Mahakumbh mela stampede: ಕುಂಭಮೇಳ ಕಾಲ್ತುಳಿತ; ಚಿತ್ರದುರ್ಗದ ಮೂಲದ ನಾಗಾಸಾಧು ಸಾವು
Mahakumbh mela stampede: ಕಳೆದ 15 ದಿನಗಳ ಹಿಂದೆ ರೈಲಿನ ಮೂಲಕ ಕುಂಭಮೇಳಕ್ಕೆ ಪ್ರಯಾಣ ಬೆಳೆಸಿದ್ದ ನಾಗಾಸಾಧುವೊಬ್ಬರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಇದಕ್ಕೂ ಮೊದಲು ಬೆಳಗಾವಿಯ ನಾಲ್ವರು ಕುಂಭಮೇಳ ಕಾಲ್ತುಳಿತದಲ್ಲಿ ಮೃತಪಟ್ಟಿದ್ದರು.
ಚಿತ್ರದುರ್ಗ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಚಿತ್ರದುರ್ಗದ ಮೂಲದ ನಾಗಾಸಾಧು ಮೃತಪಟ್ಟಿರುವ ಘಟನೆ ನಡೆದಿದೆ. ಜಿಲ್ಲೆಯ ರಾಜನಾಥ್ ಮಹಾರಾಜ್ (49) ಮೃತರು. ಇವರು ಚಿತ್ರದುರ್ಗದ ಬಂಜಾರ ಗುರು ಪೀಠದಲ್ಲಿ ಕಳೆದ ಏಳೆಂಟು ವರ್ಷಗಳಿಂದ ನೆಲೆಸಿದ್ದರು. ಅಲ್ಲದೆ ಬಂಜಾರ ಗುರು ಪೀಠದ ಪೀಠಾಧಿಪತಿ ಸರ್ದಾರ್ ಸೇವಾಲಾಲ್ ಶ್ರೀ ಅವರ ಅತ್ಯಂತ ಒಡನಾಡಿಯಾಗಿದ್ದರು.
ಮೃತ ರಾಜನಾಥ್ ಮಹಾರಾಜರು ಕಳೆದ 15 ದಿನಗಳ ಹಿಂದೆ ರೈಲಿನ ಮೂಲಕ ಕುಂಭಮೇಳಕ್ಕೆ ಪ್ರಯಾಣ ಬೆಳೆಸಿದ್ದರು. ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ ರಾಜನಾಥ್ ಮಹಾರಾಜರು ಅಸುನೀಗಿದ್ದಾರೆ ಎನ್ನಲಾಗಿದೆ.
ಮೌನಿ ಅಮವಾಸ್ಯೆ ದಿನ ಸಂಭವಿಸುದ ಭೀಕರ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ವರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಕಾಲ್ತುಳಿತ ಘಟನೆಯಲ್ಲಿ ಗಾಯಗೊಂಡಿದ್ದ ಚಿತ್ರದುರ್ಗ ನಾಗಾಸಾಧು ಕೂಡ ಕೊನೆಯುಸಿರೆಳೆದಿದ್ದಾರೆ.
ನಾಗಾಸಾಧು ಪಾರ್ಥಿವ ಶರೀರ ಕಳುಹಿಸಲು ಪ್ರಯಾಗ್ ರಾಜ್ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದ್ದು, ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುವುದಾಗಿ ಚಿತ್ರದುರ್ಗ ಸೇವಾಲಾಲ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
Maha Kumbh stampede: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ; 30ಜನ ಬಲಿ; 60 ಮಂದಿಗೆ ಗಾಯ
ಬೆಳಗಾವಿ ಮೂಲದ ತಾಯಿ-ಮಗಳು ಸೇರಿ ನಾಲ್ವರ ಸಾವು
ಬೆಳಗಾವಿ : ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಜ.29ರಂದು ನಡೆದ ಕಾಲ್ತುಳಿತ ದುರಂತದಲ್ಲಿ (Mahakumbh Mela Stampede) ಬೆಳಗಾವಿ ಮೂಲದ ನಾಲ್ವರು ಮೃತಪಟ್ಟಿದ್ದರು. ನಗರದ ವಡಗಾವಿ ನಿವಾಸಿಗಳಾದ ತಾಯಿ-ಮಗಳಾದ ಜ್ಯೋತಿ ಹತ್ತರವಾಠ (50) ಹಾಗೂ ಮೇಘಾ ಹತ್ತರವಾಠ, ಶೆಟ್ಟಿ ಗಲ್ಲಿಯ ಅರುಣ್ ಕೋರ್ಪಡೆ, ಶಿವಾಜಿನಗರ ನಿವಾಸಿ ಮಹಾದೇವಿ ಬಾವನೂರ ಮೃತ ದುರ್ದೈವಿಗಳು.
ಕುಂಭಮೇಳ ಕಾಲ್ತುಳಿತ ದುರ್ಘಟನೆಯಲ್ಲಿ ಬೆಳಗಾವಿ ಮೂಲದ ಹತ್ತಾರು ಜನ ಕಾಣೆಯಾಗಿದ್ದರು. ಗಾಯಾಳುಗಳ ಪೈಕಿ ಜಿಲ್ಲೆಯ ನಾಲ್ವರು ಮೃತಪಟ್ಟಿದ್ದರು. ಮೌನಿ ಅಮಾವಾಸ್ಯೆ ಹಿನ್ನೆಲೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಕೋಟ್ಯಂತರ ಜನ ತೆರಳಿದ್ದರು. ಮುಂಜಾನೆ ನದಿಯಲ್ಲಿ ಸ್ನಾನ ಮಾಡುವಾಗ ಕಾಲ್ತುಳಿತ ಸಂಭವಿಸಿ ಹಲವರು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದರು.
ಬೆಳಗಾವಿಯಿಂದ ಸುಮಾರ 60 ಜನ ಕುಂಭಮೇಳಕ್ಕೆ ತೆರಳಿದ್ದರು. ಸಾಯಿರಥ ಟ್ರಾವೆಲ್ಸ್ ಮೂಲಕ ಇವರೆಲ್ಲಾ ಕುಂಭಮೇಳಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ, ಕಾಲ್ತುಳಿತದಲ್ಲಿ ತಾಯಿ-ಮಗಳಾದ ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಠ ಸೇರಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.