ಶಿಕ್ಷಕಿಯ ನಿರ್ಲಕ್ಷ್ಯ; ಅಂಗನವಾಡಿ ಬಳಿ ಆಡುತ್ತಿದ್ದ ಮಗುವಿನ ಮರ್ಮಾಂಗಕ್ಕೆ ಗಾಯ
Chikkamagaluru News: ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಘೋರ ನಡೆದಿದ್ದು, ಆಟವಾಡುತ್ತಿದ್ದ ವೇಳೆ ಮಗುವಿಗೆ ಕಬ್ಬಿಣದ ಜಾಲರಿ ತಂತಿ ತಗುಲಿ ಮರ್ಮಾಂಗಕ್ಕೆ ಗಾಯವಾಗಿದೆ. ಶಿಕ್ಷಕಿ ನಿರ್ಲಕ್ಷ್ಯ ತೋರಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ಪೋಷಕರು ದೂರಿದ್ದಾರೆ.
ಚಿಕ್ಕಮಗಳೂರಿನ ಅಂಗನವಾಡಿ ಬಳಿಯ ಕಬ್ಬಿಣದ ಜಾಲರಿ ಮತ್ತು ಮೆಟಾ ಎಐ ಚಿತ್ರ -
ಚಿಕ್ಕಮಗಳೂರು, ಮಾ. 11: ಅಂಗನವಾಡಿಗೆ ಮಕ್ಕಳನ್ನು ಕಳುಹಿಸುವ ಪೋಷಕರು ಓದಲೇ ಬೇಕಾದ ಸುದ್ದಿ ಇದು. ಅಂಗನವಾಡಿ ಶಿಕ್ಷಕಿಯ ನಿರ್ಲಕ್ಷ್ಯದಿಂದ ಪುಟ್ಟ ಕಂದಮ್ಮನ ಮರ್ಮಾಂಗಕ್ಕೆ ಗಾಯವಾಗಿದ್ದು, ಈಗ ಒದ್ದಾಡುವಂತಾಗಿದೆ. ಹೌದು, ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಈ ಘೋರ ನಡೆದಿದೆ (Chikkamagaluru News). ಅಂಗನವಾಡಿ ಕೇಂದ್ರದ ಬಳಿ ಆಟವಾಡುತ್ತಿದ್ದ ವೇಳೆ ಮಗುವಿಗೆ ಕಬ್ಬಿಣದ ಜಾಲರಿ ತಂತಿ ತಗುಲಿ ಮರ್ಮಾಂಗಕ್ಕೆ ಗಾಯವಾಗಿದ್ದು, ಇದೀಗ ಆರು ಹೊಲಿಗೆ ಹಾಕಲಾಗಿದೆ. ಮಕ್ಕಳನ್ನು ಸರಿಯಾಗಿ ಗಮನಿಸದೆ ಶಿಕ್ಷಕಿ ನಿರ್ಲಕ್ಷ್ಯ ತೋರಿದ್ದರಿಂದ ಮಗುವಿಗೆ ಗಾಯವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮಾಹಿತಿಯ ಪ್ರಕಾರ, ಪೋಷಕರು ಮಗುವನ್ನು ಎಂದಿನಂತೆ ಅಂಗನವಾಡಿಗೆ ಕಳುಹಿಸಿದ್ದರು. ಅಂಗನವಾಡಿ ಮುಂಭಾಗದ ಆವರಣದಲ್ಲಿರುವ ಮರಕ್ಕೆ ಜಾಲರಿ (ಕಬ್ಬಿಣದ ತಂತಿ ಜಾಲ) ಅಳವಡಿಸಲಾಗಿದ್ದು, ಅದನ್ನು ಹಾಗೇ ಬಿಡಲಾಗಿದೆ. ಆಟವಾಡುತ್ತಿದ್ದ ಬಾಲಕ ಆ ಜಾಲರಿ ಬಳಿಗೆ ಹೋಗಿದ್ದಾನೆ. ಆ ವೇಳೆ ಮರ್ಮಾಂಗಕ್ಕೆ ಗಾಯವಾಗಿದೆ.
