BJP's Jan Akrosh Yatra: ಬೆದರು ಬೊಂಬೆ ರೀತಿ ಜಾತಿ ಗಣತಿ ಬಳಕೆ; ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಕಿಡಿ
BJP's Jan Akrosh Yatra: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗ್ರಾಮ ದೇವಿ ದೇವಸ್ಥಾನದ ಬಳಿ ಕಾಂಗ್ರೆಸ್ ವಿರೋಧಿ ಜನಾಕ್ರೋಶ ಯಾತ್ರೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಚಾಲನೆ ನೀಡಿದರು. ಭ್ರಷ್ಟಾಚಾರ, ಬೆಲೆ ಏರಿಕೆ, ಮುಸ್ಲಿಂ ಮೀಸಲಾತಿ, ಪರಿಶಿಷ್ಟ ಹಾಗೂ ಹಿಂದುಳಿದ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಹಿನ್ನಡೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದೆ.


ಕಾರವಾರ: ಸಿಎಂ ಕುರ್ಚಿ ಯಾವಾಗ ಅಲ್ಲಾಡುತ್ತದೆಯೋ ಆಗ ಜಾತಿ ಜನಗಣತಿ ಬಗ್ಗೆ ಸಿದ್ದರಾಮಯ್ಯ ಅವರಿಗೆ ನೆನಪಾಗುತ್ತದೆ. ಯಾವಾಗ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಾರೋ ಆಗ ನೆನಪಾಗುತ್ತದೆ. ಜಾತಿ ಗಣತಿಯನ್ನು ಬೆದರು ಬೊಂಬೆ ತರ ಸಿದ್ದರಾಮಯ್ಯ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ. ಸಿಎಂಗೆ ಈ ಸಮುದಾಯಕ್ಕೆ ನ್ಯಾಯ ಕೊಡಬೇಕು ಎನ್ನುವ ಪ್ರಾಮಾಣಿಕ ಕಾಳಜಿ ಇಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇದ್ರ ಕಿಡಿಕಾರಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗ್ರಾಮ ದೇವಿ ದೇವಸ್ಥಾನದ ಬಳಿ ಕಾಂಗ್ರೆಸ್ ವಿರೋಧಿ ಜನಾಕ್ರೋಶ ಯಾತ್ರೆಗೆ ( BJP's Jan Akrosh Yatra) ಶುಕ್ರವಾರ ಚಾಲನೆ ನೀಡಿ, ಅವರು ಮಾತನಾಡಿದ್ದಾರೆ.
ವಿಷಯ ಡೈವರ್ಟ್ ಮಾಡಲು ಸರ್ಕಾರ ಜಾತಿ ಗಣತಿ ಬಳಕೆ ಮಾಡಿಕೊಂಡಿದೆ. ಇದು ಬೆಲೆ ಏರಿಕೆ ಸರ್ಕಾರ, ಹಿಂದುಗಳನ್ನ ಅವಮಾನ ಮಾಡಿರುವ ಸರ್ಕಾರ. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಈ ಸರ್ಕಾರ ಅನ್ಯಾಯ ಮಾಡಿದೆ. ಅದಕ್ಕಾಗಿ ಜನಾಕ್ರೋಶ ಯಾತ್ರೆ ಮಾಡಲಾಗುತ್ತಿದೆ. ನಮ್ಮ ಹೋರಾಟದ ಎಫೆಕ್ಟ್ ಕಾಂಗ್ರೆಸ್‌ಗೆ ತಟ್ಟಿದೆ. ಅದಕ್ಕಾಗಿ ಕೇಂದ್ರದ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕೆ ನಾವು ತಕ್ಕ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ಇವರು ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದರು.ಅದು ರಾಜಕೀಯ ಪ್ರೇರಿತ ಆರೋಪ ಮಾತ್ರ ಆಗಿತ್ತು. ಕರ್ನಾಟಕ ಈಗಿನ ಸರ್ಕಾರ ದೇಶದಲ್ಲಿ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದೆ. ಇದನ್ನು ಸಿಎಂ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ. ಗುತ್ತಿಗೆದಾರರು ಸರ್ಕಾರದ ಕಮಿಷನ್ ದಂಧೆ ವಿರುದ್ಧ ಧ್ವನಿ ಎತ್ತಿದ್ದಾರೆ. ಪೊಲೀಸ್ ಇಲಾಖೆಗೆ ಈವರೆಗೆ 1ನೇ ತಾರೀಖು ಸಂಬಳ ಆಗುತ್ತಿತ್ತು. ಈಗ 8ನೇ ತಾರೀಖು ಬಂದರೂ ಸಂಬಳ ಹಾಕಲು ಆಗುತ್ತಿಲ್ಲ. ರಾಜ್ಯ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಅದಕ್ಕಾಗಿ ಬೆಲೆ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | Tumkur News: ಭವಿಷ್ಯದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಅಗ್ರಸ್ಥಾನ ಸಿಗಲಿದೆ: ಡಾ. ಜಿ.ಪರಮೇಶ್ವರ್
ಸ್ಥಳೀಯ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಗೈರು
ಬಿಜೆಪಿಯೊಂದಿಗೆ ಹಲವು ದಿನಗಳಿಂದ ಅಂತರ ಕಾಯ್ದುಕೊಂಡಿರುವ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಜನಾಕ್ರೋಶ ಯಾತ್ರೆಗೆ ಗೈರಾಗಿದ್ದರು. ಉಳಿದಂತೆ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.