Chikkamagaluru: ಬೆಂಗಳೂರಿನಲ್ಲಿ ಮಗ, ದುಬೈನಲ್ಲಿ ಮಗಳು; ಪತಿಯ ಕೊಳೆತ ಶವದೊಂದಿಗೆ 10 ದಿನ ಕಳೆದ ಪತ್ನಿ
77 ವರ್ಷದ ಸಿರಿಲ್ ಮೋನಿಸ್ ಅವರು ವಯೋಸಹಜ ಅನಾರೋಗ್ಯದಿಂದ ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು. ಆದರೆ ಮನೆಯಲ್ಲಿದ್ದ ಮಾನಸಿಕ ಅಸ್ವಸ್ಥ ಪತ್ನಿಗೆ ತನ್ನ ಪತಿ ಮೃತಪಟ್ಟಿದ್ದಾರೆ ಎಂಬ ಅರಿವೇ ಬಂದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪತಿ ಬದುಕಿದ್ದಾರೆ, ಮಲಗಿದ್ದಾರೆಂದೇ ಭಾವಿಸಿ ಪತ್ನಿ ಪತಿಯ ಶವದ ಪಕ್ಕದಲ್ಲೇ 10 ದಿನ ಕಳೆದಿದ್ದಾರೆ.
ಮೃತ ಸಿರಿಲ್ ಮೋನಿಸ್ -
ಚಿಕ್ಕಮಗಳೂರು, ಏಪ್ರಿಲ್ 9: ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಕೊಟ್ಟಿಗೆಹಾರದಲ್ಲಿ (Kottigehara) ಹೃದಯ ಕಲಕುವ, ವಿಲಕ್ಷಣ ಘಟನೆಯೊಂದು ನಡೆದಿದೆ. ಅನಾರೋಗ್ಯದಿಂದ ಮಲಗಿದ್ದಲ್ಲೇ ಮೃತಪಟ್ಟ ಪತಿಯ ಶವದದೊಂದಿಗೆ ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು ಬರೋಬ್ಬರಿ 10 ದಿನಗಳ ಕಾಲ ಕಳೆದಿದ್ದಾರೆ. ಪತಿ ಸತ್ತಿರುವುದೇ ಪತ್ನಿಗೆ ತಿಳಿದಿಲ್ಲ! ಮಕ್ಕಳು ದೂರದಲ್ಲಿದ್ದು, ಅವರಿಗೂ ಈ ವಿಚಾರ ತಿಳಿದಿಲ್ಲ.
77 ವರ್ಷದ ಸಿರಿಲ್ ಮೋನಿಸ್ ಅವರು ವಯೋಸಹಜ ಅನಾರೋಗ್ಯದಿಂದ ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು. ಆದರೆ ಮನೆಯಲ್ಲಿದ್ದ ಮಾನಸಿಕ ಅಸ್ವಸ್ಥ ಪತ್ನಿಗೆ ತನ್ನ ಪತಿ ಮೃತಪಟ್ಟಿದ್ದಾರೆ ಎಂಬ ಅರಿವೇ ಬಂದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪತಿ ಬದುಕಿದ್ದಾರೆ, ಮಲಗಿದ್ದಾರೆಂದೇ ಭಾವಿಸಿ ಪತ್ನಿ ಪತಿಯ ಶವದ ಪಕ್ಕದಲ್ಲೇ 10 ದಿನ ಕಳೆದಿದ್ದಾರೆ.
ಮೃತ ಮೋನಿಸ್ ಅವರ ಮಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗ ನಿತ್ಯ ತಾಯಿಗೆ ಫೋನ್ ಮಾಡಿ ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದನಂತೆ. ಆದರೆ ಪ್ರತಿ ಸಲ ಮಗ ಫೋನ್ ಮಾಡಿ ಅಪ್ಪನ ಬಗ್ಗೆ ವಿಚಾರಿಸಿದಾಗ ಮಾನಸಿಕ ಅಸ್ವಸ್ಥ ತಾಯಿ ಮಾತ್ರ 'ಅಪ್ಪ ಚೆನ್ನಾಗಿದ್ದಾರೆ, ಮಲಗಿದ್ದಾರೆ' ಎಂದೇ ಹೇಳುತ್ತಿದ್ದಳಂತೆ. ಇದರಿಂದ ಮಗನಿಗೂ ಅಪ್ಪ ಮೃತಪಟ್ಟಿರುವ ಬಗ್ಗೆ ತಿಳಿದಿಲ್ಲ.
