CM Siddaramaiah: ತಿಪ್ಪೇಸ್ವಾಮಿಯವರು ಜನಪರ ವಿಚಾರಗಳಲ್ಲಿ ಮುಲಾಜು ನೋಡದೆ ಮಾತನಾಡುತ್ತಿದ್ದರು: ಸಿದ್ದರಾಮಯ್ಯ
CM Siddaramaiah: ಬೀ ಕಲ್ಚರ್ ಸಂಸ್ಥೆ ಕೊಂಡಜ್ಜಿ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಬಿ.ಎಂ.ತಿಪ್ಪೇಸ್ವಾಮಿ ಅವರ ‘ಮುಟ್ಟಿಸಿಕೊಂಡವರು’ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಿಪ್ಪೇಸ್ವಾಮಿಯವರು ಜನಪರ ವಿಚಾರಗಳಲ್ಲಿ ಮುಲಾಜು ನೋಡದೆ ಮಾತನಾಡುತ್ತಿದ್ದರು ಎಂದು ಸ್ಮರಿಸಿದರು.


ಬೆಂಗಳೂರು: ತಿಪ್ಪೇಸ್ವಾಮಿಯವರು ಜನಪರ ವಿಚಾರಗಳಲ್ಲಿ ಮುಲಾಜು ನೋಡದೆ ಮಾತನಾಡುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸ್ಮರಿಸಿದರು. ಬೀ ಕಲ್ಚರ್ ಸಂಸ್ಥೆ ಕೊಂಡಜ್ಜಿ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಬಿ.ಎಂ.ತಿಪ್ಪೇಸ್ವಾಮಿ ಅವರ ‘ಮುಟ್ಟಿಸಿಕೊಂಡವರು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸತ್ಯವನ್ನು ಅತ್ಯಂತ ನಿಷ್ಠುರವಾಗಿ ಹೇಳುತ್ತಿದ್ದರು. ಈ ಕಾರಣಕ್ಕಾಗಿ ಅವರು ಹಲವು ಬಾರಿ ಸತ್ಯ ಹೇಳಿ ಸಮಸ್ಯೆಗೆ ಸಿಕ್ಕಿಕೊಂಡರು ಎಂದು ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.
ಡಾ.ತಿಪ್ಪೇಸ್ವಾಮಿಯವರ ಜತೆ ನಾನೂ 1985 ರಿಂದ ಶಾಸಕನಾಗಿದ್ದೆ. ಸಚಿವರಾಗುವ ಎಲ್ಲಾ ಅರ್ಹತೆಗಳಿದ್ದರೂ ಶಾಸಕಾಂಗ ಪಕ್ಷದ ಉಪನಾಯಕರಾದರೇ ಹೊರತು ಸಚಿವರಾಗಲಿಲ್ಲ ಎನ್ನುವ ಬೇಸರ ನನಗೂ ಇದೆ ಎಂದು ಹೇಳಿದರು.
ಅಸ್ಪೃಶ್ಯತೆ ಸಮಾಜಕ್ಕೆ ಅಂಟಿದ ಶಾಪ. ಅಸ್ಪೃಶ್ಯ ಸಮಾಜದಿಂದ ಬಂದ ಅತ್ಯಂತ ಪ್ರತಿಭಾವಂತ ವೈದ್ಯರಾಗಿದ್ದರು. ಶಿಕ್ಷಣ ಅಸ್ಪೃಶ್ಯತೆ ಮತ್ತು ದಾಸ್ಯದಿಂದ ಮುಕ್ತಿ ದೊರಕಿಸಿಕೊಡುತ್ತದೆ ಎಂದರು.
ತಿಪ್ಪೇಸ್ವಾಮಿ ಅವರು ತಮ್ಮ ಸಮಾಜ, ಸಮುದಾಯದ ಪ್ರಗತಿ ಮತ್ತು ಅಭಿವೃದ್ಧಿಗೆ ಸದಾ ತುಡಿಯುತ್ತಿದ್ದರು ಎಂದು ತಿಳಿಸಿದರು. ಶೋಷಿತರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬಂದಾಗ ಮಾತ್ರ ಜಾತಿ ಪ್ರಭಾವ ಕಡಿಮೆ ಆಗುತ್ತದೆ. ಜಾತಿಗೆ ಚಲನೆ ಇಲ್ಲ. ವರ್ಗಕ್ಕೆ ಮಾತ್ರ ಚಲನೆ ಇದೆ ಎಂದರು.
ಈ ಸುದ್ದಿಯನ್ನೂ ಓದಿ | ISRO Recruitment 2025: ಇಸ್ರೋದಲ್ಲಿದೆ 320 ಹುದ್ದೆ; ಇಂದೇ ಅಪ್ಲೈ ಮಾಡಿ
ಸಮಾಜ ಸಮಾನ ಅವಕಾಶಗಳಿಂದ ಪರಿವರ್ತನೆ ಆದಾಗ ಮೀಸಲಾತಿ ಅಗತ್ಯವಿಲ್ಲ. ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಅಗತ್ಯ ಎನ್ನುವ ಅಂಬೇಡ್ಕರ್ ಅವರ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮರಿಸಿದರು.