ಚಿತ್ರದುರ್ಗ, ನ.26: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ (POCSO case) ಸಂಬಂಧಿಸಿ ದಾಖಲಾಗಿದ್ದ ಮೊದಲ ಪೋಕ್ಸೊ ಕೇಸ್‌ನಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ (Murugha Mutt seer Case) ಬಿಗ್ ರಿಲೀಫ್ ಸಿಕ್ಕಿದೆ. ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಬುಧವಾರ ತೀರ್ಪು (court verdict) ಪ್ರಕಟಿಸಿದ್ದು, ಮೊದಲ ಪ್ರಕರಣದಲ್ಲಿ ಮುರುಘಾ ಶ್ರೀಗಳು ಖುಲಾಸೆಗೊಂಡಿದ್ದಾರೆ.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮುರುಘಾ ಶರಣರ ಪ್ರಕರಣದ ವಾದ-ಪ್ರತಿವಾದ ಪೂರ್ಣಗೊಂಡಿತ್ತು. ನ್ಯಾಯಮೂರ್ತಿ ಗಂಗಾಧರಪ್ಪ ಚೆನ್ನಬಸಪ್ಪ ಹಡಪದ ಇದೀಗ ತೀರ್ಪು ಪ್ರಕಟಿಸಿದ್ದಾರೆ.
ಎ1 ಮುರುಘಾ ಶ್ರೀ, ಎರಡನೇ ಆರೋಪಿ ರಶ್ಮಿ, ನಾಲ್ಕನೇ ಆರೋಪಿ, ಮಠದ ಮ್ಯಾನೇಜರ್ ಪರಮಶಿವಯ್ಯ ನಿರ್ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರೆ ಮುರುಘಾ ಶ್ರೀಗಳಿಗೆ ಕನಿಷ್ಠ 20 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇತ್ತು. ಮುರುಘಾ ಶರಣರ ವಿರುದ್ಧದ ಎರಡು ಪೋಕ್ಸೊ ಪ್ರಕರಣಗಳ ಪೈಕಿ ಮೊದಲ ಪ್ರಕರಣದ ಸುದೀರ್ಘ ವಿಚಾರಣೆ ನಡೆದಿದ್ದು, ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದೆ.
ಗುರುದ್ವಾರ ಪ್ರವೇಶಿಸಲು ಕ್ರಿಶ್ಚಿಯನ್ ಸೇನಾ ಅಧಿಕಾರಿ ನಿರಾಕರಣೆ; ತರಾಟೆಗೆ ತೆಗದುಕೊಂಡ ಸುಪ್ರೀಂ ಕೋರ್ಟ್!
ಈ ಹಿಂದಿನ ವಿಚಾರಣೆ ವೇಳೆ ಶ್ರೀಗಳ ಪರವಾಗಿ ಕೋರ್ಟ್ನಲ್ಲಿ ಖ್ಯಾತ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದರು. ಸ್ವಾಮೀಜಿ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ವಾದಿಸಿದ್ದರು.
ಏನಿದು ಪ್ರಕರಣ?
ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2022ರ ಆ.26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿತ್ತು. ಮುರುಘಾ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಂದ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎ1 ಮುರುಘಾಶ್ರೀ, ಎ2 ಲೇಡಿ ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ ವಿರುದ್ಧ ಕೇಸ್ ದಾಖಲಾಗಿತ್ತು.
ಅದೇ ವರ್ಷ ಆ.27ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆಯಾಗಿತ್ತು. 2022ರ ಸೆ.01 ರಂದು ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ ಬಂಧನಕ್ಕೊಳಗಾಗಿದ್ದರು. ಬಳಿಕ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮುರುಘಾಶ್ರೀ ವಿರುದ್ಧ 2022ರ ಅ.13 ರಂದು ಮಠದ ಅಡುಗೆ ಸಹಾಯಕಿಯಿಂದ ಮತ್ತೊಂದು ದೂರು ದಾಖಲಾಗಿತ್ತು. ಆ ಕೇಸಲ್ಲಿ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆಯೂ ಲೈಂಗಿಕ ಕಿರುಕುಳ ನೀಡಿರುವುದಾಗಿಯೂ ಎಂದು ಕೂಡ ಉಲ್ಲೇಖಿಸಿದ್ದರು.
ಪೋಕ್ಸೊ ಪ್ರಕರಣ; ಡಿ.2ಕ್ಕೆ ವಿಚಾರಣೆಗೆ ಬರುವಂತೆ ಯಡಿಯೂರಪ್ಪಗೆ ಕೋರ್ಟ್ ಸಮನ್ಸ್
ಈ ವೇಳೆ ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ, ಎ6 ಮುರುಘಾಶ್ರೀ ಸಹಾಯಕ ಮಹಾಲಿಂಗ, ಎ7 ಅಡುಗೆಭಟ್ಟ ಕರಿಬಸಪ್ಪ ವಿರುದ್ದ ಕೇಸ್ ದಾಖಲಾಗಿದ್ದು, ಸಂಪೂರ್ಣ ತನಿಖೆ ನಡೆಸಿದ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಹಾಗೂ ಚಿತ್ರದುರ್ಗ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದ ತಂಡವು 2022ರ ಅ.27 ರಂದು 694 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು. ಅದರಲ್ಲಿ 347 ಪುಟಗಳ ಎ ಮತ್ತು ಬಿ ಎಂದು ಎರಡು ಸೆಟ್ ಚಾರ್ಜ್ ಶೀಟ್ ಸಲ್ಲಿಸಿದ್ದರು.