ಚಿಕ್ಕಮಗಳೂರು: ಅಂಚೆ ಮತಗಳ (Postal votes) ಮರು ಮತ ಎಣಿಕೆ (Recount of votes) ಕಾಂಗ್ರೆಸ್ (congress) ಗೆ ಬಹುದೊಡ್ಡ ಶಾಕ್ ನೀಡಿರುವ ಘಟನೆ ಚಿಕ್ಕಮಗಳೂರು ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ (Sringeri Assembly Constituency) ನಡೆದಿದೆ. 2023ರ ಅಂಚೆ ಮತಗಳಲ್ಲಿ ಗೊಂದಲ ಕಂಡು ಬಂದಿದ್ದರಿಂದ ಮರು ಮತ ಎಣಿಕೆಗೆ ಹೈಕೋರ್ಟ್ (High court) ಆದೇಶ ಮಾಡಿತ್ತು. ಮೊದಲ ಬಾರಿಯ ಮತ ಎಣಿಕೆ ವೇಳೆ ಕಾಂಗ್ರೆಸ್ ವಿಜಯ ಸಾಧಿಸಿತ್ತು. ಈ ವೇಳೆ ಗೊಂದಲ ಉಂಟಾಗಿದ್ದರಿಂದ ಮರು ಮತ ಎಣಿಕೆ ಮಾಡಲಾಗಿದ್ದು, ಈ ವೇಳೆ ಅದು ಭಾರಿ ಹಿನ್ನಡೆ ಅನುಭವಿಸಿದೆ. 2023ರ ಮೇ 13 ರಂದು ನಡೆದಿದ್ದ ಮತ ಎಣಿಕೆ ವೇಳೆ ಸಿಂಧು ಎಂದು ಪರಿಗಣಿಸಲಾಗಿದ್ದ ಮತಗಳಲ್ಲಿ ಡಬ್ಬಲ್ ಟಿಕ್ ಕಂಡು ಬಂದಿದ್ದು, ಈ ಕಾರಣದಿಂದಾಗಿ ಅವುಗಳನ್ನು ತಿರಸ್ಕೃತಗೊಳಿಸಲಾಗಿದೆ. ಆದ್ದರಿಂದ ಶಾಸಕ ಟಿ.ಡಿ. ರಾಜೇಗೌಡ (MLA T.D. Rajegowda) ಅವರು ಭಾರಿ ಹಿನ್ನಡೆ ಅನುಭವಿಸಿದರು.
ಚಿಕ್ಕಮಗಳೂರು ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಎಣಿಕೆ ಕಾರ್ಯವನ್ನು ಶನಿವಾರ ನಡೆಸಲಾಯಿತು. ಇದರಲ್ಲಿ ಶಾಸಕ ಟಿ.ಡಿ. ರಾಜೇಗೌಡ ಅವರು ಹಿನ್ನಡೆ ಅನುಭವಿಸಿದರು. ಸುಮಾರು 255 ಮತಗಳಲ್ಲಿ ಡಬ್ಬಲ್ ಟಿಕ್ ಕಾಣಿಸಿಕೊಂಡಿದ್ದು, ಅವುಗಳನ್ನು ತಿರಸ್ಕೃತಗೊಳಿಸಲಾಗಿದೆ. ಕಾಂಗ್ರೆಸ್ ಗೆ ಹಿನ್ನಡೆಯಾಗಿರುವುದರಿಂದ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಈಗ ಗೆಲ್ಲುವ ವಿಶ್ವಾಸ ಮೂಡಿದೆ.
Chinthamani News: ಕಾರ್ಮಿಕರ 8 ಗಂಟೆ ಕೆಲಸದ ಹಕ್ಕಿಗಾಗಿ ನಡೆದ ಹೋರಾಟದ ಇತಿಹಾಸ ಸ್ಮರಿಸಿದ ಮೊಹಮ್ಮದ್ ಬೇಗ್
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಗೊಂದಲದ ಕುರಿತಾಗಿ ಮಾಜಿ ಶಾಸಕ ಡಿ.ಎನ್. ಜೀವರಾಜ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಹೈಕೋರ್ಟ್, ಅಂಚೆ ಮತಗಳ ಮರು ಎಣಿಕೆ ನಡೆಸುವಂತೆ ಆದೇಶ ನೀಡಿತ್ತು. ಮೊದಲು ಹೈಕೋರ್ಟ್ ಏಪ್ರಿಲ್ 6 ರಂದು ಅಂಚೆ ಮತಗಳ ಮರು ಎಣಿಕೆ ಮಾಡಲು ಆದೇಶ ನೀಡಿತ್ತು. ಆದರೆ ಬಳಿಕ ಅದಕ್ಕೆ ಎರಡು ವಾರಗಳ ಮಧ್ಯಂತರ ತಡೆ ನೀಡಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತ್ತು. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಯಾರೂ ಕೂಡ ಮೇಲ್ಮನವಿ ಸಲ್ಲಿಸದ ಕಾರಣ ಹೈಕೋರ್ಟ್‌ನ ಆದೇಶ ಬಳಿಕ ಜಾರಿಗೊಳಿಸಲಾಯಿತು.