ಕಿಡ್ನ್ಯಾಪ್ ಪ್ರಕರಣ ಬಯಲಿಗೆಳೆದ ರಸ್ತೆ ಅಪಘಾತ; ಮೂವರು ಅಪಹರಣಕಾರರು ಸಾವು: ಮಕ್ಕಳು ಸೇರಿ ಮೂವರ ರಕ್ಷಣೆ
ಹತ್ತು ದಿನಗಳು ಕಳೆದಿದ್ದರಿಂದ ಮೋನಿಸ್ ಮೃತದೇಹ ಸಂಪೂರ್ಣ ಕೊಳೆತು ಹುಳ ಹಿಡಿದಿತ್ತು. ಆ ಮನೆಯಿಂದ ವಿಪರೀತ ವಾಸನೆ ಬರಲಾರಂಭಿಸಿದಾಗ ಸಂಶಯಗೊಂಡ ಅಕ್ಕಪಕ್ಕದ ನಿವಾಸಿಗಳು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ನೋಡಿದಾಗ ಬೀಭತ್ಸ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.
ಪತಿಯ ಶವ ಮುಟ್ಟಲು ಬಿಡದ ಪತ್ನಿ
'ನನ್ನ ಗಂಡ ನನಗೆ ಬೇಕು, ಅವರನ್ನು ಎಲ್ಲಿಗೂ ಕೊಂಡೊಯ್ಯಬೇಡಿ' ಎಂದು ಸತ್ತ ಪತಿಯ ಶವವನ್ನು ಯಾರೂ ಮುಟ್ಟಲು ಬಿಡದಂತೆ ಪತ್ನಿ ಹಟ ಹಿಡಿದಿದ್ದಾಳೆ. ನನ್ನ ಪತಿ ಆರಾಮ ಇದ್ದಾರೆ, ಏನೂ ಆಗಿಲ್ಲ ಅನ್ನುವ ಭಾವನೆಯಲ್ಲಿರುವ ಆಕೆಯ ಮಾನಸಿಕ ಸ್ಥಿತಿ ಮನಕಲುಕುವಂತಿದೆ. ಶವವು ಸಂಪೂರ್ಣವಾಗಿ ಕೊಳೆತು ಹುಳು ಹಿಡಿದು ಕೆಟ್ಟ ವಾಸನೆ ಬರುತ್ತಿದ್ದು, ಸಮಾಜ ಸೇವಕ ಆರೀಫ್ ಅವರು ಮುಂದೆ ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲು ನೆರವಾದರು.
Belagavi news: ಪತ್ನಿಯ ಆತ್ಮಹತ್ಯೆ ಸುದ್ದಿ ತಿಳಿದು ಧಾವಿಸಿ ಬರುವಾಗ ಆಕ್ಸಿಡೆಂಟ್, ಪತಿಯೂ ಸಾವು!
ಹದಿನೈದು ದಿನಗಳ ಹಿಂದಷ್ಟೇ ಮನೆಗೆ ಬಂದು ಹೋಗಿದ್ದ ಮಗ ಕೆಲವು ದಿನಗಳ ಕಾಲ ಅಪ್ಪನ ಯೋಗಕ್ಷೇಮ ನೋಡಿಕೊಂಡು ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದ. ಅಲ್ಲಿಂದ ಕಾಲ್ ಮಾಡಿದಾಗ 'ಅಪ್ಪ ಆರಾಮಿದ್ದಾರೆ' ಎನ್ನುವ ತಾಯಿಯ ಮಾತು ಕೇಳಿ ಮತ್ತೆ ಬಂದಿರಲಿಲ್ಲ. ಆದರೆ ಇದೀಗ ಅಪ್ಪನ ಸಾವಿನ ಸುದ್ದಿ ಕೇಳಿ ಓಡಿಬಂದರೂ. ಅಪ್ಪನ ಶವ ಸಂಪೂರ್ಣ ಕೊಳೆತುಹೋಗಿದ್ದರಿಂದ ಅಪ್ಪನ ಮುಖ ನೋಡುವ ಭಾಗ್ಯವೂ ಸಿಗಲಿಲ್ಲ. ದುಬೈನಿಂದ ಮಗಳು ಕೂಡ ಬರಲಾಗಲಿಲ್ಲ. ಅಂತಿಮವಾಗಿ ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಮೋನಿಸ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.