ಚಿತ್ರದುರ್ಗ: ನಾಡು ಕಂಡ ಧೀಮಂತ ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಕ್ಕಾಗಿ ಹೋರಾಟ ಮಾಡಲಿಲ್ಲ. ಬದಲಿಗೆ ಜನರಿಗಾಗಿ ಹೋರಾಟ ಮಾಡಿದವರು. ತ್ಯಾಗ, ಪರಿಶ್ರಮ, ಹೋರಾಟಕ್ಕೆ ಮತ್ತೊಂದು ಹೆಸರೇ ಯಡಿಯೂರಪ್ಪ ಎಂದು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಧ್ಯಕ್ಷರಾದ ಬಿ.ವೈ.ವಿಜಯೇಂದ್ರ (BY Vijayendra) ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಬಿಎಸ್‌ವೈ ಅಭಿಮಾನೋತ್ಸವದಲ್ಲಿ (BSY Abhimanotsava) ಮಾತನಾಡಿದ ಅವರು, ಜನನಾಯಕರಾದ ಬಿಎಸ್‍ವೈ ಅವರು ನನ್ನಂತರ ಅನೇಕರಿಗೆ ಪ್ರೇರಣೆಯಾದವರು. ಇಂದು ಈ ಅಭಿಮಾನೋತ್ಸವಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಜನರು ಬಂದಿರುವುದು ನೋಡಿದರೆ ಬಿಎಸ್‍ವೈ ಅವರ ಮೇಲೆ ಎಂತಹ ಅಭಿಮಾನ ಇದೆ ಎಂಬುದು ತಿಳಿಯುತ್ತದೆ. ಇದೊಂದು ಐತಿಹಾಸಿಕ ಕ್ಷಣ. ಬಿಎಸ್‍ವೈ ಅವರ ಐವತ್ತು ವರ್ಷಗಳ ರಾಜಕೀಯ ಜೀವನಕ್ಕೆ ಗೌರವ ಸಲ್ಲಿಸುವ ಕ್ಷಣ ಎಂದು ಹೇಳಿದರು.

ಬಿಎಸ್‍ವೈ ಅವರ ಹೋರಾಟಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ತಮ್ಮ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದಾರೆ. ಜೀವನದುದ್ದಕ್ಕೂ ಯಾವುದೇ ಸವಾಲುಗಳು ಬಂದರೂ ಬೆನ್ನು ತೋರಿಸಿ ಓಡಿ ಹೋದವರಲ್ಲ. ಯಾವುದೇ ರಾಜಕೀಯ ಷಡ್ಯಂತ್ರ, ಸವಾಲು ಬಂದರೂ ಅದನ್ನು ಧೈರ್ಯವಾಗಿ ಎದುರಿಸಿದವರು ಎಂದು ವಿವರಿಸಿದರು.
ರಾಜ್ಯದ ಇತಿಹಾಸದಲ್ಲಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ರೈತರಿಗಾಗಿ ಬಜೆಟ್ ಮಂಡಿಸಿದವರು. ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಆರಂಭಿಸಿ ಹೆಣ್ಣು ಶಾಪ ಅಲ್ಲ ಎಂಬ ಭಾವನೆಯನ್ನು ಮೂಡಿಸಿದವರು. ರಾಜ್ಯದ ಎಲ್ಲ ಮಠಗಳಿಗೆ ಅನುದಾನ ನೀಡಿ ಆರ್ಥಿಕ ಶಕ್ತಿ ತುಂಬಿದವರು ಎಂದು ಹೇಳಿದರು. ಜನರ ಅಪೇಕ್ಷೆಯಂತೆ, ಪ್ರೀತಿ ವಿಶ್ವಾಸ ಉಳಿಸಿಕೊಂಡು ಕೆಲಸ ಮಾಡುತ್ತೇನೆ. ಕಡಿಮೆ ಅವಧಿಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ನಿಮ್ಮೆಲ್ಲರ ಸಹಕಾರ ಸದಾ ಇರಲಿ ಎಂದರು.
ಅಭಿಮಾನೋತ್ಸವವು ಅಪರೂಪದ ಕ್ಷಣ. ನಾಡಿನ ಹರಗುರು ಚರಮೂರ್ತಿಗಳು ಬಂದಿದ್ದಾರೆ. ಬಿಎಸ್‍ವೈ ಅವರು ಪ್ರಾಮಾಣಿಕವಾಗಿ ಬಡವರ ಕಣ್ಣೀರು ಒರೆಸುವ, ರೈತರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ನಾಡಿನ ಶೋಷಿತ ಸಮುದಾಯಗಳಿಗೆ ನೆಮ್ಮದಿ ನೀಡುವ ಕೆಲಸ ಮಾಡಿದವರು ಎಂದರು.

ಚುನಾವಣಾ ಚಾಣಕ್ಯ ಎಂದೇ ಹೆಸರು ಪಡೆದಿರುವ ಗೃಹ ಅಮಿತ್ ಶಾ ಜೀ ಅವರು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಿ, ಪುಣ್ಯಭೂಮಿ ಚಿತ್ರದುರ್ಗಕ್ಕೆ ಬಂದಿದ್ದಾರೆ. ಅವರಿಗೆ ನಾಡಿನ ಜನತೆಯ ಪರವಾಗಿ ಧನ್ಯವಾದಗಳು ಎಂದರು.
ಚಿತ್ರದುರ್ಗ ವೀರರ ಭೂಮಿ, ಮದಕರಿ ನಾಯಕ ಹಾಗೂ ಒನಕೆ ಓಬವ್ವನ ತ್ಯಾಗದ ಭೂಮಿ, ಅಲ್ಲದೇ ಸ್ವಾಮೀಜಿಗಳ ತಪೋಭೂಮಿ. ಇಂತಹ ನೆಲದಲ್ಲಿ ಅಭಿಮಾನೋತ್ಸವ ಆಚರಿಸಲು ನಾವು ತೀರ್ಮಾನಿಸಿದೆವು. ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಂತಹ ಸಮಾರಂಭದಲ್ಲಿ ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಸೇರಿದ್ದಾರೆ ಎಂದರು.