ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಮೇಟಿಕುರ್ಕೆ ಬಳಿ ಶುಕ್ರವಾರ ಭೀಕರ ಅಪಘಾತ (Chitradurga Accident) ನಡೆದಿದ್ದು, ಕಾರು ಪಲ್ಟಿಯಾಗಿ ಮಗು ಸೇರಿ ಮೂವರು ಮೃತಪಟ್ಟಿದ್ದಾರೆ. ಯಾದಗಿರಿ ಮೂಲದ ಮಲ್ಲಮ್ಮ(26), ಸರೋಜಮ್ಮ(25) ಮತ್ತು ಪುಟ್ಟ ಮಗು ಮೃತರು. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ್ ಮತ್ತು ಸಿಪಿಐ ಗುಡ್ಡಪ್ಪ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ
ಶಿವಮೊಗ್ಗ: ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಪುತ್ರಿಯನ್ನು ಮಚ್ಚಿನಿಂದ ಕೊಲೆ (Murder case) ಮಾಡಿ ತಾಯಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ (Self harming) ಮಾಡಿಕೊಂಡಿದ್ದಳೆ. ಘಟನೆ ಶಿವಮೊಗ್ಗದಲ್ಲಿ (Shivamogga news) ನಡೆದಿದೆ. ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಯ ಕ್ವಾರ್ಟರ್ಸ್‌ನಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದಾಗ ಈ ಮಹಿಳೆಯ ಪತಿ ಡ್ಯೂಟಿಗೆ ತೆರಳಿದ್ದರು.
36 ವರ್ಷದ ಶ್ರುತಿ ಕೃತ್ಯ ಎಸಗಿದಾಕೆ. ಪುತ್ರಿ ಪೂರ್ವಿಕಳನ್ನು (11) ಮಚ್ಚಿನಿಂದ ಕೊಚ್ಚಿ ಕೊಂದ ಬಳಿಕ ಶ್ರುತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವಮೊಗ್ಗದ ಶರಾವತಿ ನಗರದಲ್ಲಿ ಜಿಲ್ಲಾ ಆಸ್ಪತ್ರೆ ಕ್ವಾರ್ಟರ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಪತಿ ರಾಮಣ್ಣ ಕೆಲಸಕ್ಕೆ ತೆರಳಿದ್ದಾಗ ಪುತ್ರಿಯನ್ನು ಕೊಂದು ಶ್ರುತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡ್ಯೂಟಿ ಮುಗಿಸಿ ರಾಮಣ್ಣ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಶ್ರುತಿ ಮಾನಸಿಕ ಅಸ್ವಸ್ಥಳಾಗಿ ಕೃತ್ಯ ಎಸಗಿದ್ದಾಳೆ ಎಂದು ತರ್ಕಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಿಳೆಯ ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್, ಇಬ್ಬರ ವಿರುದ್ಧ ಎಫ್‌ಐಆರ್
ಬೆಂಗಳೂರು: ಮಹಿಳೆಯ ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್ (Blackmail Case) ಮಾಡಿ ಲಕ್ಷಾಂತರ ವಸೂಲಿ ಮಾಡಿದ ಇಬ್ಬರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರೌಡಿ ಅರಸಯ್ಯನ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿರುವ ಶೂಟ್ ಗಿರಿ ಹಾಗೂ ಸ್ವರೂಪ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
2022ರಲ್ಲಿ ಸ್ವರೂಪ್‌ಗೆ ಫೇಸ್‌ಬುಕ್‌ನಲ್ಲಿ ಮಹಿಳೆ ಪರಿಚಯವಾಗಿದ್ದಳು. ನಂತರ ಮಹಿಳೆ ಬಳಿ ಸ್ವರೂಪ್, ಕಷ್ಟ ಎಂದು ಹೇಳಿಕೊಂಡು 4.42 ಲಕ್ಷ ರೂ. ಹಣ ಪಡೆದಿದ್ದ. ಮಹಿಳೆ ಹಣ ವಾಪಸ್ ಕೇಳಿದಾಗ ಆಕೆಯ ಖಾಸಗಿ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ನಿರಂತರ ಬೆದರಿಕೆ ಹಾಕಿದ್ದರಿಂದ ಮಹಿಳೆ ತನ್ನ ಚಿನ್ನಾಭರಣ ಮಾರಿ, ಮತ್ತೆ 4.2 ಲಕ್ಷ ರೂ. ಹೆಚ್ಚುವರಿ ಹಣ ನೀಡಿದ್ದರು. ಹೀಗೆ ಒಟ್ಟು 8.62 ಲಕ್ಷ ರೂ.ಗಳನ್ನು ಮಹಿಳೆಯಿಂದ ವಸೂಲಿ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ |Crime News: ಅತ್ಯಾಚಾರದ ಆರೋಪ ಹೊರಿಸಿದ ಗೆಳತಿ- ಮನನೊಂದು ಯುವಕ ಆತ್ಮಹತ್ಯೆಗೆ ಶರಣು
ನೊಂದ ಮಹಿಳೆ ಪೊಲೀಸ್ ಠಾಣೆಗೆ ದೂರು ಕೊಡಲು ಮುಂದಾದಾಗ ಶೂಟ್ ಗಿರಿ ಹಣ ಕೊಡುವುದಾಗಿ ಮಹಿಳೆಯನ್ನು ತಡೆದಿದ್ದ. ಬಳಿಕ ಹಣ ಕೊಡದೇ, ಸ್ವರೂಪ್ ನಮ್ಮ ಹುಡುಗ ಅವನ ತಂಟೆಗೆ ಬಂದರೆ ಸರಿ ಇರಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.