BSY Abhimanotsava: ಸೈಕಲ್ ಮೂಲಕ ಹಳ್ಳಿಗಳನ್ನು ಸುತ್ತಿ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ: ಬಿಎಸ್‌ವೈರನ್ನು ಹಾಡಿ ಹೊಗಳಿದ ಅಮಿತ್ ಶಾ
ಬಿ.ಎಸ್. ಯಡಿಯೂರಪ್ಪ ಅವರು ಬಸ್ ಸಿಗದಿದ್ದರೆ ಸೈಕಲ್‍ನಲ್ಲೇ ಹಳ್ಳಿಗೆ ತೆರಳಿ ಬಿಜೆಪಿಯನ್ನು ಸದೃಢವಾಗಿ ಕಟ್ಟಿದರು. ಸಾವಿರಾರು ಕಿ.ಮೀ. ಪಾದಯಾತ್ರೆ ಮಾಡಿ ರೈತರ ಪರವಾಗಿ ಹೋರಾಟ ಮಾಡಿದವರು. ಈ ಮೂಲಕ ರೈತ ನಾಯಕರಾಗಿ ಹೊರಹೊಮ್ಮಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸ್ವಾಮೀಜಿಗಳಿಂದ ಸ್ವಾಮೀಜಿ. -
ಚಿತ್ರದುರ್ಗ: ಬಿ.ಎಸ್. ಯಡಿಯೂರಪ್ಪ ಅವರ 5 ದಶಕಗಳ ಸಾರ್ವಜನಿಕ ಜೀವನ, ಹೋರಾಟವು ಯುವಜನತೆಗೆ ಮಾದರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (amit Shah) ಅವರು ತಿಳಿಸಿದ್ದಾರೆ. ಇಂದು ಇಲ್ಲಿ ಬಿಎಸ್‍ವೈ ಅವರ ರಾಜಕೀಯ ಜೀವನದ ಸುವರ್ಣೋತ್ಸವದ ಅಂಗವಾಗಿ ಏರ್ಪಡಿಸಿದ ಬಿಎಸ್‍ವೈ ಅಭಿಮಾನೋತ್ಸವದಲ್ಲಿ (BSY Abhimanotsava) ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಅಭಿನಂದಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ‘ಕೆಂದಾವರೆ- ಕಮಲ ಅರಳಿದ ಕಥೆ’, ‘ಸದನ ಶಿಕಾರಿ- ಯಡಿಯೂರಪ್ಪನವರ ಗುಡುಗಿನ ನುಡಿಗಳು’ ಪುಸ್ತಕಗಳನ್ನು ಅಮಿತ್ ಶಾ ಅವರು ಬಿಡುಗಡೆ ಮಾಡಿ ಮಾತನಾಡಿ, ಜನಸೇವೆ, ರೈತರ ಕಲ್ಯಾಣಕ್ಕಾಗಿ ಅವರು ದುಡಿದವರು ಎಂದು ತಿಳಿಸಿದರು. ಕರ್ನಾಟಕದ ಮುಖ್ಯಮಂತ್ರಿಯಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ ಎಂದರು.
ಇರುವ ರಸ್ತೆಯಲ್ಲೇ ಚಲಿಸುವವರು, ಹೊಸದಾಗಿ ಮಾರ್ಗದರ್ಶನ ಮಾಡುವವರು ಇರುತ್ತಾರೆ. ಯಡಿಯೂರಪ್ಪ ಅವರು ಮಾರ್ಗದರ್ಶನ ಮಾಡುವ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರು ಸಾಧಾರಣ ಕುಟುಂಬದಿಂದ ಬಂದವರು. ಅವರ ಇಚ್ಛಾಶಕ್ತಿ, ಸಂಘದ ಸಂಸ್ಕಾರ, ರಾಷ್ಟ್ರಭಕ್ತಿಯು ಅವರ ಜೀವನದುದ್ದಕ್ಕೂ ಮಾರ್ಗದರ್ಶನ ನೀಡಿದೆ ಎಂದು ತಿಳಿಸಿದರು.

ಬಸ್ ಸಿಗದಿದ್ದರೆ ಸೈಕಲ್‍ನಲ್ಲೇ ಹಳ್ಳಿಗೆ ತೆರಳಿ ಬಿಜೆಪಿಯನ್ನು ಸದೃಢವಾಗಿ ಕಟ್ಟಿದರು. ಸಾವಿರಾರು ಕಿಮೀ ಪಾದಯಾತ್ರೆ ಮಾಡಿ ರೈತರ ಪರವಾಗಿ ಹೋರಾಟ ಮಾಡಿದವರು. ಈ ಮೂಲಕ ರೈತ ನಾಯಕರಾಗಿ ಹೊರಹೊಮ್ಮಿದರು ಎಂದು ಹೇಳಿದರು. ಇದಕ್ಕಾಗಿ ಅವರು ಜೈಲುವಾಸ ಅನುಭವಿಸಬೇಕಾಯಿತು ಎಂದರು.
ಪಶ್ಚಿಮ ಬಂಗಾಲದಲ್ಲಿ ಇಂದು ಬಿಜೆಪಿಯ ಮುಖ್ಯಮಂತ್ರಿಯ ಪದಗ್ರಹಣ ನಡೆದಿದೆ. ಇದೇ ದಿನ ಯಡಿಯೂರಪ್ಪನವರ 50 ವರ್ಷಗಳ ರಾಜಕೀಯ ಸೇವೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಯುತ್ತಿದೆ. ವಿವೇಕಾನಂದರು, ಶ್ಯಾಮಪ್ರಸಾದ ಮುಖರ್ಜಿ ಮೊದಲಾದವರು ಹುಟ್ಟಿದ ನಾಡಿನಲ್ಲಿ ಹೊಸ ಶಕೆ ಆರಂಭವಾಗಿದೆ ಎಂದರು.