ಶಿಕ್ಷಕಿಯ ನಿರ್ಲಕ್ಷ್ಯ
ಅಷ್ಟಾಗಿಯೂ ಅಂಗನವಾಡಿ ಶಿಕ್ಷಕಿ ಬಾಲಕನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮುಂದುವರಿಸಿದ್ದಾರೆ. ಘಟನೆ ಬಗ್ಗೆ ಪೋಷಕರಿಗೆ ಮಾಹಿತಿಯನ್ನೇ ನೀಡದೆ ಮಗುವನ್ನು ಮನೆಗೆ ಕಳುಹಿಸಿದ್ದಾರೆ. ಮನೆಗೆ ಬಂದ ಬಳಿಕ ಮಗು ನಿರಂತರವಾಗಿ ಅಳುತ್ತಿದ್ದುದನ್ನು ಗಮನಿಸಿದ ತಾಯಿ, ಏನಾಯಿತು ಎಂದು ಪರಿಶೀಲಿಸಿದಾಗ ಗಾಯವಾಗಿರುವುದು ಗೊತ್ತಾಗಿದೆ. ಕೂಡಲೇ ಅವರು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಕೂಲಂಕುಷವಾಗಿ ಪರಿಶೀಲಿಸಿದ ವೈದ್ಯರು 6 ಹೊಲಿಗೆ ಹಾಕಿದ್ದಾರೆ. ಸದ್ಯ ಮಗು ಅಪಾಯದಿಂದ ಪಾರಾಗಿದೆ.
ಸ್ಥಳೀಯರ ಆಕ್ರೋಶ
ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಮಕ್ಕಳ ಸುರಕ್ಷತೆಯನ್ನು ಗಾಳಿಗೆ ತೂರಿದ ಶಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಪೋಷಕರನ್ನು ಚಿಂತೆಗೆ ದೂಡಿದ್ದಂತು ಸತ್ಯ. ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾದ ಸ್ಥಳದಲ್ಲೇ ಇಂತಹ ಘಟನೆ ಸಂಭವಿಸಿರುವುದರಿಂದ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಮಕ್ಕಳ ಸುರಕ್ಷತೆಯನ್ನು ಗಾಳಿಗೆ ತೂರಿದ ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಗುವಿನ ಮುಖಕ್ಕೆ ಕಾಸಿದ ಚಾಕುವಿನಿಂದ ಬರೆ ಎಳೆದ ಅಂಗನವಾಡಿ ಸಹಾಯಕಿ
ಮಗುವಿನ ಮುಖಕ್ಕೆ ಕಾಸಿದ ಚಾಕುವಿನಿಂದ ಬರೆ ಎಳೆದ ಅಂಗನವಾಡಿ ಸಹಾಯಕಿ
ಕೆಲವು ತಿಂಗಳ ಹಿಂದೆ ಅಂಗನವಾಡಿ ಸಹಾಯಕಿಯೊಬ್ಬಳು ಮಗುವಿನ ಮುಖಕ್ಕೆ ಕಾಸಿದ ಚಾಕುವಿನಿಂದ ಬರೆ ಎಳೆದ ಘಟನೆ ಶಿವಮೊಗ್ಗದಲ್ಲಿ ನಡೆದಿತ್ತು. ಮಕ್ಕಳ ಜಗಳವನ್ನು ಬಿಡಿಸಲು ಹೋಗಿ ಅಂಗನವಾಡಿ ಸಹಾಯಕಿ ಒಬ್ಬಳು ಬೆಂಕಿಯಲ್ಲಿ ಕಾಸಿದ ಚಾಕುವಿನಿಂದ ಮಗುವಿನ ಗಲ್ಲಕ್ಕೆ ಬರೆ ಎಳೆದಿದ್ದಳು. ಇಂಥದೊಂದು ಬರ್ಬರ ಕೃತ್ಯ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿ ನಡೆದಿತ್ತು. ಚಿಕ್ಕಸವಿ ಗ್ರಾಮದ ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರೂವರೆ ವರ್ಷದ ಮಗು ಯೋಧ ಮೂರ್ತಿ, ಬರೆಗೆ ತುತ್ತಾದ ಮಗು.