್ವೀಕರಿಸಲು 'ಯೋಗ್ಯರು'.
ಸಾರ್ವಜನಿಕರು ಮೊಬೈಲ್ ಕ್ಯಾಮರಾ, ಸಾರ್ವಜನಿಕ ಮತ್ತು ಖಾಸಗಿ ಸಿಸಿ ಕ್ಯಾಮರಾಗಳ ಫುಟೇಜ್‌ಗಳು ಸನ್ಮಾನಿತರನ್ನು ಪರಿಚಯಿಸುವ ಮತ್ತು ಸಾಕ್ಷೀಕರಿಸುವ ಪತ್ರಗಳು!!
ಬಾಳೆಹೊನ್ನೂರು ಮಲ್ನಾಡ್ ಗೆಳೆಯರ ಬಳಗ ನೇತೃತ್ವದಲ್ಲಿ, ಬಾಳೆಹೊನ್ನೂರು ಪೊಲೀಸ್ ಠಾಣೆ ಮತ್ತು ಗ್ರಾಮ ಪಂಚಾಯಿತಿ ಬಿ.ಕಣಬೂರು ಇವರುಗಳ ಸಹಯೋಗದಲ್ಲಿ ಈ ವಿಶೇಷ ಸನ್ಮಾನ ಸಮಾರಂಭ ಸಾಂದರ್ಭಿಕವಾಗಿ ನಡೆಯಲಿದೆ ಎಂದು ಗೆಳೆಯರ ಬಳಗದ ಪ್ರಕಟಣೆ ತಿಳಿಸಿದೆ.
ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದರೂ, ದಿನಾ ಸ್ವಚ್ಛಗೊಳಿಸುತ್ತಿದ್ದರೂ, ಪಂಚಾಯತಿಯವರು ಆಗಾಗ ಧ್ವನಿ ವರ್ಧಕದಲ್ಲಿ ಪ್ರಚಾರ ಮಾಡಿದರೂ, ಬಾಳೆಹೊನ್ನೂರಿನ ರಸ್ತೆ, ಚರಂಡಿ, ಅಂಗಡಿ ಮುಂಗಟ್ಟು, ಬಸ್ ಸ್ಟ್ಯಾಂಡ್, ಮಂದಿರಗಳ ಸುತ್ತಮುತ್ತ, ಕೆರೆ, ಹಳ್ಳ, ನದಿ, ಕಾಡು, ಕಛೇರಿಗಳ ಸಮೀಪಗಳಲ್ಲಿ ದಿನಾ ಕಸದ ರಾಶಿಯೇ ಬೀಳುವಷ್ಟು 'ನಾಗರಿಕರು' ಕಸ ಹಾಕುವುದನ್ನು ಗಮನಿಸಿ, ಬಾಳೆಹೊನ್ನೂರಿನ 'ಮಲ್ನಾಡ್ ಗೆಳೆಯರ ಬಳಗವು' ಗ್ರಾಮ ಪಂಚಾಯತಿ ಮತ್ತು ಪೊಲೀಸ್ ಸಹಕಾರದೊಂದಿಗೆ ಮಾಲಿನ್ಯದ ಮಹಾರಾಜ ಪ್ರಶಸ್ತಿ ಹೆಸರಿನಲ್ಲಿ, ವಿನೂತನ ರೀತಿಯಲ್ಲಿ ಜಾಗೃತಿ ಅಭಿಯಾನ ಪ್ರಾರಂಭಿಸಿದೆ.
ಈ ಸುದ್ದಿಯನ್ನೂ ಓದಿ | Union Budget 2025: ನಾಳೆ ಕೇಂದ್ರ ಬಜೆಟ್; ಕರ್ನಾಟಕದ ಪ್ರಮುಖ ಬೇಡಿಕೆಗಳು ಹೀಗಿವೆ
ಅಭಿಯಾನ ಪ್ರಾರಂಭಿಸಿ ಪ್ರಚಾರ ಪಡೆಯುತ್ತಿದ್ದಂತೆ ಬಹಿರಂಗವಾಗಿ ರಸ್ತೆಯಲ್ಲಿ ಕಸ ಹಾಕುವವರು ಕಾಣುತ್ತಿ, ಮತ್ತು ರಸ್ತೆ, ಕ್ರೀಡಾಂಗಣಗಳಲ್ಲಿ ಕಸ ಬೀಳುತ್ತಿರುವುದು ಕಡಿಮೆಯಾಗಿದೆ ಎಂಬುದು ಸ್ಥಳೀಯರನೇಕರ ಅಭಿಪ್ರಾಯ. ಮಲ್ನಾಡ್ ಗೆಳೆಯರ ಬಳಗದ ವಿನೂತನ ಬಿರುದು ಸನ್ಮಾನ ಕಾರ್ಯಕ್ರಮಕ್ಕೆ ಅಭಿನಂದನೆಗಳು. ಬಾಳೆಹೊನ್ನೂರು ಸ್ವಚ್ಚ ಹೊನ್ನೂರಾಗಲಿ.