2014ರಿಂದ ಕರ್ನಾಟಕಕ್ಕೆ ಬರುತ್ತಿದ್ದೇನೆ. ಯಡಿಯೂರಪ್ಪ ಅವರ ವ್ಯಕ್ತಿತ್ವದಿಂದ ಎಲ್ಲ ಮತ- ಸಂಪ್ರದಾಯಗಳ ಸ್ವಾಮೀಜಿಗಳು ಇಲ್ಲಿದ್ದಾರೆ. ಅವರೆಲ್ಲರಿಗೂ ಪ್ರಣಾಮಗಳು ಎಂದು ಹೇಳಿದರು. ಯಡಿಯೂರಪ್ಪ ಅವರದು ಮಾದರಿ ಜೀವನ ಎಂದು ಮೆಚ್ಚುಗೆ ಸೂಚಿಸಿದರು. ಬಿಜೆಪಿ, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರ ದಾಖಲೆ ಬರೆಯುವಾಗ ದೊಡ್ಡ ನಾಯಕರಾಗಿ ಯಡಿಯೂರಪ್ಪ ಅವರು ಇರುತ್ತಾರೆ ಎಂದು ತಿಳಿಸಿದರು. ಸಮಾಜವನ್ನು ಪ್ರೀತಿಸುವ ಯಡಿಯೂರಪ್ಪ ಅವರು ಹಸಿರು ಶಾಲಿನೊಂದಿಗೆ ಕೃಷಿ ಬಜೆಟ್ ಮಂಡಿಸಿದವರು ಎಂದು ವಿವರಿಸಿದರು.
ಚಿತ್ರದುರ್ಗವು ರಾಜಾ ಮದಕರಿ ನಾಯಕರ ನಾಡು. ಅವರು ಹೈದರಾಲಿಯನ್ನು ಸೋಲಿಸಿ ಓಡಿಸಿದ್ದರು. ಈ ಭಾಗವನ್ನು ಸ್ವತಂತ್ರವಾಗಿ ಇಡುವುದರಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ವೀರ ನಾರಿ ಓಬವ್ವನ ಹೋರಾಟವು ಮಕ್ಕಳಿಗೆ ಪ್ರೇರಣೆ ನೀಡುವಂಥದ್ದು. ಅವರಿಗೆ ನಮನಗಳು ಎಂದರು. ಯಡಿಯೂರಪ್ಪ ಅವರು ಶತಾಯುವಾಗಲಿ ಎಂದು ಹಾರೈಸಿದರು.

ಅಭಿಮಾನೋತ್ಸವದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಅವರು ಜನಸೇವೆಯಲ್ಲಿ ಸಾರ್ಥಕ 50 ವರ್ಷದ ಸಾಧನೆಗಳ ವಿವರ ನೀಡಿದರು. ಬಿಎಸ್‍ವೈ ಅವರನ್ನು ಅಭಿನಂದಿಸಲಾಯಿತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಗಣ್ಯರು, ಸ್ವಾಮೀಜಿಗಳು ಭಾಗವಹಿಸಿದ್ದರು. ಅಮಿತ್ ಶಾ ಜೀ ಅವರನ್ನು ಗೌರವಿಸಲಾಯಿತು.

BSY Abhimanotsava: ಬಿಎಸ್‌ವೈ ಅಭಿಮಾನೋತ್ಸವ; ಮಾಜಿ ಸಿಎಂ ಕುರಿತು ಪ್ರಧಾನಿ ಮೋದಿಯಿಂದ ಬಂತು ವಿಶೇಷ ಸಂದೇಶ
ಚಿತ್ರದುರ್ಗದಲ್ಲಿ ವೀರ ಮದಕರಿ ನಾಯಕರ ಸ್ಮಾರಕ
ಇದು ಚಿತ್ರದುರ್ಗದ ವೀರ ಮದಕರಿ ನಾಯಕರು ಆಳಿದ ಜಾಗ. ಅವರ ಸ್ಮಾರಕವನ್ನು ಇದೇ ಮಣ್ಣಿನಲ್ಲಿ ಖಂಡಿತವಾಗಿಯೂ ನಿರ್ಮಿಸುತ್ತೇವೆ. ಮದಕರಿ ನಾಯಕರು ಹೈದರ್ ಅಲಿಯನ್ನು ಯುದ್ಧದಲ್ಲಿ ಸೋಲಿಸಿದ್ದರು. ಇಲ್ಲಿ ಪ್ರತಿ ಮಹಿಳೆಗೂ ಓಬವ್ವ ಪ್ರೇರಣೆ. ನಾನು ಮನಸಾರೆ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.