ಹೈಕೋರ್ಟ್ ಆದೇಶದಂತೆ ಅಂಚೆ ಮತಗಳ ಮರು ಎಣಿಕೆಯಲ್ಲಿ ಶಾಸಕ ಟಿ.ಡಿ. ರಾಜೇಗೌಡ ಅವರು ಹಿನ್ನಡೆ ಅನುಭವಿಸಿದರು. ಶನಿವಾರ ಮೊದಲ ಹಂತದಲ್ಲಿ ನಡೆದ ಅಂಚೆ ಮತಗಳ ಮರು ಮತಎಣಿಕೆ ವೇಳೆ ಅವರು ವಿಜಯ ಸಾಧಿಸಿದರು. ಆದರೆ ಮತ ಏಣಿಕೆಯಲ್ಲಿ ಭಾರೀ ಗೊಂದಲ ಉಂಟಾಗಿದ್ದರಿಂದ ಸಂಜೆ ಏಳು ಗಂಟೆಯ ಬಳಿಕ ಮತ್ತೆ ಮತಗಳ ಮರು ಎಣಿಕೆ ಮಾಡಲಾಗಿದೆ. ಈ ವೇಳೆ 255 ಮತಗಳು ತಿರಸ್ಕೃತಗೊಂಡಿವೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆ ವೇಳೆ ಒಟ್ಟು 1,822 ಅಂಚೆ ಮತಗಳು ಚಲಾವಣೆಯಾಗಿದ್ದು, ಅವುಗಳಲ್ಲಿ 279 ಅಂಚೆ ಮತಗಳನ್ನು ತಿರಸ್ಕರಿಸಲಾಗಿತ್ತು. ದೊಡ್ಡ ಪ್ರಮಾಣದ ಅಂಚೆ ಮತಗಳ ತಿರಸ್ಕಾರವೇ ವಿವಾದಕ್ಕೆ ಕಾರಣವಾಗಿತ್ತು. ಈಗ ಇದೇ ಅಂಚೆ ಮತಗಳ ಮರು ಪರಿಶೀಲನೆ ನಡೆಸಲಾಗಿದೆ. ಈ ಹಿಂದೆ 569 ಮತಗಳನ್ನು ಪಡೆದಿದ್ದ ರಾಜೇಗೌಡ ಅವರಿಗೆ ಸಿಕ್ಕಿರುವ ಮತಗಳಲ್ಲಿ 255 ಮತಗಳು ಮರು ಎಣಿಕೆ ವೇಳೆ ತಿರಸ್ಕೃತಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಬಂದಿದ್ದ 692 ಮತಗಳಲ್ಲಿ ಕೇವಲ 2 ಮತಗಳು ತಿರಸ್ಕೃತವಾಗಿವೆ. ಇದು ಈಗ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಲ್ಲಿ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ.
ಮತಗಳ ಮರು ಎಣಿಕೆ ವೇಳೆಯಲ್ಲಿ ದೊಡ್ಡ ವ್ಯತ್ಯಾಸ ಕಂಡು ಬಂದಿರುವುದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಕಾಂಗ್ರೆಸ್ ನಾಯಕರು ಶಾಸಕ ರಾಜೇಗೌಡ ಅವರೊಂದಿಗೆ ಮುಂಜಾನೆ 4 ಗಂಟೆಯವರೆಗೂ ಅಲ್ಲೇ ಉಳಿದುಕೊಂಡಿದ್ದರು.
ಮತಗಳ ತಿದ್ದುಪಡಿ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳಿ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಮತ್ತು ಚುನಾವಣಾಧಿಕಾರಿ ವೇದಮೂರ್ತಿ ವಿರುದ್ಧ ದೂರು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಚುನಾವಣಾ ಅಧಿಕಾರಿ, ಹೈಕೋರ್ಟ್ ಆದೇಶದಂತೆ ಮತಗಳ ಮರು ಎಣಿಕೆ ನಡೆದಿದೆ. ಹ್ಯಾಂಡ್ ಬುಕ್ ನಿಯಮಗಳ ಆಧಾರದಲ್ಲೇ ಮತಗಳ ಸಿಂಧು ಮತ್ತು ಅಸಿಂಧುವನ್ನು ಗುರುತಿಸಲಾಗಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.