ಬೆಂಗಳೂರು: ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ (Betting Case) ಬಂಧಿತರಾಗಿರುವ ಚಿತ್ರದುರ್ಗ (Chitradurga) ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ (Veerendra Pappi) ಭಾರಿ ಅಕ್ರಮ ಗಳಿಕೆಯ ಬಂಡವಾಳ ಬಯಲಾಗುತ್ತಲೇ ಇದೆ. ಮತ್ತೆ ದಾಳಿ ಎಸಗಿರುವ ಇಡಿ (ED raid) ಅಧಿಕಾರಿಗಳೇ ಇವರ ಸಂಗ್ರಹದ ಚಿನ್ನದ ಪ್ರಮಾಣ ಕಂಡು ಶಾಕ್ ಆಗಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 50 ಕೋಟಿ ರೂ. ಮೌಲ್ಯದ 44 ಕೆಜಿ ಚಿನ್ನವನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಆ ಮೂಲಕ ಈವರೆಗೆ 150 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಅಕ್ರಮ ಆನ್ಲೈನ್ ಗೇಮ್ ಕೇಸ್ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿನ್ನೆ ಹಲವೆಡೆ ಶೋಧ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬ್ಯಾಂಕ್ನ 2 ಲಾಕರ್ನಲ್ಲಿದ್ದ 50 ಕೋಟಿ ರೂ. ಮೌಲ್ಯದ 44 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಇದಕ್ಕೂ ಮುನ್ನ ಇತ್ತೀಚೆಗೆ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಮತ್ತು ಕ್ಯಾಸಿನೋಗಳಲ್ಲಿ ಅಕ್ರಮ ಹಣ ವರ್ಗಾವಣೆ ಸಂಶಯದಡಿ ವೀರೇಂದ್ರ ಪಪ್ಪಿ ಮೇಲೆ ಇಡಿ ದಾಳಿ ನಡೆದಿತ್ತು. ಸುಮಾರು 30 ಕಡೆ ನಡೆದ ದಾಳಿಯಲ್ಲಿ 12 ಕೋಟಿ ರೂ ನಗದು, 6 ಕೋಟಿ ರೂ ಮೌಲ್ಯದ ಚಿನ್ನ, ವಿದೇಶಿ ಕರೆನ್ಸಿ ಸೇರಿದಂತೆ ಕೋಟ್ಯಂತರ ಮೌಲ್ಯದ ಆಸ್ತಿ ವಶಕ್ಕೆ ಪಡೆದಿದ್ದರು. ಶಾಸಕರ ಒಡೆತನದಲ್ಲಿ ಗೋವಾದಲ್ಲಿ ನಡೆಯುತ್ತಿರುವ ಕ್ಯಾಸಿನೋ ಹಾಗೂ ಚಿತ್ರದುರ್ಗ ಹಾಗೂ ಬೆಂಗಳೂರು ಮತ್ತು ಸಿಕ್ಕಿಂನಲ್ಲಿರುವ ಮನೆಗಳಲ್ಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ: ED Raid: ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ 21.43 ಕೆಜಿ ಚಿನ್ನದ ಬಿಸ್ಕೆಟ್, 10.98 ಕೆಜಿ ಚಿನ್ನಲೇಪಿತ ಬೆಳ್ಳಿ ಗಟ್ಟಿ ಜಪ್ತಿ!
ಅಲ್ಲದೇ 5 ಐಷಾರಾಮಿ ವಾಹನಗಳನ್ನು ಕೂಡ ಇಡಿ ಅಧಿಕಾರಿಗಳು ಸೀಜ್ ಮಾಡಿದ್ದು, ಶಾಸಕ ಪಪ್ಪಿ ಅವರಿಗೆ ಸೇರಿದ 17 ಬ್ಯಾಂಕ್ ಅಕೌಂಟ್ ಹಾಗೂ 2 ಲಾಕರ್‌ಗಳನ್ನು ಸೀಜ್ ಮಾಡಿದ್ದಾರೆ. ಜೊತೆಗೆ ವೀರೇಂದ್ರ ಅವರ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 40.69 ಕೋಟಿ ರೂ. ಪತ್ತೆಯಾಗಿದ್ದು, 262 ಮ್ಯೂಲ್ ಖಾತೆಗಳಲ್ಲಿ ಒಟ್ಟು 14.46 ಕೋಟಿ ರೂ. ಸೇರಿದಂತೆ 55 ಕೋಟಿ ರೂ. ಹಣವನ್ನು ಇಡಿ ಫ್ರೀಜ್ ಮಾಡಿದೆ.
ಸಿಕ್ಕಿಂನ ಗ್ಯಾಂಗ್ಟಕ್ನಲ್ಲಿದ್ದ ಪಪ್ಪಿಯನ್ನು ಕೊಲ್ಕತ್ತಾ ಇಡಿ ಅಧಿಕಾರಿಗಳ ಮೂಲಕ ಬಂಧಿಸಿ, ತಡರಾತ್ರಿ ಬೆಂಗಳೂರಿಗೆ ಕರೆತಂದಿದ್ದರು. ಬಳಿಕ ಕೋರಮಂಗಲದ ಜಡ್ಜ್ ನಿವಾಸದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ 35ನೇ ಸಿಸಿಹೆಚ್ ಕೋರ್ಟ್ ನ್ಯಾಯಾಧೀಶರು 5 ದಿನಗಳ ಕಾಲ ವೀರೇಂದ್ರ ಪಪ್ಪಿಯನ್ನ ಇಡಿ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಆಗಸ್ಟ್ 28ರವರೆಗೆ ಇಡಿಯಿಂದ ವೀರೇಂದ್ರ ಪಪ್ಪಿ ವಿಚಾರಣೆ ನಡೆದಿತ್ತು. ಸದ್ಯ ವೀರೇಂದ್ರ ಪಪ್ಪಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆಗಸ್ಟ್ 28 ರಂದು ಪಪ್ಪಿ ಪರ ವಕೀಲರು ಬೇಲ್ಗೆ ಅರ್ಜಿ ಸಲ್ಲಿಸಿದ್ದರು.