ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉದ್ಯಮದಿಂದ ರಾಜಕೀಯ: ಸಚಿವ ಡಿ. ಸುಧಾಕರ್‌ ನಡೆದು ಬಂದ ದಾರಿ ಹೇಗಿತ್ತು?

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ (62) ಅವರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೊಣಕಾಲು ಆಪರೇಷನ್ ಸಂಬಂಧ ಸಚಿವ ಸುಧಾಕರ್​​ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.

ಸಂಗ್ರಹ ಚಿತ್ರ

ಬೆಂಗಳೂರು: ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ (62) ಅವರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೊಣಕಾಲು ಆಪರೇಷನ್ ಸಂಬಂಧ ಸಚಿವ ಸುಧಾಕರ್​​ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತ ಪಟ್ಟಿದ್ದಾರೆ.

ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಸುಧಾಕರ್ ಅವರು ಯಶಸ್ವಿ ಉದ್ಯಮಿಯಾಗಿದ್ದರು. ತಂದೆ ದಶರತಯ್ಯ ಅವರೊಂದಿಗೆ ಸೇರಿ ಡಿಸ್ಟಿಲ ಉದ್ಯಮ ಆರಂಭಿಸಿದ ಇವರು, ಅಬಕಾರಿ ಗುತ್ತಿಗೆಯ ಮೂಲಕ ದೊಡ್ಡ ಮಟ್ಟದ ವ್ಯವಹಾರ ನಡೆಸಿದ್ದರು. 'ಸೆವೆನ್ ಹಿಲ್ಸ್' ಹೆಸರಿನ ಸ್ವಂತ ಕಂಪನಿ ಹೊಂದಿದ್ದ ಇವರು, ಬೆಂಗಳೂರು ಮತ್ತು ನೆಲಮಂಗಲ ಭಾಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಯಶಸ್ಸು ಕಂಡಿದ್ದರು. ಚಳ್ಳಕೆರೆಯಲ್ಲಿ ಎರಡು ಆಯಿಲ್ ಮಿಲ್ ಹೊಂದಿರುವ ಇವರು, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದರು.

ರಾಜಕೀಯ ಪ್ರವೇಶ

2004ರಲ್ಲಿ ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಗೆಲುವು ಸಾಧಿಸಿದರು. ಕ್ಷೇತ್ರ ಮೀಸಲಾತಿ ಬದಲಾದಾಗ ಹಿರಿಯೂರಿಗೆ ಶಿಫ್ಟ್ ಆದ ಸುಧಾಕರ್, 2008ರಲ್ಲಿ ಅಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದರು. 2008ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಇವರು, ಸಮಾಜ ಕಲ್ಯಾಣ ಸಚಿವರಾದರು. ಬೆಗ್ಗರ್ಸ್ ಕಾಲೋನಿ ಹಗರಣದ ಆರೋಪ ಕೇಳಿಬಂದಾಗ ಖಾತೆ ಬದಲಾಗಿ ಮುಜರಾಯಿ ಸಚಿವರಾದರು. ಇದೇ ಅವಧಿಯಲ್ಲಿ ಸ್ಪೀಕ‌ರ್ ಕೆ.ಜಿ. ಬೋಪಯ್ಯ ಅವರಿಂದ ಅನರ್ಹಗೊಂಡ 11 ಶಾಸಕರಲ್ಲಿ ಸುಧಾಕರ್ ಕೂಡ ಒಬ್ಬರಾಗಿದ್ದರು. ನಂತರ ಹೈಕೋರ್ಟ್‌ನಲ್ಲಿ ಹೋರಾಡಿ ಶಾಸಕ ಸ್ಥಾನ ಉಳಿಸಿಕೊಂಡಿದ್ದರು. 2013ರಲ್ಲಿ ಕಾಂಗ್ರೆಸ್ ಸೇರಿ ಹಿರಿಯೂರಿನಲ್ಲಿ ಗೆದ್ದರು. 2018ರಲ್ಲಿ ಕೆ. ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸೋಲನುಭವಿಸಿದರೂ, 2023ರ ಚುನಾವಣೆಯಲ್ಲಿ ಮತ್ತೆ ಪೂರ್ಣಿಮಾ ಅವರನ್ನೇ ಸೋಲಿಸಿ ಶಾಸಕರಾಗಿ, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಮೃತರು ಪತ್ನಿ ಹರ್ಷಿಣಿ, ಮಗ ಸುಹಾಸ್ ಹಾಗೂ ಪುತ್ರಿ ಸ್ಫೂರ್ತಿ ಅವರನ್ನು ಅಗಲಿದ್ದಾರೆ. ಸುಧಾಕರ್‌ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ, ಆಪ್ತರೂ ಆಗಿದ್ದ ಡಿ. ಸುಧಾಕರ್ ಅವರು ಇಂದು ಕೊನೆಯುಸಿರೆಳೆದಿದ್ದು ಅತೀವ ದುಃಖವನ್ನುಂಟು ಮಾಡಿದೆ. ಭಗವಂತ ಡಿ. ಸುಧಾಕರ್ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಕಂಬನಿ ಮಿಡಿದಿದ್ದಾರೆ.

Vishakha Bhat Heggar

View all posts by this author